ಕೆನರಾ ಬ್ಯಾಂಕ್ ಮಣಿಪಾಲ ವೃತ್ತ ಕಚೇರಿ ವತಿಯಿಂದ ಆ.9ರಂದು ಆಯೋಜಿಸಿರುವ ಫ್ರೀಡಂ ರನ್ ಮ್ಯಾರಥಾನ್ ನಿಮಿತ್ತ ಟೀ ಶರ್ಟ್, ಕರಪತ್ರ ಬಿಡುಗಡೆ ಮಾಡಲಾಯಿತು. ಡಾ. ಬಾಲಕೃಷ್ಣ ಮದ್ದೋಡಿ, ಎಚ್.ಕೆ. ಗಂಗಾಧರ್, ಪುರುಷೋತ್ತಮ ಶೆಟ್ಟಿ, ಡಾ. ರೋಶನ್ ಶೆಟ್ಟಿ, ಸಚಿನ್, ಮೇಜರ್ ರಾಧಾಕೃಷ್ಣ ಇದ್ದರು.
* ಪರಿಸರ ವಿಜ್ಞಾನಿ ಡಾ. ಬಾಲಕೃಷ್ಣ ಮದ್ದೋಡಿ ಅನಿಸಿಕೆ
* 'ಫ್ರೀಡಂ ರನ್' ಮ್ಯಾರಥಾನ್ನ ಟಿ-ಶರ್ಟ್, ಕರಪತ್ರ ಬಿಡುಗಡೆ
ಉಡುಪಿ: ಹಸಿರಾಗಿದ್ದ ಕಾಡು ಕಾಂಕ್ರೀಟ್ ನಾಡಾಗಿದ್ದು, ಮತ್ತೊಮ್ಮೆ ಹಸಿರು ಕಾಡಾಗಿ ಕಂಗೊಳಿಸದರೆ ಮಾತ್ರ ಎಲ್ಲರಿಗೂ ಉತ್ತಮ ಬದುಕು, ಮುಂದಿನ ಪೀಳಿಗೆಗೆ ಉಜ್ವಲ ಭವಿಷ್ಯ ಸಾಧ್ಯ. ಸಮುದಾಯದ ಸಹಭಾಗಿತ್ವದಲ್ಲಿ ಹಸಿರು ಪ್ರತಿಜ್ಞೆಯೊಂದಿಗೆ ಗಿಡ ನೆಡಬೇಕು. ತನ್ನಿಮಿತ್ತ ಕೆನರಾ ಬ್ಯಾಂಕ್ ವತಿಯಿಂದ ಮಣಿಪಾಲದಲ್ಲಿ ನಡೆಯಲಿರುವ 'ಫ್ರೀಡಂ ರನ್' ದೇಶಕ್ಕೆ ಮಾದರಿಯಾಗಲಿ ಎಂದು ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ)ಯ ಪ್ರಾಧ್ಯಾಪಕ ಹಾಗೂ ಪರಿಸರ ವಿಜ್ಞಾನಿ ಡಾ. ಬಾಲಕೃಷ್ಣ ಮದ್ದೋಡಿ ಆಶಯ ವ್ಯಕ್ತಪಡಿಸಿದರು.
ಮಣಿಪಾಲದಲ್ಲಿ ಕೆನರಾ ಬ್ಯಾಂಕ್ ವೃತ್ತ ಕಚೇರಿಯ ಕಾನ್ಛರೆನ್ಸ್ ಹಾಲ್ನಲ್ಲಿ ಗುರುವಾರ (ಜು.9) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೆನರಾ ಬ್ಯಾಂಕ್ ವತಿಯಿಂದ ಆ.9ರಂದು ಹಮ್ಮಿಕೊಂಡಿರುವ 5ನೇ ಆವೃತ್ತಿಯ 'ಫ್ರೀಡಂ ರನ್ (ದೇಶಭಕ್ತಿಯ ಸಂಭ್ರಮ)' ಮ್ಯಾರಥಾನ್ ನಿಮಿತ್ತ ಕರಪತ್ರ, ಟೀ&ಶರ್ಟ್, ವೆಬ್ಸೈಟ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೆನರಾ ಬ್ಯಾಂಕ್ ಮಣಿಪಾಲ ವೃತ್ತ ಕಚೇರಿ ಮಹಾಪ್ರಬಂಧಕ ಎಚ್.ಕೆ. ಗಂಗಾಧರ್ ಮಾತನಾಡಿ, ಯುವಜನತೆಯಲ್ಲಿ ದೇಶಪ್ರೇಮ ಮೈಗೂಡಿಸಿಕೊಳ್ಳುವಂತೆ ಅರಿವು ಮೂಡಿಸುವುದೇ 'ಫ್ರೀಡಂ ರನ್' ಮ್ಯಾರಥಾನ್ನ ಉದ್ದೇಶ. ದೈಹಿಕ ಕ್ಷಮತೆ, ಆರೋಗ್ಯದ ಕುರಿತು ಅರಿವು ಮೂಡಿಸಲಾಗುವುದು. 'ಗೋ ಗ್ರೀನ್' ಈ ವರ್ಷದ ಘೋಷಣೆಯಾಗಿದ್ದು, ಮಧ್ಯಪ್ರಾಚ್ಯದಲ್ಲಿ ಯುದ್ಧದ ದುಷ್ಪರಿಣಾಮ, ಎಲ್ನಿನೋ ಎಚ್ಚರಿಕೆಯ ಹಿನ್ನೆಲೆಯಲ್ಲಿ ಪ್ರಕೃತಿ ರಕ್ಷಣೆಗಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಉದ್ಯಮಿ ಪುರುಷೋತ್ತಮ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಡಾ. ರೋಶನ್ ಶೆಟ್ಟಿ ಮಾತನಾಡಿದರು. ಮೇಜರ್ ರಾಧಾಕೃಷ್ಣ ಕಾರ್ಯಕ್ರಮ ನಿರೂಪಿಸಿದರು. ಸಚಿನ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಎಲ್ಲರಿಗೂ ಪದಕ ವಿತರಣೆ
ಗೋ ಗ್ರೀನ್ ಧ್ಯೇಯದಡಿ ಸದೃಢ ಭಾರತಕ್ಕಾಗಿ ಎಲ್ಲರೂ ಒಂದಾಗಿ ಓಡೋಣ ಸಂಕಲ್ಪದೊಂದಿಗೆ 21 ಕಿಮೀ., 10 ಕಿಮೀ., 5 ಕಿಮೀ., 3 ಕಿಮೀ ಮ್ಯಾರಥಾನ್ ಹಾಗೂ ಫನ್ ರನ್ ನಡೆಯಲಿದೆ. ಓಟ ಪೂರ್ಣಗೊಳಿಸಿದ ಎಲ್ಲರಿಗೂ ಪದಕ ನೀಡಲಾಗುತ್ತಿದೆ. ಮುಂಚೂಣಿಯ ಓಟಗಾರರಿಗೆ ನಗದು ಸಹಿತ ಒಟ್ಟು ಐದು ಲಕ್ಷ ರೂ. ಬಹುಮಾನವಿದೆ.ಮಹಿಳಾ ಮತ್ತು ಪುರುಷರಿಗಾಗಿ ವಿವಿಧ ವಯೋಮಾನದ 84 ವಿಭಾಗಗಳಲ್ಲಿ ಮ್ಯಾರಥಾನ್ ನಡೆಯಲಿದೆ. ಪಾಲ್ಗೊಳ್ಳುವವರು ನೋಂದಣಿಗೆ www.freedomrunmanipal.com ಸಂಪರ್ಕಿಸಬಹುದು.