ಉಡುಪಿಯ ತೆಂಕನಿಡಿಯೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಾ. ಸಾಮಗ ಮಾತನಾಡಿದರು. ವಿಶ್ವನಾಥ್​ ಕರಬ, ಹೇಮಂತಕುಮಾರ್​, ಯಶೋದಾ ಇದ್ದರು. 
ಉಡುಪಿ

ತುಳು ಭಾಷೆಗೆ ಕೇಂದ್ರ ನೀಡಲಿ ಸಾಂವಿಧಾನಿಕ ಮಾನ್ಯತೆ

* ತುಳುವೆರ್​ ಪತ್ರಿಕೆ ಸಂಪಾದಕ ಬಾ. ಸಾಮಗ ಒತ್ತಾಯ

* ತೆಂಕನಿಡಿಯೂರು ಗ್ರಾಪಂನಲ್ಲಿ ಸಮಾಲೋಚನಾ ಸಭೆ

ಉಡುಪಿ: ಪಂಚದ್ರಾವಿಡ ಭಾಷೆಗಳಲ್ಲೊಂದಾದ ತುಳು ಇದೀಗ ಹೆಚ್ಚು ಮಾನ್ಯತೆ ಪಡೆಯುತ್ತಿದ್ದು ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳನ್ನೊಳಗೊಂಡು ದೇಶದ ವಿವಿಧ ಕಡೆಗಳಲ್ಲಿ ತುಳು ಚಟುವಟಿಕೆ ನಡೆಯುತ್ತಿದೆ. ಆದರೂ ತುಳುವರ ಸಮಗ್ರ ಬೇಡಿಕೆಗಳು ಈಡೇರಬೇಕಾಗಿದ್ದರೆ ಸಂಘಟನೆ ಬಲಪಡಿಸಬೇಕು. ಕೇಂದ್ರ ಸರ್ಕಾರವು ತುಳುವಿಗೆ ಸಾಂವಿಧಾನಿಕ ಮಾನ್ಯತೆ ನೀಡಬೇಕು ಎಂದು ತುಳುವೆರ್​, ದೆಹಲಿ ಕನ್ನಡಿಗ ಪತ್ರಿಕೆಗಳ ಸಂಪಾದಕ ಬಾ. ಸಾಮಗ ಒತ್ತಾಯಿಸಿದರು.

ಉಡುಪಿಯ ತೆಂಕನಿಡಿಯೂರು ಗ್ರಾಪಂನ ಸಭಾಭವನದಲ್ಲಿ ಶ್ರೀ ಸಿದ್ಧಿ ಈವೆಂಟ್ಸ್​ ಸಂಸ್ಥೆ ಏರ್ಪಡಿಸಿದ್ದ ಸಮಾಲೋಚನಾ ಕಾರ್ಯಕ್ರಮದಲ್ಲಿ ಮಾತನಾಡಿ, ದಿಲ್ಲಿಯಲ್ಲಿ ತುಳುವೆರ್​ ಮಾಸ ಪತ್ರಿಕೆಯು ತುಳು ಪ್ರಗತಿಗೆ ಹಲವು ಹೋರಾಟ ನಡೆಸಿತ್ತಲ್ಲದೆ ಚೆನ್ನೈ, ದಿಲ್ಲಿ, ಮುಂಬೈ, ಹೈದರಾಬಾದ್​, ಪಣಜಿಗಳಲ್ಲಿ ಯಶಸ್ವಿಯಾಗಿ ಅಖಿಲ ಭಾರತ ತುಳು ಸಮ್ಮೇಳನ ನಡೆಸಿತ್ತೆಂದು ತಿಳಿಸಿದರು.

