ಸಂಸದ ಬಿ.ವೈ.ರಾಘವೇಂದ್ರ ನವದೆಹಲಿಯಲ್ಲಿ ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.  
ಉಡುಪಿ

ಬೈಂದೂರು ರೈಲ್ವೆ ನಿಲ್ದಾಣ ಮೇಲ್ದರ್ಜೆಗೆ

ಬೈಂದೂರು: ಶ್ರೀಕ್ಷೇತ್ರ ಕೊಲ್ಲೂರು ಮೂಕಾಂಬಿಕಾ ದೇವಾಲಯಕ್ಕೆ ನಿತ್ಯ ಆಗಮಿಸುವ ಲಕ್ಷಾಂತರ ಭಕ್ತರ ಅನುಕೂಲಕ್ಕಾಗಿ ಮೂಕಾಂಬಿಕಾ ರಸ್ತೆ(ಬೈಂದೂರು) ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೇರಿಸಿ, ಹೆಚ್ಚುವರಿ ಸೌಲಭ್ಯ ಒದಗಿಸಿ, ಎಲ್ಲ ಪ್ರಮುಖ ರೈಲುಗಳು ನಿಲುಗಡೆಯಾಗುವಂತೆ ಮಾಡಬೇಕೆಂದು ಸಂಸದ ಬಿ.ವೈ.ರಾಘವೇಂದ್ರ ನವದೆಹಲಿಯಲ್ಲಿ ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣಗೆ ಮನವಿ ಸಲ್ಲಿಸಿದರು.

ಮೂಕಾಂಬಿಕಾ ರಸ್ತೆ(ಬೈಂದೂರು) ರೈಲ್ವೆ ನಿಲ್ದಾಣ ಕೊಲ್ಲೂರು ದೇವಾಲಯದಿಂದ 27 ಕಿ.ಮೀ. ದೂರದಲ್ಲಿದ್ದು, ಬೈಂದೂರಿನಿಂದ ಕೊಲ್ಲೂರಿಗೆ ರಾ.ಹೆ.766ಸಿ ಮೂಲಕ ನೇರ ರಸ್ತೆ ಸಂಪರ್ಕ, ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್‌ಗಳ ಸೇವೆ ಲಭ್ಯವಿದೆ. ಕೇರಳ, ತಮಿಳುನಾಡು, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಗೋವಾ ಮತ್ತಿತರ ರಾಜ್ಯಗಳಿಂದ ರೈಲಿನ ಮೂಲಕ ಆಗಮಿಸುವ ಭಕ್ತರಿಗೆ ಬೈಂದೂರು ಹೆಚ್ಚು ಅನುಕೂಲಕರ ಮತ್ತು ಹತ್ತಿರದ ನಿಲ್ದಾಣವಾಗಿದೆ. ಬೈಂದೂರನ್ನು ಆದ್ಯತೆ ರೈಲ್ವೆ ನಿಲ್ದಾಣವಾಗಿ ಗುರುತಿಸುವುದರಿಂದ ಭಕ್ತರಿಗೆ ಅನುಕೂಲವಾಗಲಿದೆ. ಮರವಂತೆ ಕಡಲತೀರ ಹಾಗೂ ಒತ್ತಿನೆಣೆ ಸೂರ್ಯಾಸ್ತ ತಾಣ ಸೇರಿದಂತೆ ಆ ಭಾಗದ ಪ್ರವಾಸೋದ್ಯಮಕ್ಕೂ ಹೆಚ್ಚಿನ ಉತ್ತೇಜನ ದೊರೆಯಲಿದೆ ಎಂದು ಮನವರಿಕೆ ಮಾಡಿದರು.

ಪ್ರಮುಖ ರೈಲುಗಳ ನಿಲುಗಡೆಗೆ ಕೋರಿಕೆ

ಮತ್ಸ್ಯಗಂಧ ಎಕ್ಸ್‌ಪ್ರೆಸ್ ಹಾಗೂ ಪಂಚಗಂಗಾ ಎಕ್ಸ್‌ಪ್ರೆಸ್(16596/16595) ರೈಲುಗಳಿಗೆ ಸೇನಾಪುರದಲ್ಲಿ, ಮೆಮು ರೈಲಿಗೆ ಬೈಂದೂರು ತಾಲೂಕಿನ ಬಿಜೂರಿನಲ್ಲಿ ಹಾಗೂ ಮಡಗಾಂವ್-ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಮೂಕಾಂಬಿಕಾ ರಸ್ತೆ(ಬೈಂದೂರು) ನಿಲ್ದಾಣದಲ್ಲಿ ನಿಲುಗಡೆ ನೀಡುವಂತೆ ಮನವಿ ಮಾಡಿದರು. ಎರ್ನಾಕುಲಂ-ಪುಣೆ ಎಕ್ಸ್‌ಪ್ರೆಸ್, ಟಿವಿಸಿ-ಹಜರತ್ ನಿಜಾಮುದ್ದೀನ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್, ಕೊಚ್ಚುವೇಲಿ-ಋಷಿಕೇಶ್ ಎಕ್ಸ್‌ಪ್ರೆಸ್, ಕೊಯಮತ್ತೂರು-ಹಿಸ್ಸಾರ್ ಎಸಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್, ಕೊಚ್ಚುವೇಲಿ-ಅಮೃತಸರ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್, ಎಲ್‌ಟಿಟಿ-ತಿರುವನಂತಪುರಂ ನಾರ್ತ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಹಾಗೂ ಮಂಗಳೂರು, ಮೂಡುಬಿದಿರೆ ಭಾಗದ ಪ್ರಯಾಣಿಕರಿಗೆ ಪ್ರಮುಖವಾದ ಮಂಗಳಾ ಲಕ್ಷದ್ವೀಪ್ ಎಕ್ಸ್‌ಪ್ರೆಸ್ ರೈಲುಗಳಿಗೂ ಬೈಂದೂರು ನಿಲ್ದಾಣದಲ್ಲಿ ನಿಲುಗಡೆ ಕಲ್ಪಿಸುವಂತೆ ಒತ್ತಾಯಿಸಿದರು.