ಉಡುಪಿ: ಬೆಳಕಿನ ಹಬ್ಬ ದೀಪಾವಳಿ ಸಮೀಪಿಸುತ್ತಲಿದ್ದು, ಪರಿಸರ ಸ್ನೇಹಿ ಹಸಿರು ಪಟಾಕಿಯನ್ನು ಜಾಗೃತಿಯಿಂದ ಬಳಸಿ ಆಚರಣೆ ಮಾಡಬೇಕು. ಅವುಗಳ ಮಾರಾಟಕ್ಕೆ ಪರವಾನಗಿ ನೀಡುವಾಗ ಸುರಕ್ಷತಾ ದೃಷ್ಟಿಯಿಂದ ತಪ್ಪದೇ ನಿಯಮ ಪಾಲಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಸೂಚಿಸಿದರು.
ಉಡುಪಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ದೀಪಾವಳಿ ಹಬ್ಬದ ಸಂದರ್ಭದಲ್ಲಿ ತಾತ್ಕಾಲಿಕ ಸುಡುಮದ್ದು ಮಾರಾಟ ಮಳಿಗೆ ತೆರೆಯಲು ಅನುಮತಿ ನೀಡುವ ಕುರಿತ ಸಭೆಯಲ್ಲಿ ಮಾತನಾಡಿದರು.
ತಾತ್ಕಾಲಿಕ ಸುಡುಮದ್ದು ಮಾರಾಟ ಮಾಡುವವರು ಸಂಬಂಧಪಟ್ಟ ಇಲಾಖೆಗಳಿಂದ ನಿರಾಕ್ಷೇಪಣಾ ಪತ್ರ ಪಡೆದು, ಎಲ್ಲ ಮಾರ್ಗಸೂಚಿ ಪಾಲಿಸಿ ಯಾವುದೇ ಅನಾಹುತ ಆಗದಂತೆ ಸುರಕ್ಷತಾ ಕ್ರಮ ಅನುಸರಿಸಬೇಕು. ಜಿಲ್ಲಾ ವ್ಯಾಪ್ತಿಯಲ್ಲಿ ನಿಗದಿಪಡಿಸಿರುವ ತೆರೆದ ಪ್ರದೇಶಗಳಲ್ಲಿ ಪಟಾಕಿ ಮಾರಾಟದ 10×10 ವಿಸ್ತೀರ್ಣದ ಜಿಂಕ್ ಶೀಟ್ ಅಥವಾ ಅಗ್ನಿ ನಿರೋಧಕ ವಸ್ತುಗಳಿಂದ ಮಳಿಗೆ ನಿರ್ಮಿಸಬೇಕು. ಅವುಗಳನ್ನು ಹರಾಜಿನ ಮೂಲಕ ಹಂಚಿಕೆ ಮಾಡಬೇಕು ಎಂದರು.
ಪಟಾಕಿ ಮಾರಾಟ ಮಳಿಗೆಗಳಿಗೆ ಅಧಿಕಾರಿಗಳು ಆಗಾಗ ಭೇಟಿ ನೀಡಿ ಹಸಿರು ಪಟಾಕಿಗಳ ಮಾರಾಟ, ಸುರಕ್ಷತೆಗಳ ಕುರಿತು ಪರಿಶೀಲಿಸಬೇಕು. ಅಧಿಕೃತ ಸಾಗಾಟ, ಮಾರಾಟದ ಪರವಾನಗಿ ಪಡೆದವರಿಂದ ಮಾತ್ರ ಖರೀದಿಸಬೇಕು. ಅಕ್ರಮವಾಗಿ ಚಿಲ್ಲರೆ ಸುಡುಮದ್ದು ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ಈ ಬಗ್ಗೆಯೂ ಎಚ್ಚರ ವಹಿಸಬೇಕು. ಪಟಾಕಿ ಮಾರಾಟ ಮಳಿಗೆಗಳಲ್ಲಿ ಅಗ್ನಿನಂದಕ ಸುಸ್ಥಿತಿಯಲ್ಲಿಡಬೇಕು. ಅವಧಿ ಮುಗಿದ ನಂತರ ಮಳಿಗೆಯಲ್ಲಿ ಉಳಿದ ತ್ಯಾಜ್ಯವನ್ನು ಸುಡುಮದ್ದುಗಳಿಂದ ಬೇರ್ಪಡಿಸಿ ಮಾರಾಟಗಾರರೇ ತ್ಯಾಜ್ಯ ವಿಲೇವಾರಿ ಸಂಗ್ರಹಣಾ ಘಟಕಕ್ಕೆ ನೀಡಬೇಕು ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ಜಿಪಂ ಉಪ ಕಾರ್ಯದರ್ಶಿ ಎಸ್.ಎಸ್. ಕಾದ್ರೋಳ್ಳಿ, ಕಾರ್ಕಳ ವಿಭಾಗ ಸಹಾಯಕ ಪೊಲೀಸ್ ಅಧೀಕ್ಷಕಿ ಇಶಿತಾ ಗುಪ್ತಾ, ನಗರಸಭಾ ಆಯುಕ್ತ ಮಹಾಂತೇಶ ಹಂಗರಗಿ, ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು, ಪೊಲೀಸ್ ಇಲಾಖೆಯ ಅಧಿಕಾರಿಗಳು, ತಹಸೀಲ್ದಾರರು ಉಪಸ್ಥಿತರಿದ್ದರು.