ಹೊಂಡಗಳಿಂದ ಕೂಡಿರುವ ತೊಕ್ಕೊಟ್ಟು ಭಟ್ನಗರ ರಸ್ತೆ. 
ಉಡುಪಿ

ಸ್ಮಶಾನ ರಸ್ತೆಗೆ ಅಭಿವೃದ್ಧಿ ಭಾಗ್ಯ

ಇಂದಿರಾ ಎನ್ ಕೆ
ವಿಜಯವಾಣಿ ಸುದ್ದಿಜಾಲ ಉಳ್ಳಾಲ
ಉಳ್ಳಾಲ ನಗರಸಭಾ ವ್ಯಾಪ್ತಿಯ ತೊಕ್ಕೊಟ್ಟು ಭಟ್ನಗರದಿಂದ ಚೆಂಬುಗುಡ್ಡೆ ಹಿಂದೂ ರುದ್ರಭೂಮಿಗೆ ಸಂಪರ್ಕ ಕಲ್ಪಿಸುವ ರಸ್ತೆ ಮತ್ತೊಮ್ಮೆ ಅಭಿವೃದ್ಧಿಗೆ ಸಜ್ಜಾಗಿದೆ. ಹಲವು ಸಮಯದಿಂದ ಹೊಂಡ-ಗುಂಡಿಗಳಿಂದ ಕೂಡಿದ್ದ ಈ ರಸ್ತೆಗೆ ಇದೀಗ ಮರು ಡಾಂಬರೀಕರಣ ಭಾಗ್ಯ ಒದಗಿಬಂದಿದೆ. ಆದರೆ ಈ ಭಾಗದ ಭೌಗೋಳಿಕ ಸ್ಥಿತಿಗತಿಗೆ ಡಾಂಬರಿಗಿಂತ ಕಾಂಕ್ರೀಟ್ ರಸ್ತೆಯೇ ಸೂಕ್ತ ಎಂಬುದು ಸ್ಥಳೀಯರ ವಾದ.

ಸಂಪರ್ಕದ ಕೊಂಡಿ ಈ ರಸ್ತೆ

ತೊಕ್ಕೊಟ್ಟು ಭಟ್ನಗರ ಜಂಕ್ಷನ್‌ನ ರಾಷ್ಟ್ರೀಯ ಹೆದ್ದಾರಿಯಿಂದ ಮಂಗಳೂರು ವಿಶ್ವವಿದ್ಯಾಲಯಕ್ಕೆ ಹೋಗುವ ರಾಜ್ಯ ಹೆದ್ದಾರಿಗೆ ಈ ರಸ್ತೆ ನೇರ ಸಂಪರ್ಕ ಕಲ್ಪಿಸುತ್ತದೆ. ಚೆಂಬುಗುಡ್ಡೆಯಲ್ಲಿರುವ ಅತ್ಯಂತ ಹಳೆಯ ರುದ್ರಭೂಮಿ ಹಾಗೂ ಮೂರು ವರ್ಷಗಳ ಹಿಂದೆ ನಿರ್ಮಾಣಗೊಂಡ ವಿದ್ಯುತ್ ಚಿತಾಗಾರಕ್ಕೆ ಇದೇ ರಸ್ತೆಯ ಮೂಲಕ ಸಾಗಬೇಕಿದೆ. ದೂರದ ಊರುಗಳಿಂದಲೂ ಸಂಸ್ಕಾರಕ್ಕಾಗಿ ಇಲ್ಲಿಗೆ ಮೃತದೇಹಗಳನ್ನು ತರಲಾಗುತ್ತದೆಯಾದರೂ, ರಸ್ತೆಯ ದುಃಸ್ಥಿತಿ ಸಂಕಷ್ಟ ತಂದೊಡ್ಡುತ್ತಿದೆ.

