ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಕಥೊಲಿಕ್ ಸಭಾ ವತಿಯಿಂದ ಅಭಿನಂದಿಸಿ ವಿಪ ಸದಸ್ಯ ಐವನ್ ಡಿಸೋಜಾ ಅವರಿಗೆ ಸಚಿವ ಸ್ಥಾನ ನೀಡುವಂತೆ ಮನವಿ ಸಲ್ಲಿಸಲಾಯಿತು. ಸಂತೋಷ್ ಡಿಸೋಜಾ, ಸ್ಟೀವನ್ ರೊಡ್ರಿಗಸ್, ಸುನೀಲ್ ಮೋನಿಸ್, ಸ್ಟ್ಯಾನಿ ಲೋಬೊ, ಮೆಲ್ವಿನ್ ಆರಾನ್ಹಾ ಶಿರ್ವ ಇತರರಿದ್ದರು.
* ಸಿಎಂಗೆ ಕಥೊಲಿಕ್ ಸಭಾ ಮನವಿ
ಉಡುಪಿ: ಕಥೊಲಿಕ್ ಸಭಾ ಉಡುಪಿ ಹಾಗೂ ಮಂಗಳೂರು ಪ್ರದೇಶದ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಪದಾಧಿಕಾರಿಗಳು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿ ಜಿಲ್ಲೆಯ ಕ್ರೈಸ್ತ ಸಮುದಾಯದ ಪರವಾಗಿ ಅಭಿನಂದಿಸಲಾಯಿತು.
ಇದೇ ವೇಳೆ ಸಭಾದ ಅಧ್ಯಕ್ಷರು ಮಾತನಾಡಿ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಅವರಿಗೆ ಸಚಿವ ಸ್ಥಾನ ನೀಡಬೇಕು. ಕರಾವಳಿಯಲ್ಲಿ ಕ್ರೈಸ್ತ ಸಮುದಾಯ ಪ್ರತಿನಿಧಿಸುತ್ತಿರುವ ಅವರು ಎರಡು ಬಾರಿ ವಿಧಾನ ಪರಿಷತ್ ಸದಸ್ಯರಾಗಿ, ಪರಿಷತ್ನ ಮುಖ್ಯ ಸಚೇತಕಾರಾಗಿ, ಕ್ರೈಸ್ತ ಅಭಿವೃದ್ಧಿ ನಿಗಮದಲ್ಲಿ ವಿವಿಧ ರೀತಿಯ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಅವರಿಗೆ ತಮ್ಮ ಸಂಪುಟದಲ್ಲಿ ಅವಕಾಶ ನೀಡಬೇಕು ಎಂದು ವಿನಂತಿಸಿದರು.
ರಾಜ್ಯದಲ್ಲಿ ನಡೆಯುವ ಚುನಾವಣೆಗಳಲ್ಲಿ ಕಾಂಗ್ರೆಸ್ನ ಗೆಲುವಿಗೆ ಕ್ರೈಸ್ತ ಸಮುದಾಯದ ಕೊಡುಗೆ ಅಪಾರವಾಗಿದೆ. ಆದರೆ, ಸಮುದಾಯಕ್ಕೆ ಪ್ರತಿ ಬಾರಿಯೂ ಸಂಪುಟದಲ್ಲಿ ಉನ್ನತ ಸ್ಥಾನ ನೀಡುವಾಗ ಅವಕಾಶ ವಂಚಿರಾಗುತ್ತಿದ್ದಾರೆ. ತಾವು ಎಲ್ಲ ಸಮುದಾಯದವರಿಗೂ ಸಮಾನ ಅವಕಾಶ ನೀಡಬೇಕು ಎಂದು ತಿಳಿಸಿದರು.
ಐವನ್ ಡಿಸೋಜಾ ಅವರಿಗೆ ಸಚಿವ ಸ್ಥಾನ ಅಥವಾ ವಿಧಾನ ಪರಿಷತ್ ಸಭಾಪತಿಯಾಗಿ ನೇಮಕ ಮಾಡಬೇಕು. ಅವರಿಗೆ ಸಚಿವ ಸ್ಥಾನ ನೀಡಿದ್ದಲ್ಲಿ ಮುಂದಿನ ದಿನಗಳಲ್ಲಿ ಪಕ್ಷದ ಏಳಿಗೆಗೂ ಮತ್ತಷ್ಟು ಸಹಕಾರಿಯಾಗಲಿದೆ. ಹೀಗಾಗಿ ತಾವು ಕ್ರೈಸ್ತ ಸಮುದಾಯಕ್ಕೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ಕಥೊಲಿಕ್ ಸಭಾ ಮಂಗಳೂರು ಹಾಗೂ ಉಡುಪಿ ಪ್ರದೇಶದ ವತಿಯಿಂದ ಮನವಿ ಸಲ್ಲಿಸಿದರು.
ನಿಯೋಗದಲ್ಲಿ ಕಥೊಲಿಕ್ ಸಭಾ ಮಂಗಳೂರು ಪ್ರದೇಶ ಅಧ್ಯಕ್ಷ ಸಂತೋಷ್ ಡಿಸೋಜಾ, ಉಪಾಧ್ಯಕ್ಷರಾದ ಸ್ಟೀವನ್ ರೊಡ್ರಿಗಸ್, ಸುನೀಲ್ ಮೋನಿಸ್, ಮಾಜಿ ಅಧ್ಯಕ್ಷ ಸ್ಟ್ಯಾನಿ ಲೋಬೊ, ಉಡುಪಿ ಪ್ರದೇಶ ಅಧ್ಯಕ್ಷ ಮೆಲ್ವಿನ್ ಆರಾನ್ಹಾ ಶಿರ್ವ, ಕುಂದಾಪುರ ವಲಯಾಧ್ಯಕ್ಷೆ ಶೈಲಾ ಅಲ್ಮೇಡಾ, ಕಾರ್ಕಳ ಅಧ್ಯಕ್ಷರಾದ ಅಂಟನಿ ಮಿರಾಂಡಾ, ಉಡುಪಿ ಅಧ್ಯಕ್ಷ ಕಿರಣ್ ಲೂವಿಸ್, ಕುಂದಾಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿನೋದ್ ಕ್ರಾಸ್ಟೊ ಹಾಗೂ ಇತರರು ಉಪಸ್ಥಿತರಿದ್ದರು.