ಕೊಯಿಲ ಗ್ರಾಮಪಂಚಾಯಿತಿ ಗ್ರಾಮಸಭೆಯಲ್ಲಿ ಕಾರ್ಯದರ್ಶಿ ಶಾರದಾ ಪಿ.ಎ. ಮಾತನಾಡಿದರು. ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಭರತ್ ಬಿ.ಎಂ, ಅಭಿವೃದ್ಧಿ ಅಧಿಕಾರಿ ಸಂದೇಶ್ ಮೊದಲಾದವರಿದ್ದರು.
ಕೊಯಿಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋಕುಲನಗರ ಎಂಬಲ್ಲಿ ರಾಜ್ಯ ಹೆದ್ದಾರಿ ಮಗ್ಗುಲಲ್ಲಿರುವ ಬಸ್ ನಿಲ್ದಾಣ ಸಮೀಪದ ವಾಣಿಜ್ಯ ಕಟ್ಟಡದಲ್ಲಿ ಮೀನು ಮತ್ತು ಕೋಳಿ ಅಂಗಡಿಗೆ ಗ್ರಾಪಂ ಅವಕಾಶ ನೀಡಿರುವುದು ಕೊಯಿಲ ಗ್ರಾಮಸಭೆಯಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವಾಯಿತು.
ಪಂಚಾಯಿತಿ ಸಭಾಂಗಣದಲ್ಲಿ ಜಿ.ಪಂ. ಇಂಜಿನಿಯರಿಂಗ್ ಇಲಾಖೆಯ ಪುತ್ತೂರು ವಿಭಾಗ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಭರತ್ ಬಿ.ಎಂ. ಅಧ್ಯಕ್ಷತೆಯಲ್ಲಿ ಗ್ರಾಮಸಭೆ ನಡೆಯಿತು. ವಿಷಯ ಪ್ರಸ್ತಾಪಿಸಿದ ಗ್ರಾಮಸ್ಥರು, ಜನರ ಆರೋಗ್ಯದ ದೃಷ್ಟಿಯಿಂದ ಇಲ್ಲಿ ಕೋಳಿ ಅಂಗಡಿಗೆ ಅವಕಾಶ ನೀಡಬಾರದು ಎಂದು ಪಟ್ಟು ಹಿಡಿದರು.
ಹಿಂದಿನ ಗ್ರಾಮ ಪಂಚಾಯಿತಿ ಆಡಳಿತ ಈ ಅಂಗಡಿಗೆ ಪರವಾನಗಿ ನೀಡಿತ್ತು. ಈ ಬಗ್ಗೆ ಗ್ರಾಮಸಭೆಯಲ್ಲಿ ಚರ್ಚೆ ನಡೆದು ಟೆಂಡರ್ ಕರೆಯಲಾಗಿತ್ತು. ಮೀನು ಮತ್ತು ಕೋಳಿ ಅಂಗಡಿಗಳನ್ನು ಟೆಂಡರ್‌ನಲ್ಲಿ ಪಡೆದಿರುವ ಮಾಲೀಕರು ಗ್ರಾಪಂಗೆ ಡೆಪಾಸಿಟ್ ಕೂಡಾ ಕಟ್ಟಿದ್ದಾರೆ. ಈಗ ಅಂಗಡಿ ಬದಲಾಯಿಸುವುದು ಸಾಧ್ಯವಿಲ್ಲ ಎಂದು ಅಭಿವೃದ್ಧಿ ಅಧಿಕಾರಿ ಸಂದೇಶ್ ಹೇಳುತ್ತಿದ್ದಂತೆ ಚರ್ಚೆ ಕಾವೇರಿತು.
