ಆಲಂಕಾರು ಪೇಟೆಯಲ್ಲಿ ಕೆಟ್ಟು ಹೋಗಿರುವ ಸಿಸಿ ಕ್ಯಾಮರಾಗಳು.  
ಉಡುಪಿ

ಆಲಂಕಾರಿನಲ್ಲಿ ಸಿಸಿ ಕ್ಯಾಮರಾ ಸ್ತಬ್ಧ

ಇಂದಿರಾ ಎನ್ ಕೆ
ಪ್ರವೀಣ್‌ರಾಜ್ ಕೊಲ ಕಡಬ
ಕಡಬ ತಾಲೂಕಿನ ಪ್ರಮುಖ ಪಟ್ಟಣವಾಗಿರುವ ಆಲಂಕಾರು ಪೇಟೆ ಸಿಸಿ ಕ್ಯಾಮರಾ ಕಣ್ಗಾವಲಿನಿಂದ ವಂಚಿತವಾಗಿದ್ದು ಹಲವು ಅಹಿತಕರ ಘಟನೆಗಳಿಗೆ ಪೂರಕ ವಾತಾವರಣ ನಿರ್ಮಿಸಿಕೊಟ್ಟಿದೆ.
ಕೆಲವು ವರ್ಷಗಳ ಹಿಂದೆ ಶಾಂತಿಮೊಗರುವಿನಲ್ಲಿ ಕುಮಾರಧಾರಾ ನದಿಗೆ ನಿರ್ಮಿಸಿರುವ ಸೇತುವೆ ಸಂಚಾರಕ್ಕೆ ಮುಕ್ತವಾದ ಬಳಿಕ ಆಲಂಕಾರು ಪೇಟೆಯು ಕಡಬ ತಾಲೂಕು ಸೇರಿದಂತೆ ಅಕ್ಕಪಕ್ಕದ ತಾಲೂಕಿನ ಪ್ರಮುಖ ಪೇಟೆಗಳನ್ನು ಸಂಪರ್ಕಿಸುವ ಕೇಂದ್ರವಾಗಿ ಬದಲಾಯಿತು. ಇಂತಹ ಪೇಟೆಯ ಮೇಲೆ ನಿಗಾ ಇರಿಸುವುದಕ್ಕಾಗಿ ಆರು ವರ್ಷಗಳ ಹಿಂದೆ ಪೊಲೀಸ್ ಇಲಾಖೆ ಆಲಂಕಾರು ಪೇಟೆಯಲ್ಲಿ ನಾಲ್ಕು ಸಿಸಿ ಕ್ಯಾಮರಾಗಳನ್ನು ಅಳವಡಿಸಿ ಪೇಟೆಯನ್ನು ಸಿಸಿ ಕಣ್ಗಾವಲಿನಲ್ಲಿ ಇರಿಸಿತ್ತು. ಆದರೆ ಇದೀಗ ಸಿಸಿ ಕ್ಯಾಮರಾ ಸಮರ್ಪಕವಾಗಿ ಕಾರ್ಯ ನಿರ್ವಹಿಸದೆ ಕಳ್ಳರ ಪಾಲಿಗೆ ಸ್ವರ್ಗದಂತಾಗಿದೆ.
ಒಂದೇ ವರ್ಷದಲ್ಲಿ ಸ್ತಬ್ಧ: ಆಲಂಕಾರು ಪೇಟೆ ಕಡಬ ತಾಲೂಕಿನ ನೆಲ್ಯಾಡಿ, ಕೊಕ್ಕಡ, ಕಡಬ ಪಟ್ಟಣ ಸೇರಿದಂತೆ ಧರ್ಮಸ್ಥಳ, ಉಪ್ಪಿನಂಗಡಿ, ಪುತ್ತೂರು ಮುಂತಾದ ಪ್ರಮುಖ ಪೇಟೆಗಳ ಜತೆಗೆ ಕೇರಳ ರಾಜ್ಯ ಸಂಪರ್ಕಿಸುವ ರಸ್ತೆಯ ಪ್ರಮುಖ ಕೇಂದ್ರವಾಗಿ ಮಾರ್ಪಾಡಾಗಿದೆ. ಆರು ವರ್ಷದ ಹಿಂದೆ ಪೊಲೀಸ್ ಇಲಾಖೆ ಆಲಂಕಾರು ಪೇಟೆಯಲ್ಲಿ ಉಪ್ಪಿನಂಗಡಿ, ಸುಬ್ರಹ್ಮಣ್ಯ ರಸ್ತೆಯನ್ನು ಗುರಿಯಾಗಿರಿಸಿಕೊಂಡು ನಾಲ್ಕು ಕ್ಯಾಮರಾಗಳ ಸಿಸಿ ವ್ಯವಸ್ಥೆಯನ್ನು ಆಲಂಕಾರಿನಲ್ಲಿ ಅಳವಡಿಸಿ ಪೇಟೆಯ ಹಾಗುಹೋಗುಗಳ ಮೇಲೆ ತೀವ್ರ ನಿಗಾ ಇರಿಸಿತ್ತು. ಆದರೆ ಸಿಸಿ ವ್ಯವಸ್ಥೆ ಒಂದೇ ವರ್ಷದಲ್ಲಿ ಸಮರ್ಪಕ ನಿರ್ವಹಣೆ ಇಲ್ಲದೆ ಕೆಟ್ಟು ಹೋಗಿದ್ದು