ತುಳು ವಿವಿ, ಸಂಗ್ರಹಾಲಯ ಅಗತ್ಯ

ದಿಲ್ಲಿ ಅಥವಾ ಮಂಗಳೂರಿನಲ್ಲಿ ತುಳು ಸಾಂಸ್ಕೃತಿಕ ಸಂಗ್ರಹಾಲಯ ಸ್ಥಾಪಿಸಬೇಕು. ತುಳು ವಿಶ್ವವಿದ್ಯಾಲಯ, ಪ್ರತ್ಯೇಕ ತುಳು ಟಿವಿ, ಆಕಾಶವಾಣಿ ಕೇಂದ್ರ ಆರಂಭಿಸಬೇಕು. ತುಳು ಸಿನಿಮಾ, ನಾಟಕ, ಯಕ್ಷಗಾನಗಳಿಗೆ ಸಬ್ಸಿಡಿ ನೀಡಬೇಕು, ಮಂಗಳೂರು-ಮುಂಬೈ ನಡುವೆ ಪ್ರಯಾಣಿಕರ ಹಡಗುಯಾನ ಆರಂಭಿಸಬೇಕು. ವಿಶ್ವದ ಪ್ರಮುಖ ನಗರಗಳಲ್ಲಿ ತುಳು ಉತ್ಸವ ನಡೆಸಬೇಕು ಎಂದು ಒತ್ತಾಯಿಸಿದರು.

ದಿವ್ಯಾ ಸತೀಶ್​ ಮತ್ತು ಸಿದ್ಧಿ ಎಸ್​. ಕಾಮತ್​ ಅವರು ಶ್ರೀಕೃಷ್ಣ ಜನ್ಮಾಷ್ಟಮಿ ಸಂದರ್ಭದಲ್ಲಿ ವೇಷಹಾಕಿ ಸಂಗ್ರಹಿಸಿದ್ದ 3 ಲಕ್ಷ ರೂಪಾಯಿಗೂ ಅಧಿಕ ಮೊತ್ತವನ್ನು ಬಡವಿದ್ಯಾಥಿಗಳಿಗೆ, ಅಂಗವಿಕಲರಿಗೆ, ಅರ್ಹ ಶಾಲೆಗಳಿಗೆ ವಿತರಿಸಲಾಯಿತು. ಮುಂದಿನ ವರ್ಷವೂ ವೇಷಹಾಕಿ ಇನಷ್ಟು ಹಣ ಸಂಗ್ರಹಿಸಿ ಅರ್ಹರಿಗೆ ನೀಡುವುದಾಗಿ ದಿವ್ಯಾ ಸತೀಶ್​ ತಿಳಿಸಿದರು.

ಸಮಾಜ ಸೇವಕ ರಕ್ಷಿತ್​, ಕಲಾವಿದ ಅಜಯ್​ ಅವರನ್ನು ಸನ್ಮಾನಿಸಲಾಯಿತು. ರಶ್ಮಿತಾ, ಸಿದ್ಧಿ, ನಿತೀಶ್​, ಸತೀಶ್​ ಕಾಮತ್​ ಉಪಸ್ಥಿತರಿದ್ದರು. ಗ್ರಾಪಂ ಆಡಳಿತಾಧಿಕಾರಿ ಹೇಮಂತಕುಮಾರ್​ ಅಧ್ಯಕ್ಷತೆ ವಹಿಸಿದ್ದರು.

ತೆಂಕನಿಡಿಯೂರ ಸರ್ಕಾರಿ ಪ.ಪೂ. ಕಾಲೇಜಿನ ಪ್ರಾಂಶುಪಾಲ ವಿಶ್ವನಾಥ್​ ಕರಬ, ಶಿಕ್ಷಕಿ ಯಶೋದಾ, ಪ್ರಭಾಕರ್​ ಕೋಟ್ಯಾನ್​ ಉಪಸ್ಥಿತರಿದ್ದರು. ಶರತ್​ ಶೆಟ್ಟಿ ಅಭಿನಂದಿಸಿದರು. ದಿವ್ಯಾ ಕಾರ್ಯಕ್ರಮ ನಿರ್ವಹಿಸಿದರು.