ಆಟೋರಿಕ್ಷಾ ಚಾಲಕ ಸಂಘದ ಅಧ್ಯಕ್ಷ ಅಶ್ರಫ್, ಜಮಾಲ್, ಹನೀಫ್ ಮತ್ತಿತರರು ಮಾತನಾಡಿ, ಬಸ್ ಸ್ಟಾೃಂಡ್ ಪಕ್ಕದಲ್ಲಿಯೇ ಮಾಂಸದ ಅಂಗಡಿ ನಿರ್ಮಾಣ ಮಾಡುವುದು ಜನರ ಆರೋಗ್ಯದ ದೃಷ್ಟಿಯಿಂದ ಸರಿಯಲ್ಲ ಎಂಬುವುದು ಅಧಿಕಾರಿಯಾಗಿ ನಿಮಗೆ ಗೊತ್ತಿಲ್ಲವೇ? ಈ ಅಂಗಡಿಯನ್ನು ಮೀನು ಮತ್ತು ಕೋಳಿ ಮಾರಾಟಕ್ಕೆ ನೀಡದಂತೆ ಈ ಹಿಂದೆಯೇ ನಾವು ಆಕ್ಷೇಪಣೆ ಸಲ್ಲಿಸಿದ್ದೆವು. ಜನರ ತೀರ್ಮಾನಕ್ಕೆ ಬೆಲೆ ಇಲ್ಲವೇ? ಎಂದು ಪ್ರಶ್ನಿಸಿದರು.
ಪ್ರಕಾಶ್ ಕೊಯಿಲ, ಯದುಶ್ರೀ ಆನೆಗುಂಡಿ ಮತ್ತಿತರರು ಮಾತನಾಡಿ, ಈಗ ಅವಕಾಶ ಕೊಟ್ಟಾಗಿದೆ. ಆದರೆ ಜನರಿಗೆ ತೊಂದರೆಯಾಗುವುದು ಕಂಡಬಂದರೆ ಅಂಗಡಿಗಳನ್ನು ಬದಲಾಯಿಸಲು ಅವಕಾಶವಿದೆ ಎಂಬ ವಾದ ಮಂಡಿಸಿದರು. ಮುಂದೆ ಯಾವುದೇ ಕಾರಣಕ್ಕೂ ಇಲ್ಲಿ ಮಾಂಸದ ಅಂಗಡಿಗಳಿಗೆ ಅವಕಾಶ ನೀಡಬಾರದು. ಬೇರೆ ಅಂಗಡಿಗಳಿಗೆ ಕೊಡುವುದಕ್ಕೆ ನಮ್ಮ ಆಕ್ಷೇಪಣೆ ಇಲ್ಲ ಎಂದು ಸಾರ್ವಜನಿಕರು ಹೇಳಿದರು.
ರಸ್ತೆ ದುರಸ್ತಿ ಮಾಡಿ: ಮಸೀದಿ ಹಾಗೂ ಶ್ರೀಸದಾಶಿವ ದೇವಸ್ಥಾನದ ರಸ್ತೆ ಕಳೆದ ಹಲವು ವರ್ಷಗಳಿಂದ ದುರಸ್ತಿ ಕಾಣದೆ ಗುಂಡಿಗಳು ಬಿದ್ದು ಸಂಚಾರಕ್ಕೆ ಕಷ್ಟವಾಗಿದೆ. ಇಲ್ಲಿಗೆ ಶಾಲಾ ಬಸ್ ಕೂಡ ಬರುವುದಿಲ್ಲ. ಇತ್ತೀಚೆಗೆ ಈ ರಸ್ತೆಯಲ್ಲಿ ರಿಕ್ಷಾವೊಂದು ಮಗುಚಿಬಿದ್ದು ಎರಡು-ಮೂರು ಮಕ್ಕಳಿಗೆ ಗಾಯವಾಗಿದೆ. ಮಕ್ಕಳ ಜೀವಕ್ಕೆ ಅಪಾಯವಾಗಿದ್ದರೆ ಯಾರು ಹೊಣೆ? ಕಳೆದ ಗ್ರಾಮಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಗಿತ್ತು.
