ಸ್ವಯಂಚಾಲಿತ ಹವಾಮಾನ ಕೇಂದ್ರ ಹಾಗೂ ಮಳೆ ಮಾಪನ ಕೇಂದ್ರಗಳ ಮೇಲ್ವಿಚಾರಣೆ ಸಮಿತಿ ಸಭೆ ತಹಸೀಲ್ದಾರ್ ಮಂಜುಳಾ ಎಂ. ಅಧ್ಯಕ್ಷತೆಯಲ್ಲಿ ನಡೆಯಿತು. ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಪ್ರಮೋದ್ ಸಿ.ಎಂ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಗುರುಪ್ರಸಾದ್ ಉಪಸ್ಥಿತರಿದ್ದರು.
ಸುಳ್ಯ: ಸ್ವಯಂಚಾಲಿತ ಹವಾಮಾನ ಕೇಂದ್ರ ಹಾಗೂ ಮಳೆಮಾಪನ ಕೇಂದ್ರಗಳ ಮೇಲ್ವಿಚಾರಣೆ ಸಮಿತಿ ಸಭೆ ತಹಸೀಲ್ದಾರ್ ಮಂಜುಳಾ ಎಂ. ಅಧ್ಯಕ್ಷತೆಯಲ್ಲಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.
ಪಂಚಾಯಿತಿಗಳಲ್ಲಿರುವ ಮಳೆ ಮಾಪಕಗಳನ್ನು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಗ್ರಾಮ ಆಡಳಿತಾಧಿಕಾರಿಗಳು ಪರಿಶೀಲನೆ ನಡೆಸಬೇಕು. ಮಾಪಕಗಳನ್ನು ಸೂಕ್ತ ಸ್ಥಳದಲ್ಲಿ ಮಳೆ ನೀರು ಬೀಳಲು ಯಾವುದೇ ಅಡೆ ತಡೆ ಇಲ್ಲದಂತೆ ಇರಿಸಬೇಕು ಎಂದು ತಹಸೀಲ್ದಾರ್ ಸೂಚನೆ ನೀಡಿದರು. ಸೂಕ್ತ ಸ್ಥಳದಲ್ಲಿ ಇಲ್ಲದಿದ್ದರೆ ಅದನ್ನು ಸ್ಥಳಾಂತರ ಮಾಡಲು ಕ್ರಮ ಕೈಗೊಳ್ಳಬೇಕು ಎಂದರು.
ಮಾಪಕ ಅಳವಡಿಸಿದ ಕಂಪನಿಯವರು ಮಾಪನವನ್ನು ಪರಿಶೀಲಿಸಿ ತಾಂತ್ರಿಕವಾಗಿ ಸರಿ ಇದೆ ಎಂದು ಖಾತ್ರಿಪಡಿಸಬೇಕು ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು. ತಾಲೂಕಿನ ವಿವಿಧ ಕಡೆಗಳಲ್ಲಿ ಮಾಪಕ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಸಭೆಯಲ್ಲಿ ಅಧಿಕಾರಿಗಳು ತಿಳಿಸಿದರು. ಕಂಪನಿಯವರು ಬಂದು ಪರಿಶೀಲನೆ ನಡೆಸಿ ತಾಂತ್ರಿಕವಾಗಿ ಸರಿಪಡಿಸಲು ಸೂಚಿಸಲು ನಿರ್ಧರಿಸಲಾಯಿತು. ಪ್ರತಿ ದಿನದ ಮಳೆ ದಾಖಲೆಯನ್ನು ಇಲಾಖೆಗಳು ಪಂಚಾಯಿತಿಗಳಿಗೆ ನೀಡಬೇಕು. ಮಾಪನ ಸರಿಯಾಗಿದೆಯೇ ಎಂದು ಪರಿಶೀಲನೆ ನಡೆಸಿ ಪ್ರತಿ ವಾರ ವರದಿ ನೀಡಬೇಕು ಎಂದು ತಹಸೀಲ್ದಾರ್ ಸೂಚಿಸಿದರು.
ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಪ್ರಮೋದ್ ಸಿ.ಎಂ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಗುರುಪ್ರಸಾದ್ ಉಪಸ್ಥಿತರಿದ್ದರು. ಸಹಾಯಕ ತೋಟಗಾರಿಕಾ ಅಧಿಕಾರಿ ಅರಬಣ್ಣ ಪೂಜೇರಿ ಸ್ವಾಗತಿಸಿ, ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ಸುಹಾನಾ ವಂದಿಸಿದರು. ವಿವಿಧ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಆಡಳಿತಾಧಿಕಾರಿಗಳು ಉಪಸ್ಥಿತರಿದ್ದರು.