ಬೈಂದೂರು ರೈತಸಂಘದ ನೂತನ ಕಚೇರಿಯನ್ನು ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್.ಪ್ರಕಾಶ್ಚಂದ್ರ ಶೆಟ್ಟಿ ಉದ್ಘಾಟಿಸಿದರು. ನೆಲ್ಯಾಡಿ ದೀಪಕ್ ಕುಮಾರ್ ಶೆಟ್ಟಿ, ಹೆರಿಯಣ್ಣ ಪೂಜಾರಿ, ರಘುಪತಿ, ಗಣೇಶ ಪೂಜಾರಿ ಇತರರು ಇದ್ದರು. 
ಉಡುಪಿ

ರೈತರ ಧ್ವನಿಯಾಗಿ ನಿಂತಿದೆ ಬೈಂದೂರು ರೈತಸಂಘ

ಬೈಂದೂರು: ಗ್ರಾಮೀಣ ಪ್ರದೇಶದಲ್ಲಿನ ಜನರಿಗೆ, ಕೃಷಿಕರಿಗೆ ನೆರವಾಗುವ ಉದ್ದೇಶದಿಂದ ಬೈಂದೂರು ರೈತಸಂಘ ಜನರ ಬಳಿಗೆ ಹೋಗಿ ಸೇವೆ ಮಾಡುವ ಮೂಲಕ ಈ ಭಾಗದ ರೈತರನ್ನು ಬಲಪಡಿಸುವ ನಿಟ್ಟಿನಲ್ಲಿ ರೈತರ ಧ್ವನಿಯಾಗಿ ನಿಂತಿದೆ ಎಂದು ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘ ಅಧ್ಯಕ್ಷ ಎಸ್.ಪ್ರಕಾಶ್ಚಂದ್ರ ಶೆಟ್ಟಿ ಹೇಳಿದರು.
ಬೈಂದೂರು ರೈತಸಂಘದ ನೂತನ ಕಚೇರಿ ಉದ್ಘಾಟಿಸಿ ಮಾತನಾಡಿದರು. ಕರಾವಳಿ ಭಾಗದಲ್ಲಿ ಕೃಷಿಕರಿಗೆ ಸಂಘಟಿತ ಹೋರಾಟದ ದೊಡ್ಡ ವೇದಿಕೆಗಳಿಲ್ಲ. ರೈತರ ಸಮಸ್ಯೆಗಳಿಗೆ ಹೋರಾಟದಿಂದ ಮಾತ್ರ ಪರಿಹಾರ ಸಾಧ್ಯ. ಆದರೂ ಕೇವಲ ಹೋರಾಟದಿಂದಲೇ ಬೇಡಿಕೆ ಈಡೇರಿಸಿಕೊಳ್ಳಲಾಗುವುದಿಲ್ಲ. ಬೈಂದೂರಿನ ಇತಿಹಾಸದಲ್ಲಿ ಅತೀ ದೀರ್ಘ ಕಾಲದ ಹೋರಾಟ ನಡೆಸಿದ್ದಾರೆ ಎನ್ನುವ ದಾಖಲೆ ಬೈಂದೂರು ರೈತಸಂಘಕ್ಕಿದೆ. ಸರ್ಕಾರ, ಇಲಾಖೆ ಆದಷ್ಟು ಶೀಘ್ರ ರೈತರಿಗೆ ನ್ಯಾಯ ಒದಗಿಸಬೇಕಿದೆ ಎಂದರು.
ಕೆಆರ್‌ಎಸ್ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ರಘುಪತಿ, ಗಣೇಶ ಪೂಜಾರಿ, ನಾಗಪ್ಪ ಮರಾಠಿ, ಲಿಮೋನ್ ಬೈಂದೂರು, ಪದ್ಮಾಕ್ಷ ಗೋಳಿಬೇರು, ಹಿರಿಯರಾದ ಹೆರಿಯಣ್ಣ ಪೂಜಾರಿ ಗೋಳಿಬೇರು, ಕೇಶವ ಪೂಜಾರಿ ಅಂತಾರ್, ರೈತರು ಹಾಗೂ ರೈತ ಮುಖಂಡರು ಇದ್ದರು. ಅರುಣ್ ಕುಮಾರ್ ಶಿರೂರು ಸ್ವಾಗತಿಸಿದರು. ಸುಭಾಷ್ ಗಂಗನಾಡು ವಂದಿಸಿದರು.

ಕಳೆದ ನಾಲ್ಕು ತಿಂಗಳುಗಳಿಂದ ನ್ಯಾಯಕ್ಕಾಗಿ ಬೈಂದೂರು ರೈತರು ಹೋರಾಟ ನಡೆಸುತ್ತಿದ್ದಾರೆ. ಸರ್ಕಾರದಿಂದ ನ್ಯಾಯ ದೊರೆಯುವವರೆಗೆ ಯಾವುದೇ ಕಾರಣಕ್ಕೂ ಪ್ರತಿಭಟನೆ ಹಿಂಪಡೆಯುವುದಿಲ್ಲ. ವರ್ಷ ಕಳೆದರೂ ಪ್ರತಿಭಟನೆ ಮುಂದುವರಿಸುತ್ತೇವೆ. ಹೀಗಾಗಿ ರೈತರ ಚರ್ಚೆ, ಕಾರ್ಯಕ್ರಮ, ವಿಚಾರ ವಿನಿಮಯದ ಉದ್ದೇಶದಿಂದ ರೈತರ ಕಚೇರಿ ಆರಂಭವಾಗಿದ್ದು ಬೈಂದೂರು ಕ್ಷೇತ್ರದ ಪ್ರತಿ ರೈತರು ಮುಕ್ತವಾಗಿ ಕಚೇರಿಯನ್ನು ಉಪಯೋಗಿಸಿಕೊಳ್ಳಬಹುದು.