ಆದರೆ ಯಾವುದೇ ಪ್ರಯೋಜನವಾಗಿಲ್ಲ. ಮೊದಲು ಇದಕ್ಕೆ ಉತ್ತರ ನೀಡಿ ಇಲ್ಲದಿದ್ದರೆ ಸಭೆ ನಡೆಸಲು ಬಿಡುವುದಿಲ್ಲ ಎಂದು ಜುನೈದ್, ಸುಲೈಮಾನ್, ಬಿ.ಕೆ.ಬಶೀರ್, ನಾಸೀರ್ ಹೇಂತಾರು, ಸಿರಾಜ್ ಕಲಾಯಿ, ಸೆಲೀಕತ್ ಮತ್ತಿತರರು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಅಧಿಕಾರಿಗಳ ಮನವೊಲಿಕೆಗೆ ಗ್ರಾಮಸ್ಥರು ಜಗ್ಗಲಿಲ್ಲ.
ಕೊನೆಗೆ ಗ್ರಾಪಂ ಆಡಳಿತಾಧಿಕಾರಿಯಾಗಿರುವ ಕಾರ್ಯನಿರ್ವಾಹಕ ಇಂಜಿನಿಯರ್ ಭರತ್ ಬಿ.ಎಂ., ಸಭೆ ಮುಗಿದ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಅಂದಾಜುಪಟ್ಟಿ ತಯಾರಿಸಿ ಸರ್ಕಾರಕ್ಕೆ ಕಳುಹಿಸುವುದಾಗಿ ತಿಳಿಸಿ ಚರ್ಚೆಗೆ ತೆರೆ ಎಳೆದರು. ಮುರು ದಿನಗಳಲ್ಲಿ ತಾತ್ಕಾಲಿಕವಾಗಿ ದುರಸ್ತಿ ಮಾಡುವುದಾಗಿ ತಿಳಿಸಿದರು. ಪಿಡಿಒ ಸಂದೇಶ್ ಈ ಬಗ್ಗೆ ನಿರ್ಣಯ ಬರೆದು ಸಭೆಯ ಮುಂದೆ ಓದಿದರು.
ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿ ಜಲಜಾಕ್ಷಿ ಮಾರ್ಗದರ್ಶಿ ಅಧಿಕಾರಿಯಾಗಿದ್ದರು. ಪಿಡಿಒ ವರದಿ ಮಂಡಿಸಿದರು. ವಿವಿಧ ಇಲಾಖೆಗಳ ಅಧಿಕಾರಿಗಳು, ಕಾರ್ಯದರ್ಶಿ ಶಾರದಾ ಪಿ.ಎ. ಮೊದಲಾದವರು ಉಪಸ್ಥಿತರಿದ್ದರು.
ಡೆಪಾಸಿಟ್ ನೀವು ಕಟ್ಟುತ್ತೀರಾ?
ಕೋಳಿ ಅಂಗಡಿಗೆ ಟೆಂಡರ್ ಪಡೆದ ಮಾಲೀಕರು ಡೆಪಾಸಿಟ್ ಕಟ್ಟಿದ್ದಾರೆ. ಅದನ್ನು ನೀವು ಭರಿಸುತ್ತೀರಾ? ಎಂದು ಅಭಿವೃದ್ಧಿ ಅಧಿಕಾರಿ ಸಂದೇಶ್ ಹೇಳಿದ್ದು ಗ್ರಾಮಸ್ಥರನ್ನು ಕೆರಳಿಸಿತು. ಈ ಬಗ್ಗೆ ಪರ-ವಿರೋಧ ಚರ್ಚೆ ಕಾವೇರಿತು. ಜಿಲ್ಲಾಧಿಕಾರಿ ಮತ್ತು ಆರೋಗ್ಯ ಸಚಿವರಿಗೆ ದೂರು ನೀಡುತ್ತೇವೆ. ಮಕ್ಕಳು, ಮಹಿಳೆಯರು ಈ ಬಸ್ ನಿಲ್ದಾಣದಲ್ಲಿ ಕುಳಿತುಕೊಳ್ಳುತ್ತಾರೆ. ಕೋಳಿ ಅಂಗಡಿಗಳಿಂದ ಅಲ್ಲಿ ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದರು. ಈ ಬಗ್ಗೆ ಚರ್ಚೆ ನಡೆದು ಮೇಲಧಿಕಾರಿಗಳ ಆದೇಶದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.