ಬಂಧಿತ ಹಂಡೇಲಿನ ಮಹಮ್ಮದ್ ಆರೀಫ್, ಗಂಟಾಲಕಟ್ಟೆಯ ಇಮ್ರಾನ್ ಅಲಿಯಾಸ್ ಇಬ್ರಾಹಿಂ  
ಉಡುಪಿ

ಜಾನುವಾರು ಸಾಗಾಟ ಆರೋಪಿಗಳ ಬಂಧನ

ಇಂದಿರಾ ಎನ್ ಕೆ
ಮೂಡುಬಿದಿರೆ: ಕಾರಿನಲ್ಲಿ ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಮೂಡುಬಿದಿರೆ ಪೊಲೀಸರು ಬೆನ್ನಟ್ಟಿ ಬಂಧಿಸಿದ್ದಾರೆ.
ಹಂಡೇಲಿನ ಮಹಮ್ಮದ್ ಆರೀಫ್, ಗಂಟಾಲಕಟ್ಟೆಯ ಇಮ್ರಾನ್ ಅಲಿಯಾಸ್ ಇಬ್ರಾಹಿಂ ಬಂಧಿತರು. ಪಿಎಸ್‌ಐ ಕೃಷ್ಣಪ್ಪ ಮತ್ತು ಸಿಬ್ಬಂದಿ ಗಸ್ತು ಕರ್ತವ್ಯದಲ್ಲಿದ್ದಾಗ ಪಡುಮಾರ್ನಾಡು ಗ್ರಾಮದ ಗುಂಡುಕಲ್ಲು ಕ್ರಾಸ್ ಬಳಿ ಬಂದ ಕಾರನ್ನು ನಿಲ್ಲಿಸಲು ಸೂಚಿಸಿದರೂ ಆರೋಪಿಗಳು ನಿಲ್ಲಿಸದೆ ವೇಗವಾಗಿ ಚಲಾಯಿಸಿಕೊಂಡು ಹೋಗಿದ್ದಾರೆ. ಪೊಲೀಸರು ಕಾರನ್ನು ಬೆನ್ನಟ್ಟಿದಾಗ ಆರೋಪಿಗಳು ಗುಂಡುಕಲ್ಲು 5 ಸೆಂಟ್ಸ್ ರಸ್ತೆಯ ಸಾಹುಲ್ ಹಮೀದ್ ಎಂಬುವರ ಮನೆ ಕಾಂಪೌಂಡ್ ಒಳಗೆ ವಾಹನ ನುಗ್ಗಿಸಿ ಓಡಿ ಹೋಗಲು ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಬೆನ್ನಟ್ಟಿ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಕಾರನ್ನು ತಪಾಸಣೆ ನಡೆಸಿದಾಗ ಹಿಂಬದಿ ಸೀಟುಗಳನ್ನು ತೆಗೆದು ಅದರ ಮೇಲೆ ಪ್ಲಾಸ್ಟಿಕ್ ಹಾಕಿ ಗಂಡು ಕರುವೊಂದನ್ನು ಹಿಂಸಾತ್ಮಕವಾಗಿ ಹಗ್ಗದಿಂದ ಕಟ್ಟಿ ತುಂಬಿಸಿರುವುದು ಪತ್ತೆಯಾಗಿದೆ.
ಆರೋಪಿಗಳು ಒಂದು ವಾರದಿಂದ ವಿವಿಧೆಡೆಗಳಿಂದ ಜಾನುವಾರು ಕಳ್ಳತನ ಮಾಡುತ್ತಿದ್ದು, ಗುಂಡುಕಲ್ಲು ನಿವಾಸಿ ಸಾಹುಲ್ ಹಮೀದ್ ಮನೆ ಬಳಿ ವಧೆ ಮಾಡಿ ಮಾಂಸ ಮಾರಾಟ ಮಾಡುತ್ತಿದ್ದುದಾಗಿ ಒಪ್ಪಿಕೊಂಡಿದ್ದಾರೆ. ಕರು, ಸಾಗಾಟಕ್ಕೆ ಬಳಸಿದ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ಮಹಮ್ಮದ್ ಆರೀಫ್ ವಿರುದ್ಧ ಬಜ್ಪೆ, ಮೂಡುಬಿದಿರೆ ಠಾಣೆಯಲ್ಲಿ ಜಾನುವಾರು ಹತ್ಯೆ ತಡೆ ಕಾಯ್ದೆ ಸೇರಿದಂತೆ 4 ಪ್ರಕರಣ ದಾಖಲಾಗಿದೆ. ಮತ್ತೊಬ್ಬ ಆರೋಪಿ ಇಮ್ರಾನ್ ವಿರುದ್ಧ ಮೂಡುಬಿದಿರೆ, ಕಾರ್ಕಳ ನಗರ ಠಾಣೆಗಳಲ್ಲಿ ಎನ್‌ಡಿಪಿಎಸ್, ಕೆಪಿ ಆಕ್ಟ್, ಜಾನುವಾರು ಕಳ್ಳತನಕ್ಕೆ ಸಂಬಂಧಿಸಿ 5ಕ್ಕೂ ಹೆಚ್ಚು ಪ್ರಕರಣ ದಾಖಲಾಗಿದೆ.