ದಿ ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ಐಸಿಎಐ) ಮಂಗಳೂರು ಶಾಖೆ ಸಹಯೋಗದಲ್ಲಿ ಸಿಎ ದಿನಾಚರಣೆಗೆ ಸಿಎ ಕಮಲ್ ಗರ್ಗ್ ಚಾಲನೆ ನೀಡಿದರು. ಸಿಎ ಅಲೋಕ್ ಗರ್ಗ್, ಸಿಎ ಡೇನಿಯಲ್ ಮಾರ್ಷ್ ಪೆರೇರಾ ಮೊದಲಾದವರಿದ್ದರು. 
ಉಡುಪಿ

ಸಿಎಗಳು ಆರ್ಥಿಕ ಆರೋಗ್ಯದ ಕಾವಲುಗಾರರು

ಮಂಗಳೂರು: ಆರ್ಥಿಕ ಶಿಸ್ತು ಮತ್ತು ಪಾರದರ್ಶಕತೆಯನ್ನು ಕಾಯ್ದುಕೊಳ್ಳುವಲ್ಲಿ ಚಾರ್ಟರ್ಡ್ ಅಕೌಂಟೆಂಟ್ಸ್ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಇವರು ವ್ಯವಹಾರಗಳ ಆರ್ಥಿಕ ಆರೋಗ್ಯದ ಕಾವಲುಗಾರರು ಎಂದು ಸಿಎ ಕಮಲ್ ಗರ್ಗ್ ಹೇಳಿದರು.

ದಿ ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ಐಸಿಎಐ) ಮಂಗಳೂರು ಶಾಖೆ ಸಹಯೋಗದಲ್ಲಿ ಸಿಎ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು.
ಸಿಎ ಆಡಿಟ್‌ನಲ್ಲಿ ನಿರಂತರ ಗುಣಮಟ್ಟ ನಿಯಂತ್ರಣ ಅತ್ಯಗತ್ಯ. ಇದು ವ್ಯವಹಾರದ ನಿಖರತೆ, ವಿಶ್ವಾಸಾರ್ಹತೆ ಮತ್ತು ವೃತ್ತಿಪರ ಮಾನದಂಡಗಳನ್ನು ಎತ್ತಿಹಿಡಿಯಲು ಸಹಾಯ ಮಾಡುತ್ತದೆ. ಆಡಿಟಿಂಗ್‌ನಲ್ಲಿ ಸಣ್ಣ ಲೋಪವೂ ದೊಡ್ಡ ಆರ್ಥಿಕ ನಷ್ಟಕ್ಕೆ ಕಾರಣವಾಗಬಹುದು. ಕಾರ್ಪೊರೇಟ್ ವರದಿಗಾರಿಕೆಯ ಪ್ರಮುಖ ಸೂಕ್ಷ್ಮತೆಯೆಂದರೆ, ಇದು ಕೇವಲ ಅಂಕಿ-ಅಂಶಗಳ ಪ್ರಸ್ತುತಿಯಲ್ಲ; ಬದಲಿಗೆ ಹೂಡಿಕೆದಾರರು, ಸರ್ಕಾರ ಮತ್ತು ಸಾರ್ವಜನಿಕರಲ್ಲಿ ನಂಬಿಕೆ ಮೂಡಿಸುವ ಸಾಧನ ಎಂದರು.
ಸಿಎ ಡೇನಿಯಲ್ ಮಾರ್ಷ್ ಪಿರೇರಾ ಮಾತನಾಡಿ, ದೇಶದ ಆರ್ಥಿಕತೆಯ ಗಟ್ಟಿತನ ಮತ್ತು ಸುಸ್ಥಿರ ಬೆಳವಣಿಗೆಯ ಹಿಂದೆ ಚಾರ್ಟರ್ಡ್ ಅಕೌಂಟೆಂಟ್‌ಗ ಪಾತ್ರ ಅತ್ಯಂತ ನಿರ್ಣಾಯಕ. ವ್ಯವಹಾರಗಳಲ್ಲಿ ನೈತಿಕ ಹಣಕಾಸು ವರದಿಗಾರಿಕೆಯನ್ನು ಖಚಿತಪಡಿಸುವ ಮೂಲಕ ಇವರು ಹೂಡಿಕೆದಾರರಲ್ಲಿ ಮತ್ತು ಸಾರ್ವಜನಿಕರಲ್ಲಿ ನಂಬಿಕೆಯನ್ನು ಮೂಡಿಸುತ್ತಾರೆ. ಸಂಸ್ಥೆಗಳಲ್ಲಿ ಉತ್ತಮ ಆಡಳಿತ ಮತ್ತು ಸಂಪೂರ್ಣ ಪಾರದರ್ಶಕತೆ ಕಾಯ್ದುಕೊಳ್ಳಲು ಮಾರ್ಗದರ್ಶನ ನೀಡುವ ಸಿಎಗಳು, ತೆರಿಗೆ ವಂಚನೆ ಮತ್ತು ಆರ್ಥಿಕ ಅಪರಾಧಗಳಿಗೆ ತಡೆ ಒಡ್ಡುತ್ತಾರೆ. ತಮ್ಮ ವೃತ್ತಿಪರ ನೈಪುಣ್ಯತೆ ಮೂಲಕ ಉದ್ಯಮಗಳು ಸರಿಯಾದ ಆರ್ಥಿಕ ನಿರ್ಧಾರ ತೆಗೆದುಕೊಳ್ಳಲು ನೆರವಾಗುತ್ತಾರೆ. ಹೀಗೆ, ದೇಶದ ಸಂಪತ್ತಿನ ಸರಿಯಾದ ನಿರ್ವಹಣೆ, ಪಾರದರ್ಶಕತೆ ಮತ್ತು ಆರ್ಥಿಕ ಶಿಸ್ತು ಕಾಪಾಡುವ ಮೂಲಕ ಚಾರ್ಟರ್ಡ್ ಅಕೌಂಟೆಂಟ್‌ಗಳು ರಾಷ್ಟ್ರದ ಆರ್ಥಿಕ ಬೆನ್ನೆಲುಬಾಗಿ ನಿಂತಿದ್ದಾರೆ ಎಂದರು.

