"ಅಂಗದ ಸಂಧಾನ" ಪ್ರಸಂಗ ಮರು ಮುದ್ರಣ ಪುಸ್ತಕವನ್ನು ಲೋಕಾರ್ಪಣೆಗೊಳಿಸಲಾಯಿತು.
ಉಡುಪಿ: ಯಕ್ಷಗಾನ ಕ್ಷೇತ್ರದಲ್ಲಿ ಅನೇಕ ಸಂಶೋಧನೆಗಳು ನಡೆದಿವೆ. ಆದರೆ ಕಲೆ ಅಥವಾ ಕಲಾವಿದರಿಗೆ ಇದರಿಂದ ಹೆಚ್ಚಿನ ಪ್ರಯೋಜನವಾಗಿಲ್ಲ. ಹೀಗಾಗಿ ಬಣ್ಣಗಾರಿಕೆ. ಆರ್ಥಿಕತೆ ಮುಂತಾದ ಬಹು ಆಯಾಮಗಳಲ್ಲಿ ಸಂಶೋಧನೆಗಳನ್ನು ಮಾಡಬೇಕು ಎಂದು ಹಿರಿಯ ಯಕ್ಷಗಾನ ಅರ್ಥಧಾರಿ ಡಾ. ಎಂ. ಪ್ರಭಾಕರ ಜೋಶಿ ಹೇಳಿದರು.
ಯಕ್ಷಗಾನ ಕಲಾರಂಗ ಸಭಾಂಗಣದಲ್ಲಿ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹುಕ್ಲುಮಕ್ಕಿ ಶ್ರೀ ಸಿದ್ಧಿವಿನಾಯಕ ದುರ್ಗಾಂಬಾ ಯಕ್ಷಗಾನ ಮಿತ್ರಮಂಡಳಿ ಶತಮಾನೋತ್ಸವದ ಸಂಭ್ರಮದಲ್ಲಿ ಶತಮಾನೋತ್ಸವ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ಪ್ರಸ್ತುತ ಬಡಗು ಮತ್ತು ತೆಂಕುತಿಟ್ಟಿನ 50 ಮೇಳಗಳು ಉಳಿದಿವೆ. ಸುಮಾರು 300ಕ್ಕೂ ಅಧಿಕ ಮೇಳಗಳು ಅಳಿದು ಹೋಗಿವೆ. ಅವುಗಳನ್ನು ದಾಖಲಿಸುವ ಕೆಲಸ ನಡೆಯಬೇಕು. ಮೇಳಗಳ ಇತಿಹಾಸ ಮುಂದಿನ ಜನಾಂಗಕ್ಕೆ ಸಿಗುವಂತಾಗಬೇಕು ಎಂದರು.
ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷರಾದ ಪ್ರೊ. ಎಂ.ಎಲ್. ಸಾಮಗ, ಡಾ. ಜಿ.ಎಲ್. ಹೆಗಡೆ, ಹಿರಿಯ ಯಕ್ಷಗಾನ ಪ್ರಸಂಗಕರ್ತ ಡಿ.ಎಸ್. ಶ್ರೀಧರ್ ಹಾಗೂ ಯಕ್ಷಗಾನ ಕಲಾರಂಗ ಸಂಸ್ಥೆಗೆ ಶತಮಾನೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮಲ್ವೆ ಶಂಕರನಾರಾಯಣ ಸಾಮಗರಿಂದ ರಚಿಸಲ್ಪಟ್ಟು, ಯಕ್ಷಗಾನ ಅರ್ಥಸಹಿತ ಪ್ರಸಿದ್ಧಿ ಪಡೆದಿರುವ "ಅಂಗದ ಸಂಧಾನ" ಪ್ರಸಂಗ ಮರು ಮುದ್ರಣ ಪುಸ್ತಕವನ್ನು ಲೋಕಾರ್ಪಣೆಗೊಳಿಸಲಾಯಿತು.
ಮುಖ್ಯ ಅತಿಥಿಗಳಾಗಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಹಾಗೂ ಉಡುಪಿ ಯಕ್ಷಗಾನ ಕಲಾರಂಗದ ನಾರಾಯಣ ಹೆಗಡೆ, ಮುರಳಿ ಕಡೆಕಾರ್ ಉಪಸ್ಥಿತರಿದ್ದರು. ಚಾರ್ರ್ಟಡ್ ಅಕೌಂಟೆಂಟ್ ಹುಕ್ಲುಮಕ್ಕಿಯ ಗೋಪಾಲಕೃಷ್ಣ ಹೆಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹುಕ್ಲುಮಕ್ಕಿ ಮೇಳ ಶತಮಾನೋತ್ಸವ ಸಮಿತಿ ಕಾರ್ಯಾಧ್ಯಕ್ಷ ಡಾ. ಶ್ರೀಪಾದ ಹೆಗಡೆ ಸ್ವಾಗತಿಸಿ, ದತ್ತಾತ್ರಿ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ "ಕರಂದಕಾಸುರ ಕಾಳಗ" ಪ್ರದರ್ಶನಗೊಂಡಿತು.