ಸುಬ್ರಹ್ಮಣ್ಯದ ಎಸ್‌ಎಸ್‌ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗೆ ವೈದ್ಯಾಧಿಕಾರಿ ಡಾ.ಹಸ್ತಾ ಮಾಹಿತಿ ನೀಡಿದರು. ಪ್ರಮುಖರಾದ ರೇಖಾರಾಣಿ ಸೋಮಶೇಖರ್, ಬಸವರಾಜು, ಉಮ್ಮರ್ ಖಾನ್, ಸೌಮ್ಯಾ ದಿನೇಶ್ ಉಪಸ್ಥಿತರಿದ್ದರು. 
ಉಡುಪಿ

ಎಳವೆಯಲ್ಲೇ ಕಾಳಜಿ ಭವಿಷ್ಯಕ್ಕೆ ಉತ್ತಮ ಬುನಾದಿ

ಸುಬ್ರಹ್ಮಣ್ಯ: ಹೆಣ್ಣು ಮಕ್ಕಳು ತಮ್ಮ ಆರೋಗ್ಯದ ಬಗ್ಗೆ ಎಳವೆಯಿಂದಲೇ ಕಾಳಜಿ ವಹಿಸಬೇಕು. ಚಿಕ್ಕ ವಯಸ್ಸಿನಲ್ಲಿ ತಮ್ಮ ಸ್ವಾಸ್ಥೃದ ಕುರಿತು ಅರಿವು ಮೂಡಿಸಿಕೊಂಡು ಜಾಗೃತರಾಗಬೇಕು. ಇದರಿಂದ ಭವಿಷ್ಯದಲ್ಲಿ ಉತ್ತಮ ಆರೋಗ್ಯ ಹೊಂದಲು ಬುನಾದಿ ದೊರಕುತ್ತದೆ ಎಂದು ಸುಳ್ಯ ತಾಲೂಕು ಸಮುದಾಯ ಆರೋಗ್ಯ ಕೇಂದ್ರದ ಕೌನ್ಸಿಲರ್ ಮತ್ತು ವೈದ್ಯಾಧಿಕಾರಿ ಡಾ.ಹಸ್ತಾ ಹೇಳಿದರು.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತದ ಎಸ್‌ಎಸ್‌ಪಿಯು ಕಾಲೇಜಿನಲ್ಲಿ ಮಂಗಳವಾರ ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಕಾರದಲ್ಲಿ ಹೆಣ್ಣು ಮಕ್ಕಳ ಆರೋಗ್ಯ ರಕ್ಷಣೆ ಮತ್ತು ಅರಿವು ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿ ನೀಡಿದರು.
ಪ್ರತಿದಿನ ಯೋಗ, ಪ್ರಾಣಾಯಾಮ ಮತ್ತು ನಿಯಮಿತ ಆಹಾರ ಸೇವನೆ ಆರೋಗ್ಯಕ್ಕೆ ಪೂರಕ. ಆಹಾರ ಸೇವಿಸದೆ ಕಾಲೇಜಿಗೆ ಬರುವುದು ಕೂಡಾ ತಪ್ಪಾಗುತ್ತದೆ. ಆದುದರಿಂದ ಉತ್ತಮ ಆರೋಗ್ಯಕ್ಕಾಗಿ ಆಹಾರ ಸೇವನೆಯೂ ಅತ್ಯಗತ್ಯ ಎಂದರು.
ಶುಚಿತ್ವ, ಯೋಗ, ಪ್ರಾಣಾಯಾಮ, ವ್ಯಾಯಾಮ, ತಜ್ಞ ವೈದ್ಯರ ಮಾರ್ಗದರ್ಶನ, ಕ್ರೀಡಾ ಚಟುವಟಿಕೆ, ತಿನ್ನಬೇಕಾದ ಪೌಷ್ಟಿಕ ಆಹಾರ, ನೀರಿನ ಸೇವನೆಯ ಪ್ರಯೋಜನ, ಸೊಪ್ಪು, ತರಕಾರಿ ಇತ್ಯಾದಿ ಪೌಷ್ಟಿಕ ಆಹಾರ, ಮಾಂಸಾಹಾರ, ಹಣ್ಣು ಹಂಪಲು, ಸಿರಿಧಾನ್ಯಗಳ ಉಪಯೋಗದ ಬಗ್ಗೆ ವಿದ್ಯಾರ್ಥಿನಿಯರಿಗೆ ಡಾ.ಹಸ್ತಾ ಮಾಹಿತಿ ನೀಡಿದರು. ವಿದ್ಯಾರ್ಥಿಗಳು ವೈದ್ಯರಲ್ಲಿ ವಿವಿಧ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದುಕೊಂಡರು.
ಉಪನ್ಯಾಸಕಿ ರೇಖಾರಾಣಿ ಸೋಮಶೇಖರ್ ಅಧ್ಯಕ್ಷತೆ ವಹಿಸಿದ್ದರು. ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಬಸವರಾಜು, ಆರೋಗ್ಯ ನಿರೀಕ್ಷಣಾಧಿಕಾರಿ ಉಮ್ಮರ್ ಖಾನ್ ಉಪಸ್ಥಿತರಿದ್ದರು. ಉಪನ್ಯಾಸಕಿ ಸೌಮ್ಯಾ ದಿನೇಶ್ ನಿರೂಪಿಸಿದರು. ಕಾಲೇಜಿನ ವಿದ್ಯಾರ್ಥಿನಿಯರು ಮಾಹಿತಿ ಪಡೆದುಕೊಂಡರು.