ಆಡಿಟ್‌ನಲ್ಲಿ ನಿರಂತರ ಗುಣಮಟ್ಟ ನಿಯಂತ್ರಣ ಮತ್ತು ಕಾರ್ಪೊರೇಟ್ ವರದಿಗಾರಿಕೆಯ ಪ್ರಮುಖ ಸೂಕ್ಷ್ಮತೆಗಳು ವಿಷಯದ ಕುರಿತು ಸಿಎ ಅಲೋಕ್ ಗರ್ಗ್ ಮಾತನಾಡಿದರು. ಮಂಗಳೂರು ಶಾಖೆ ಕಾರ್ಯದರ್ಶಿ ಸಿಎ ಬಾಲಸುಬ್ರಹ್ಮಣ್ಯ ಎನ್., ಉಪಾಧ್ಯಕ್ಷೆ ಸಿಎ ಮಮತಾ ರಾವ್, ಕೋಶಾಧಿಕಾರಿ ಸಿಎ ನಿತಿನ್ ಬಾಳಿಗ, ಸಮಿತಿ ಸದಸ್ಯ ಸಿಎ ಬಿ.ಕೃಷ್ಣಾನಂದ ಪೈ, ನಿಕಟಪೂರ್ವ ಅಧ್ಯಕ್ಷ ಸಿಎ ಪ್ರಶಾಂತ್ ಪೈ ಉಪಸ್ಥಿತರಿದ್ದರು. ಸಿಎ ವಿದ್ಯಾರ್ಥಿಗಳ ಸಂಘ ಅಧ್ಯಕ್ಷ ಸಿಎ ಗೌರವ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.

ಸಾಧಕ ವಿದ್ಯಾರ್ಥಿಗಳಿಗೆ ಗೌರವ

ಸಿಎ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸಿಎ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತ ವಿತರಿಸಲಾಯಿತು. ಇದೇ ವೇಳೆ ಸಿಎ ಫೈನಲ್ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 28ನೇ ರ‌್ಯಾಂಕ್ ಪಡೆದ ದೀಪಕ್ ಹೆಗ್ಡೆ ಮತ್ತು 47ನೇ ರ‌್ಯಾಂಕ್ ಪಡೆದ ಆದಿತ್ಯ ಪೆರ್ಗಾಡೆ ಅವರನ್ನು ಸನ್ಮಾನಿಸಲಾಯಿತು. ಐಸಿಎಐ ಮಂಗಳೂರು ಶಾಖೆ ವತಿಯಿಂದ ಬೆಳ್ತಂಗಡಿಯ ಸರ್ಕಾರಿ ಶಾಲೆಯ ಬಡ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ ವಿತರಿಸಲಾಯಿತು.