ಕೆರಾಡಿಯಲ್ಲಿ ಜರಗಿದ ಕಾನೂನು ಅರಿವು ಮತ್ತು ನೆರವು ಶಿಬಿರವನ್ನು ಹೈಕೋರ್ಟ್ ನ್ಯಾಯಮೂರ್ತಿ ವಿಭು ಬಖ್ರು ಉದ್ಘಾಟಿಸಿದರು. 
ಉಡುಪಿ

ಸಮಸ್ಯೆ ಮೊದಲೇ ಗುರುತಿಸಿದರೆ ಪ್ರಕರಣಗಳು ಇಳಿಕೆ

ಇಂದಿರಾ ಎನ್ ಕೆ
ವಿಜಯವಾಣಿ ಸುದ್ದಿಜಾಲ ಕುಂದಾಪುರ
ನ್ಯಾಯವು ನ್ಯಾಯಾಲಯದ ಕಟ್ಟಡಗಳ ಒಳಗೆ ವಾತ್ರ ಲಭ್ಯವಿರುವ ವಿಷಯವಲ್ಲ, ಬದಲಾಗಿ ಜನರು ವಾಸಿಸುವ ಸ್ಥಳದಲ್ಲಿ ನ್ಯಾಯವು ಪ್ರಾರಂಭವಾಗುತ್ತದೆ. ಅದು ಕುಟುಂಬವು ತನ್ನ ಹಕ್ಕುಗಳನ್ನು ಅರ್ಥ ವಾಡಿಕೊಂಡಾಗ, ರೈತನು ಯಾವ ಯೋಜನೆಗಳನ್ನು ಪಡೆದುಕೊಳ್ಳಬಹುದು ಎಂದು ತಿಳಿದಾಗ ಮತ್ತು ನಾಗರಿಕನು ಭಯ ಅಥವಾ ಹಿಂಜರಿಕೆಯಿಲ್ಲದೆ ನ್ಯಾಯ ಸಿಗುತ್ತದೆ ಎಂದು ತಿಳಿದುಕೊಂಡಾಗ ನ್ಯಾಯದ ನಿಜವಾದ ಅರ್ಥ ತಿಳಿಯುತ್ತದೆ. ಸಮಸ್ಯೆಗಳನ್ನು ಮೊದಲೇ ಗುರುತಿಸಿದಾಗ ನ್ಯಾಯಾಲಯದಲ್ಲಿ ಪ್ರಕರಣಗಳು ಕಡಿಮೆಯಾಗುತ್ತವೆ ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹೇಳಿದರು.
ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು, ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಉಡುಪಿ ಜಿಲ್ಲಾಡಳಿತ, ಕುಂದಾಪುರ ವಕೀಲರ ಸಂ, ಕೆರಾಡಿ ಗ್ರಾಮ ಪಂಚಾಯಿತಿ, ಉಡುಪಿ ವೈಕುಂಠ ಬಾಳಿಗಾ ಕಾನೂನು ಕಾಲೇಜು ಮತ್ತು ಕೆರಾಡಿ ವರಸಿದ್ಧಿ ವಿನಾಯಕ ಕಾಲೇಜು ಆಶ್ರಯದಲ್ಲಿ ವರಸಿದ್ಧಿ ವಿನಾಯಕ ಕಾಲೇಜಿಲ್ಲಿ ಶನಿವಾರ ನಡೆದ ಗ್ರಾಮೀಣ ಸಮುದಾಯಗಳ ಸಬಲೀಕರಣ: ಹಕ್ಕುಗಳ ಮತ್ತು ಯೋಜನೆಗಳ ಕುರಿತು ಕಾನೂನು ಅರಿವು ಮತ್ತು ನೆರವು ಶಿಬಿರ ಉದ್ಘಾಟಿಸಿ ವಾತನಾಡಿದರು.
ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಅನು ಸಿವರಾಮನ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು, ನ್ಯಾಯಮೂರ್ತಿ ಅನು ಸಿವರಾಮನ್ ಮತ್ತು ಕೆ.ಎಸ್.ಭರತ್ ಕುವಾರ್ ಅವರನ್ನು ಗೌರವಿಸಲಾಯಿತು. ಮೂವರು ಫಲಾನುಭವಿಗಳಿಗೆ ಹಕ್ಕುಪತ್ರ ಮತ್ತು ಸಂಧ್ಯಾಸುರಕ್ಷಾ ಯೋಜನೆ ಮಂಜೂರಾತಿ ಪತ್ರ ವಿತರಿಸಲಾಯಿತು.
ಕರ್ನಾಟಕ ಉಚ್ಚ ನ್ಯಾಯಾಲಯದ ಮಹಾ ವಿಲೇಖನಾಧಿಕಾರಿ ಕೆ.ಎಸ್.ಭರತ್ ಕುವಾರ್, ಉಡುಪಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ., ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಎಚ್.ಶಶಿಧರ ಶೆಟ್ಟಿ, ಕೆರಾಡಿ ವರಸಿದ್ಧಿವಿನಾಯಕ ಕಾಲೇಜಿನ ಅಧ್ಯಕ್ಷ ಕೆರಾಡಿ ಚಂದ್ರಶೇಖರ ಶೆಟ್ಟಿ, ಕುಂದಾಪುರ ವಕೀಲರ ಸಂ ಅಧ್ಯಕ್ಷ ಶಿರಿಯಾರ ಗೋಪಾಲಕೃಷ್ಣ ಶೆಟ್ಟಿ, ಕೆರಾಡಿ ಗ್ರಾಪಂ ಅಧ್ಯಕ್ಷ ಸುದರ್ಶನ ಶೆಟ್ಟಿ ಉಪಸ್ಥಿತರಿದ್ದರು.
ಎಚ್.ಶಶಿಧರ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕಿರಣ್ ಎಸ್.ಗಂಗಣ್ಣವರ್ ಸ್ವಾಗತಿಸಿದರು. ಪತ್ರಕರ್ತ ರಾಜೇಶ ಕೆ.ಸಿ. ಮತ್ತು ವಕೀಲ ರಾವೇಂದ್ರ ಚರಣ್ ನಾವಡ ನಿರೂಪಿಸಿದರು. ಮನು ಪಟೇಲ್ ಬಿ.ವೈ. ವಂದಿಸಿದರು.

