ಬೈಂದೂರು ಉತ್ಸವ ಕುರಿತ ಪೂರ್ವಭಾವಿ ಸಭೆ ಶಾಸಕ ಗುರುರಾಜ ಗಂಟಿಹೊಳೆ ಅಧ್ಯಕ್ಷತೆಯಲ್ಲಿ ನಡೆಯಿತು. 
ಉಡುಪಿ

ಜ.24ರಿಂದ ಸಂಭ್ರಮದ ಬೈಂದೂರು ಉತ್ಸವ

ಬೈಂದೂರು: ಸಮೃದ್ಧ ಬೈಂದೂರು, ವಿವಿಧ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಬೈಂದೂರಿನ ಇತಿಹಾಸದ ದ್ವೀತೀಯ ವರ್ಷದ ಸಾಂಸ್ಕೃತಿಕ ಸಂಭ್ರಮ ಬೈಂದೂರು ಉತ್ಸವ ಜ.24, 25 ಹಾಗೂ 26ರಂದು ನಡೆಯಲಿದೆ ಎಂದು ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು.
ಭಾನುವಾರ ಉದ್ಯಮಿ ಜಯಾನಂದ ಹೋಬಳಿದಾರ್ ನಿವಾಸದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾಹಿತಿ ನೀಡಿದರು.
*ಉತ್ಸವದ ಉದ್ದೇಶ: ಬೈಂದೂರು ಕ್ಷೇತ್ರದಲ್ಲಿ ಸಾಂಸ್ಕೃತಿಕ ವೇದಿಕೆ ಮೂಲಕ ಅಭಿವೃದ್ಧಿ ಪರಿಕಲ್ಪನೆಯ ಉದ್ದೇಶದಿಂದ ಮತ್ತು ಜಾಗತಿಕ ಮಟ್ಟದಲ್ಲಿ ಬೈಂದೂರು ಕ್ಷೇತ್ರದವರನ್ನು ಒಗ್ಗೂಡಿಸುವ ಚಿಂತನೆಯಲ್ಲಿ ಬೈಂದೂರು ಉತ್ಸವವನ್ನು ಆಯೋಜಿಸಲಾಗುತ್ತಿದೆ. ಇಲ್ಲಿನ ಪ್ರವಾಸೋದ್ಯಮದ ಅವಕಾಶಗಳನ್ನು ಪರಿಚಯಿಸುವುದು, ಆ ಮೂಲಕ ಜಾಗತಿಕ ಮಟ್ಟದ ಹೂಡಿಕೆದಾರರನ್ನು ಬೈಂದೂರಿಗೆ ಕರೆತರುವುದು ಹಾಗೂ ಕ್ಷೇತ್ರದ ಪ್ರತಿಭೆಗಳಿಗೆ ಅವಕಾಶ ನೀಡುವ ಉದ್ದೇಶ ಹೊಂದಲಾಗಿದೆ.
ಜಯಾನಂದ ಹೋಬಳಿದಾರ್, ಸುರೇಶ ಬಟ್ವಾಡಿ, ಆನಂದ ಮದ್ದೋಡಿ, ಬೈಂದೂರು ಚಂದ್ರಶೇಖರ ನಾವಡ, ಪುಷ್ಪರಾಜ್ ಶೆಟ್ಟಿ, ಮಂಜಮ್ಮ ಶೆಟ್ಟಿ, ಶ್ರೀಗಣೇಶ ಗಾಣಿಗ, ಶ್ರೀಧರ ವಸ್ರೆ ಇದ್ದರು.

ಈ ಬಾರಿ ಉತ್ಸವದಲ್ಲಿ ಏನೇನು ಇರಲಿದೆ?

ಇಸ್ರೋ ಸೇರಿದಂತೆ 25 ಇಂಜಿನೀಯರಿಂಗ್ ಕಾಲೇಜುಗಳು ವಿನೂತನ ರೀತಿಯಲ್ಲಿ ಹೊಸ ಆವಿಷ್ಕಾರಗಳಿಂದ ಕೂಡಿದ ವಿಜ್ಞಾನ ಮೇಳವನ್ನು ಆಯೋಜಿಸಲು ಕೈಜೋಡಿಸಿವೆ. ವಿಶೇಷವಾಗಿ ಈ ಬಾರಿ ಜಾನುವಾರು ಉತ್ಸವ, ಫಲಪುಷ್ಪ ಪ್ರದರ್ಶನ, ಕೃಷಿ ಮೇಳಗಳನ್ನು ಆಯೋಜಿಸಲಾಗುತ್ತಿದೆ.
ಪ್ರತಿ ಹಳ್ಳಿಗಳಲ್ಲಿಯೂ ಉತ್ಸವದ ಉದ್ದೇಶ ಹಾಗೂ ಪ್ರಯೋಜನಗಳ ಬಗ್ಗೆ ತಿಳಿಹೇಳುವ ನಿಟ್ಟಿನಲ್ಲಿ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಗ್ರಾಮೋತ್ಸವ ಆಯೋಜಿಸಲಾಗಿದೆ. ಈಗಾಗಲೇ ನೂರಕ್ಕೂ ಹೆಚ್ಚು ಇಲಾಖೆಗಳೊಂದಿಗೆ ಉತ್ಸವ ಸಮಿತಿ ಸಂಪರ್ಕದಲ್ಲಿದ್ದು, ರೂಪುರೇಷೆಗಳನ್ನು ಸಿದ್ಧಪಡಿಸಲಾಗುತ್ತಿದೆ. ಕಾರ್ಟೂನ್ ಹಬ್ಬ, ಮನರಂಜನಾ ಪಾರ್ಕ್, ಜನಪದ ಹಬ್ಬ, ಸಂಜೀವಿನಿ ಸಂಘದ ಗ್ರಾಮೀಣ ಸಂತೆ, ಕಂಬಳೋತ್ಸವ, ಸೋಮೇಶ್ವರದಲ್ಲಿ ಬೃಹತ್ ಬೀಚ್ ಉತ್ಸವ, ಕರಾವಳಿಯ ಖಾದ್ಯಗಳು, ವಸ್ತುಪ್ರದರ್ಶನ ಮತ್ತು ಮಾರಾಟ ಮಳಿಗೆಗಳು ಈ ಉತ್ಸವದಲ್ಲಿ ಪಾಲ್ಗೊಳ್ಳಲಿವೆ. ಬ್ಯಾಂಕಿಂಗ್, ಕೈಗಾರಿಕೆ, ಸಹಕಾರಿ ಕ್ಷೇತ್ರ ಸೇರಿದಂತೆ ವಿವಿಧ ಗೋಷ್ಠಿಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಬೈಂದೂರಿನ ಬೇರೆ ಬೇರೆ ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.