ಉಡುಪಿ: ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವು ದೇಶದಲ್ಲಿ ಪ್ರಕ್ಷುಬ್ಧ ಹಾಗೂ ಅರಾಜಕತೆಯ ವಾತಾವರಣ ನಿಮಾರ್ಣ ಮಾಡಲು ಪ್ರಯತ್ನಿಸುತ್ತಿದೆ. ಈ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ದೇಶಾದ್ಯಂತ ಪ್ರಜಾಪ್ರಭುತ್ವವನ್ನು ಉಳಿಸಿ, ಅರಾಜಕತೆಯನ್ನು ಅಳಿಸಿ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ನ.6ರಂದು ಮಂಗಳೂರಿನಲ್ಲಿ ಪಾದಯಾತ್ರೆ ನಡೆಯಲಿದೆ ಎಂದು ರಾಜ್ಯ ವಿಧಾನ ಪರಿಷತ್ ಸದಸ್ಯ ಹಾಗೂ ಬಿಜೆಪಿ ರಾಜ್ಯ ವಕ್ತಾರ ಕೆ.ಎಸ್. ನವೀನ್ ಹೇಳಿದರು.
ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಳ್ಳನ್ನು ನೂರು ಬಾರಿ ಹೇಳಿ ಅದನ್ನು ಸತ್ಯ ಮಾಡಲು ಪ್ರಯತ್ನಿಸುವುದು, ಜನರ ದಾರಿಯನ್ನು ತಪ್ಪಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಈ ಹಿಂದೆ ಇವಿಎಂ, ಎಸ್ಐಆರ್ ಮತ್ತು ವೋಟ್ ಚೋರಿ ವಿಚಾರಗಳ ಬಗ್ಗೆ ಸುಳ್ಳು ಅಪಪ್ರಚಾರಗಳನ್ನು ನಡೆಸಲಾಗಿದೆ. ಎಸ್ಐಆರ್ ಈ ಹಿಂದೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೂ ನಡೆದಿದೆ. ಎಸ್ ಐ ಆರ್ ಪ್ರಾರಂಭಿಸಿದವರು ನೆಹರೂ, ಇವಿಎಂ ಪರಿಚಯಿಸಿದವರು ರಾಜೀವ್ ಗಾಂಧಿ, ವೋಟ್ ಚೋರಿಯಲ್ಲಿ ಶಿೆಗೆ ಒಳಗಾದವರು ಇಂದಿರಾಗಾಂಧಿ. ಆದರೆ ರಾಹುಲ್ ವಿನಾಕಾರಣ ಬಿಜೆಪಿ ಸರ್ಕಾರ ಮೇಲೆ ಆರೋಪ ಮಾಡುತ್ತಿದ್ದಾರೆ. ದೇಶ ಒಡೆಯುವ ಸಂಘಟನೆ ಜೊತೆ ಸೇರಿ ಇತಿಹಾಸದಲ್ಲಿ ಮೊದಲ ಬಾರಿ ಮುತ್ತಿಗೆ ಹಾಕುವ ಕೆಲಸ ಹಾಗೂ ಚುನಾವಣೆ ಆಯೋಗಕ್ಕೆ ಪ್ರತಿಷ್ಠೆಗೆ ಧಕ್ಕೆ ತರುವ ಕೆಲಸ ನಡೆಯುತ್ತಿದೆ ಎಂದು ಆರೋಪಿಸಿದರು.
8 ಪ್ರಮುಖ ಕಾರ್ಯಕ್ರಮ
ದೇಶಾದ್ಯಂತ ನವೆಂಬರ್ 30ರವರೆಗೆ ಒಂದು ತಿಂಗಳ ಕಾಲ ವಿವಿಧ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ಕೇಂದ್ರಗಳಲ್ಲಿ ಸಾರ್ವಜನಿಕರನ್ನೊಳಗೊಂಡು, ಸಮಾಜದ ವಿವಿಧ ಸ್ತರಗಳ 10,000ಕ್ಕೂ ಹೆಚ್ಚು ಜನರ ಪಾಲ್ಗೊಳ್ಳುವಿಕೆಯಲ್ಲಿ ಬೃಹತ್ ಪಾದಯಾತ್ರೆಗಳನ್ನು ಆಯೋಜಿಸಲಾಗುತ್ತಿದೆ. ಕಾಲೇಜು ವಿದ್ಯಾರ್ಥಿಗಳು, ಯುವಕರ ಜೊತೆ ಸಂವಾದ ಕಾರ್ಯಕ್ರಮಗಳನ್ನು ನಡೆಸಿ, ಇವತ್ತಿನ ದೇಶದ ಪರಿಸ್ಥಿತಿಯ ಬಗ್ಗೆ ಅರಿವು ಮೂಡಿಸಲಾಗುತ್ತದೆ. ವಕೀಲರು, ಸಮಾಜ ಸೇವಕರು ಹಾಗೂ ಪ್ರಬುದ್ಧರನ್ನೊಳಗೊಂಡ ವಿಶೇಷ ಸಭೆ ಮತ್ತು ಗೋಷ್ಠಿಗಳು ನಡೆಯಲಿವೆ. ವಿಶೇಷ ವರದಿಗಳು, ಲೇಖನಗಳನ್ನು ಸಾಮಾಜಿಕ ಜಾಲತಾಣಗಳು ಮತ್ತು ಮಾಧ್ಯಮಗಳ ಮೂಲಕ ಪ್ರಕಟಿಸಿ ಜಾಗೃತಿ ಮೂಡಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಜಿಲ್ಲಾಧ್ಯಕ್ಷ ನವೀನ್ ಶೆಟ್ಟಿ ಕುತ್ಯಾರು ಮಾತನಾಡಿದರು. ಸುದ್ದಿಗೋಷ್ಠಿಯಲ್ಲಿ ಶಾಸಕ ಯಶ್ಪಾಲ್ ಸುವರ್ಣ, ಜಿಲ್ಲಾ ಪ್ರ. ಕಾರ್ಯದರ್ಶಿ ರೇಶ್ಮಾ ಉದಯ್ ಶೆಟ್ಟಿ, ಪ್ರಮುಖರಾದ ಶ್ರೀಕಾಂತ್ ನಾಯಕ್, ದಿವಾಕರ ಶೆಟ್ಟಿ ಕಾಪು, ಶಶಾಂಕ್ ಶಿವತ್ತಾಯ, ಶಿಲ್ಪಾ ಸುವರ್ಣ, ಶಿವಕುಮಾರ್ ಅಂಬಲಪಾಡಿ, ವಿಜಯ ಕೊಡವೂರು ಉಪಸ್ಥಿತರಿದ್ದರು.