ಆರ್ಥಿಕ ಅಥವಾ ಮಾಹಿತಿ ಕೊರತೆಯಿಂದಾಗಿ ಯಾವುದೇ ವ್ಯಕ್ತಿಗೆ ನ್ಯಾಯ ನಿರಾಕರಿಸಲ್ಪಡದಂತೆ ನೋಡಿಕೊಳ್ಳಲು ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಕಾನೂನು ಸೇವಾ ಪ್ರಾಧಿಕಾರಗಳು ಅಸ್ತಿತ್ವದಲ್ಲಿವೆ. ಮಹಿಳೆಯರು, ಹಿರಿಯ ನಾಗರಿಕರು, ರೈತರು, ಕಾರ್ಮಿಕರು, ವಿದ್ಯಾರ್ಥಿಗಳು ಮತ್ತು ದುರ್ಬಲ ಗುಂಪುಗಳಿಗೆ ಕಲ್ಯಾಣ ಯೋಜನೆಗಳು ಜಾರಿಯಲ್ಲಿದ್ದರೂ ಮಾಹಿತಿ ಕೊರತೆಯಿಂದ ಅನೇಕ ಫಲಾನುಭವಿಗಳು ಇಂದಿಗೂ ಇದರ ಪ್ರಯೋಜನ ಪಡೆದುಕೊಳ್ಳುತ್ತಿಲ್ಲ. ಕಾನೂನು ನೆರವಿನ ಮೂಲ ತತ್ವವು ದಾನವಲ್ಲ, ಅದು ಸಾಂವಿಧಾನಿಕ ಭರವಸೆಯಾಗಿದೆ.