ಡಾಂಬರು ಬಾಳಿಕೆ ಅಸಾಧ್ಯ

ಈ ರಸ್ತೆ ತೀವ್ರ ಇಳಿಜಾರಿನಿಂದ ಕೂಡಿದೆ. ಮಳೆಗಾಲದಲ್ಲಿ ನೀರು ಹರಿಯಲು ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದ ಕಾರಣ, ನೀರು ರಸ್ತೆಯ ಮೇಲೆಯೇ ಹರಿಯುತ್ತದೆ. ಇದರಿಂದಾಗಿ ಡಾಂಬರು ಕಿತ್ತುಬಂದು ಪದೇ ಪದೆ ಹೊಂಡಗಳು ನಿರ್ಮಾಣವಾಗುವುದು ಇಲ್ಲಿ ಸಾಮಾನ್ಯವಾಗಿದೆ. ಕೇವಲ ಡಾಂಬರು ಹಾಕಿದರೆ ಮಳೆಗಾಲದಲ್ಲಿ ಮತ್ತೆ ರಸ್ತೆ ಹಾಳಾಗುವುದು ಖಚಿತ. ಹೀಗಾಗಿ ದೊಡ್ಡ ಮೊತ್ತದ ಅನುದಾನದಲ್ಲಿ ಕಾಂಕ್ರೀಟ್ ಕಾಮಗಾರಿ ಮತ್ತು ಚರಂಡಿ ನಿರ್ಮಿಸಿ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂಬುದು ಸಾರ್ವಜನಿಕರ ಆಗ್ರಹ.

ಪರ್ಯಾಯ ಮಾರ್ಗ

ತೊಕ್ಕೊಟ್ಟು ಜಂಕ್ಷನ್‌ನಲ್ಲಿ ಸಂಚಾರ ದಟ್ಟಣೆ ಉಂಟಾದಾಗ ದೇರಳಕಟ್ಟೆ ಭಾಗಕ್ಕೆ ಹೋಗುವವರು ಇದೇ ರಸ್ತೆಯನ್ನು ಅವಲಂಬಿಸಿದ್ದಾರೆ. ಅಲ್ಲದೆ, ಉಳ್ಳಾಲ ನಗರಸಭೆಯ ಬೃಹತ್ ನೀರಿನ ಟ್ಯಾಂಕ್ ಕೂಡ ಇದೇ ರಸ್ತೆಯಲ್ಲಿದ್ದು, ಭಾರಿ ವಾಹನಗಳ ಸಂಚಾರ ನಿರಂತರವಾಗಿರುತ್ತದೆ. ಚೆಂಬುಗುಡ್ಡೆ ಭಾಗದಲ್ಲಿ ರಸ್ತೆ ಬ್ಲಾಕ್ ಆದರೆ ತಲಪಾಡಿ, ಉಳ್ಳಾಲ ಹಾಗೂ ಕೇರಳಕ್ಕೆ ಸಾಗುವವರಿಗೆ ಇದು ಪ್ರಮುಖ ಪರ್ಯಾಯ ಮಾರ್ಗವಾಗಿದೆ.

ರಾಷ್ಟ್ರೀಯ ಹೆದ್ದಾರಿಯಿಂದ ಚೆಂಬುಗುಡ್ಡೆ ಸೋಮೇಶ್ವರ ಮುಖ್ಯರಸ್ತೆಗೆ ಸಂಪರ್ಕ ಹೊಂದಿರುವ ಈ ರಸ್ತೆಗೆ ನಾಲ್ಕು ವರ್ಷಗಳ ಹಿಂದೆ ಡಾಂಬರು ಹಾಕಲಾಗಿತ್ತು. ವಾಹನ ಸಂಚಾರ ಹೆಚ್ಚಾದ ಕಾರಣ ರಸ್ತೆ ಹಾಳಾಗಿದ್ದು, ಇದೀಗ ತಾತ್ಕಾಲಿಕವಾಗಿ ಮರು ಡಾಂಬರೀಕರಣ ಕಾಮಗಾರಿ ಕೈಗೊಳ್ಳಲಾಗುತ್ತಿದೆ.

ಈ ರಸ್ತೆ ಕೇವಲ ಒಂದು ಊರಿಗೆ ಸೀಮಿತವಾಗಿಲ್ಲ, ಕೊಣಾಜೆಯಿಂದ ತೊಕ್ಕೊಟ್ಟು ಭಾಗಕ್ಕೆ ಬರುವವರಿಗೆ ಇದು ಪರ್ಯಾಯ ರಸ್ತೆಯಾಗಿದೆ. ಬೃಹತ್ ವಾಹನಗಳ ಸಂಚಾರವೂ ಇಲ್ಲಿದೆ. ಸದ್ಯ ಸ್ಪೀಕರ್ ಅವರು ತಾತ್ಕಾಲಿಕ ನೆಲೆಯಲ್ಲಿ ಡಾಂಬರು ಕಾಮಗಾರಿಗೆ ಅನುದಾನ ನೀಡಿದ್ದು, ಮುಂದಿನ ದಿನಗಳಲ್ಲಿ ಶಾಶ್ವತ ಕಾಮಗಾರಿಯ ಭರವಸೆ ನೀಡಿದ್ದಾರೆ.