ದುರಸ್ತಿ ಮಾಡಲು ಸಂಬಂಧಪಟ್ಟವರು ಗಮನಕೊಟ್ಟಿಲ್ಲ. ಸಿಸಿಟಿವಿಗೆ ಅಳವಡಿಸಿದ ಬೆಲೆಬಾಳುವ ಗಣಕ ಯಂತ್ರ ಧೂಳು ಹಿಡಿಯುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಬೀದಿ ದೀಪಗಳು ಸಮರ್ಪಕವಾಗಿಲ್ಲ: ಸಿಸಿ ಕ್ಯಾಮರಾಗಳು ಕೆಟ್ಟು ಹೋಗಿದ್ದು ಜತೆಗೆ ಪೇಟೆಯಲ್ಲಿ ಅಳವಡಿಸಿರುವ ದಾರಿ ದೀಪಗಳು ಸಮರ್ಪಕವಾಗಿ ಬೆಳಗದಿರುವುದು ಕಳ್ಳರಿಗೆ ಪೂರಕ ವಾತಾವರಣ ನಿರ್ಮಿಸಿಕೊಟ್ಟಿದೆ. ಸಿಸಿ ಕ್ಯಾಮರಾ ಸ್ತಬ್ಧಗೊಂಡ ಬಳಿಕ ಹಲವು ಕಳವು ಪ್ರಕರಣಗಳು ನಡೆದರೂ ಇಲ್ಲಿಯವರೆಗೆ ಯಾವುದೇ ಪ್ರಕರಣ ಪತ್ತೆಯಾಗಿಲ್ಲ.
ಖಾಸಗಿಯವರಿಗೆ ಪೊಲೀಸರ ದುಂಬಾಲು
ಆಲಂಕಾರು ಪೇಟೆಯಲ್ಲಿ ಯಾವುದಾದರೂ ಕಳವು ಅಥವಾ ಅಹಿತಕರ ಘಟನೆ ನಡೆದಾಗ ಖಾಸಗಿ ಕಟ್ಟಡ ಅಥವಾ ಅಂಗಡಿಗಳಲ್ಲಿರುವ ಸಿಸಿ ಕ್ಯಾಮರಾಗಳ ವಿಡಿಯೋಗಾಗಿ ಪೊಲೀಸರು ದುಂಬಾಲು ಬೀಳುತ್ತಿದ್ದಾರೆ. ಇದೀಗ ಪೊಲೀಸರ ಉಪಟಳ ತಪ್ಪಿಸುವುದಕ್ಕಾಗಿ ಯಾವುದೇ ಅಂಗಡಿ ಮಾಲೀಕರು ಸಾರ್ವಜನಿಕ ರಸ್ತೆ ಕಾಣಿಸದೆ ಕೇವಲ ತಮ್ಮ ಅಂಗಡಿಗಳು ಮಾತ್ರ ಸೆರೆಯಾಗುವಂತೆ ಸಿಸಿ ಕ್ಯಾಮರಾಗಳನ್ನು ಅಳವಡಿಸುತ್ತಿದ್ದಾರೆ. ಇದು ಕಳ್ಳರ ಪಾಲಿಗೆ ಮತ್ತಷ್ಟು ಪೂರಕ ವಾತಾವರಣ ಕಲ್ಪಿಸಿದೆ.
ಮಾದಕ ವಸ್ತು ವ್ಯವಹಾರ ಅವ್ಯಾಹತ
ಆಲಂಕಾರು ಮೂಲಕ ಪುತ್ತೂರು ಸೇರಿದಂತೆ ಇನ್ನಿತರ ಪ್ರಮುಖ ನಗರಗಳಿಗೆ ಸಂಪರ್ಕಿಸುವ ರಸ್ತೆಯಲ್ಲಿರುವ ಶಾಂತಿಮೊಗರು ಸೇತುವೆಯ ಮೇಲೆ ಫೋಟೋ, ವೀಡಿಯೋ ಶೂಟಿಂಗ್‌ನ ಜತೆಗೆ ಬೈಕ್ ವೀಲಿಂಗ್ ಎಗ್ಗಿಲ್ಲದೆ ನಡೆಯುತ್ತಿದೆ. ತಡರಾತ್ರಿಯವರೆಗೆ ಸೇತುವೆ ಫುಟ್‌ಪಾತ್‌ನಲ್ಲಿ ಯುವಕರ ತಂಡ ಕುಳಿತು ಬೀಡಿ, ಸಿಗರೇಟ್ ಸೇದುತ್ತಾ ಮೋಜು ಮಸ್ತಿಯಲ್ಲಿರುತ್ತಾರೆ. ರಾತ್ರಿಯಾಗುತ್ತಿದ್ದಂತೆ ಮಾದಕ ವಸ್ತುಗಳ ವ್ಯಾಪಾರ ವಹಿವಾಟು ನಿರ್ಭೀತಿಯಿಂದ ನಡೆಯುತ್ತಿದೆ ಎನ್ನುವ ಆರೋಪವೂ ಇದೆ.

