ವಾರದಲ್ಲಿ ಐದೇ ದಿನ ಕೆಲಸ ನಿಗದಿ ಮಾಡುವಂತೆ ಆಗ್ರಹಿಸಿ ಮಣಿಪಾಲದಲ್ಲಿ ಕೆನರಾ ಬ್ಯಾಂಕ್ ಆಫೀಸರ್ಸ್ ಅಸೋಶಿಯೇಷನ್ನ ಪದಾಧಿಕಾರಿಗಳು ಪ್ರತಿಭಟಿಸಿದರು. ಸಚಿನ್ ಶೆಟ್ಟಿ, ಸೂರಜ್ ಆರ್. ಉಪ್ಪೂರು, ವಿಶಾಲ್ ಸಿಂಗ್, ರೋಹಿತ್, ಸಾಯಿಪ್ರಿಯಾ, ದುರ್ಗಾಪ್ರಸಾದ್ ಶೆಟ್ಟಿ ಇತರರಿದ್ದರು.
* ಕೆನರಾ ಬ್ಯಾಂಕ್ ನೌಕರರಿಂದ ಮಣಿಪಾಲದಲ್ಲಿ ಪ್ರತಿಭಟನೆ
* ಕೂಡಲೇ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರಕ್ಕೆ ಆಗ್ರಹ
ಉಡುಪಿ: ಬ್ಯಾಂಕಿಂಗ್ ಕ್ಷೇತ್ರದಲ್ಲಿ ವಾರದಲ್ಲಿ ಐದು ದಿನ ಮಾತ್ರ ಕೆಲಸದ ದಿನ ನಿಗದಿಪಡಿಸುವಂತೆ ಒತ್ತಾಯಿಸಿ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ ವತಿಯಿಂದ ದೇಶಾದ್ಯಂತ ಜ.27ರಂದು ಪ್ರತಿಭಟನೆ ನಡೆಸಲಾಗಿದ್ದು, ಉಡುಪಿಯ ಮಣಿಪಾಲದಲ್ಲಿಯೂ ಸಹ ಕೆನರಾ ಬ್ಯಾಂಕ್ ಆಫೀಸರ್ಸ್ ಅಸೋಶಿಯೇಷನ್ನ ಮಣಿಪಾಲ ಪ್ರಾಂತದ ವತಿಯಿಂದ ಮಂಗಳವಾರ (ಜ.27) ಪ್ರತಿಭಟಿಸಲಾಯಿತು.
ಮಣಿಪಾಲದ ಕೆನರಾ ಬ್ಯಾಂಕ್ ವೃತ್ತ ಕಚೇರಿಯ ಮುಂಭಾಗದಲ್ಲಿ ನಡೆದ ಪ್ರತಿಭಟನೆಯಲ್ಲಿ ಸಂಘಟನೆಯ ಅಧ್ಯಕ್ಷ ಸಚಿನ್ ಶೆಟ್ಟಿ ಮಾತನಾಡಿ, ದೇಶದ ವಿಮಾ ಕಂಪನಿಗಳು ವಾರದಲ್ಲಿ ಐದು ದಿನ ಮಾತ್ರ ಕೆಲಸ ಮಾಡುತ್ತಿದೆ. ಬ್ಯಾಂಕ್ಗಳ ಹೆಡ್ ಆಗಿರುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಸಹ ವಾರದಲ್ಲಿ ಕೆಲಸ ಮಾಡುತ್ತಿದೆ. ಜಾಗತಿಕವಾಗಿಯೂ ಎಲ್ಲ ಬ್ಯಾಂಕಿಂಗ್ ಕ್ಷೇತ್ರಗಳು ವಾರದಲ್ಲಿ ಐದೇ ದಿನ ಕೆಲಸ ಮಾಡುತ್ತಿದೆ ಎಂದರು.
ನಿತ್ಯದ ಬ್ಯಾಂಕಿಂಗ್ ಕೆಲಸದಿಂದಾಗಿ ಉದ್ಯೋಗಿಗಳು ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಬ್ಯಾಂಕ್ ಅವಧಿಗಿಂತ ಹೆಚ್ಚಿನ ಸಮಯ ಕೆಲಸ ಮಾಡುವಂತಾಗಿದೆ. ಹೀಗಾಗಿ ದೇಶದಲ್ಲಿರುವ ಎಲ್ಲ ಬ್ಯಾಂಕ್ಗಳಿಗೂ ಸಹ ವಾರದಲ್ಲಿ ಐದೇ ದಿನ ಕೆಲಸ ನಿರ್ವಹಿಸಲು ಅವಕಾಶ ನೀಡಬೇಕು. ಈ ವಿಚಾರವಾಗಿ ಕೇಂದ್ರ ಸರ್ಕಾರ ತ್ವರಿತವಾಗಿ ಆದೇಶ ಹೊರಡಿಸಬೇಕು. ಇದು ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ನ ಆಗ್ರಹವಾಗಿದೆ ಎಂದರು.
ಪ್ರತಿಭಟನೆಯಲ್ಲಿ ಸಂಘಟನೆಯ ಪ್ರಮುಖರಾದ ಸೂರಜ್ ಆರ್. ಉಪ್ಪೂರು, ವಿಶಾಲ್ ಸಿಂಗ್, ರೋಹಿತ್, ಸಾಯಿಪ್ರಿಯಾ, ದುರ್ಗಾಪ್ರಸಾದ್ ಶೆಟ್ಟಿ ಇತರರಿದ್ದರು.