ಸಿಡಿಲಿನ ಆಘಾತದಿಂದಾಗಿ ಆಲಂಕಾರಿನಲ್ಲಿ ಇಲಾಖೆ ಅಳವಡಿಸಿದ ಸಿಸಿ ಕ್ಯಾಮರಾ ಕೆಟ್ಟು ಹೋಗಿವೆ. ಅದನ್ನು ದುರಸ್ತಿ ಮಾಡಲು ಅಸಾಧ್ಯ. ಇಲಾಖೆ ಜಿಲ್ಲೆಯ ಪ್ರಮುಖ ಪೇಟೆಗಳಿಗೆ ಸಿಸಿ ಕ್ಯಾಮರಾ ಅಳವಡಿಕೆ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ. ಕೆಟ್ಟು ಹೋಗಿರುವ ಸಿಸಿಗಳ ಜಾಗಕ್ಕೆ ನೂತನ ಕ್ಯಾಮರಾ ಅಳವಡಿಕೆಗೆ ಇಲಾಖೆ ಕ್ರಮ ಕೈಗೊಂಡಿದೆ. ಕೆಲವೇ ದಿನಗಳಲ್ಲಿ ಅಲಂಕಾರು ಪೇಟೆಯಲ್ಲಿ ಹೊಸ ಕ್ಯಾಮರಾ ಅಳವಡಿಸಲಾಗುವುದು.

— ಜಂಬೂರಾಜ್ ಮಹಾಜನ್, ಕಡಬ ಠಾಣಾ ಉಪನಿರೀಕ್ಷಕ

ಸಿಸಿ ಕ್ಯಾಮರಾ ಕೆಟ್ಟು ಹೋಗಿರುವುದರಿಂದ ಪೇಟೆಯ ವರ್ತಕರಿಗೆ ಸಾಕಷ್ಟು ಸಮಸ್ಯೆಯಾಗಿದೆ. ಕಳ್ಳತನದಂತಹ ಘಟನೆಗಳು ನಡೆದಾಗ ಕಳ್ಳರು ಯಾವ ದಾರಿಯಾಗಿ ಬಂದಿದ್ದಾರೆ, ಯಾವ ದಾರಿಯಿಂದ ಹೋಗಿದ್ದಾರೆ ಎಂಬ ಮಾಹಿತಿಯೂ ಲಭ್ಯವಾಗುವುದಿಲ್ಲ. ಈಗಾಗಲೇ ಹಲವು ಪ್ರಕರಣಗಳು ನಡೆದಿವೆ. ಯಾವುದೂ ಪತ್ತೆಯಾಗಿಲ್ಲ. ಸಿಸಿ ಕ್ಯಾಮರಾ ಬಗ್ಗೆ ಪೊಲೀಸರ ಗಮನಕ್ಕೆ ತಂದಿದ್ದೇವೆ.

— ಲಕ್ಷ್ಮೀನಾರಾಯಣ ಪ್ರಭು, ಆಲಂಕಾರು ವರ್ತಕರ ಸಂಘದ ಅಧ್ಯಕ್ಷ