ಗಾಯಗೊಂಡು ಉಡುಪಿಯ ಜಿಲ್ಲಾಸ್ಪತ್ರೆಯಲ್ಲಿ ದಾಖಲಾದ ಪಿಎಸ್​ಐ ತೇಜಸ್ವಿ ಅವರ ಆರೋಗ್ಯ ವಿಚಾರಿಸಿದ ಎಸ್ಪಿ ಹರಿರಾಂ ಶಂಕರ್​. ಪೊಲೀಸ್​ ಗುಂಡೇಟಿನಿಂದ ಗಾಯಗೊಂಡು ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿರುವ ಪ್ರಮುಖ ಆರೋಪಿ ರಾಜು. ಆರೋಪಿಗಳಾದ ಅಜಯ್​ ರಸ್ತೋಗಿ, ಜಿಯಾಹುಲ್​ ವಜೂಲ್​ ಶೇಖ್​. ಹತ್ಯೆಯಾದ ಡೇವಿಡ್​ ಡಿಸೋಜ. 
ಉಡುಪಿ

ಗುಂಡಿಕ್ಕಿ ಡೇವಿಡ್​ ಹತ್ಯೆ ಪ್ರಕರಣ; ಮೂವರು ಸುಪಾರಿ ಕಿಲ್ಲರ್ಸ್​ ಬಂಧನ

* ಆರೋಪಿಯ ಕಾಲಿಗೆ ಶೂಟ್​ ಮಾಡಿದ ಪಿಎಸ್​ಐ ತೇಜಸ್ವಿ

* ಸಿನಿಮೀಯ ರೀತಿಯಲ್ಲಿ ನಡೆದ ಪೊಲೀಸ್​ ಕಾರ್ಯಾಚರಣೆ

ಉಡುಪಿ: ಕಾಪು ತಾಲೂಕು ಮುದರಂಗಡಿ ಎಂಬಲ್ಲಿ ಶುಕ್ರವಾರ (ಆ.7) ಮಧ್ಯಾಹ್ನ 3:45ರ ವೇಳೆಯಲ್ಲಿ ಮುದರಂಗಡಿ ಗ್ರಾಪಂ ಮಾಜಿ ಅಧ್ಯಕ್ಷ ಹಾಗೂ ಗುತ್ತಿಗೆದಾರರಾಗಿದ್ದ ಡೇವಿಡ್​ ಡಿಸೋಜ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಮೂವರು ಸುಪಾರಿ ಕಿಲ್ಲರ್ಸ್​ಗಳನ್ನು ಸಿನಿಮೀಯ ರೀತಿಯಲ್ಲಿ ಬಂಧಿಸಿದ್ದಾರೆ.
ಬಂಧಿಸಲ್ಪಟ್ಟ ಮೂವರೂ ಆರೋಪಿಗಳು ಬೇರೆ ಬೇರೆ ರಾಜ್ಯದವರಾಗಿದ್ದಾರೆ. ಉತ್ತರ ಪ್ರದೇಶದ ಥಾಣಾ ಪಿಲ್ವದ ರಾಜು (42), ಉತ್ತರಾಖಂಡದ ಅಜಯ್​ ರಸ್ತೋಗಿ ಯಾನೆ ಅನ್ಮೋಲ್​ (23), ಬಿಹಾರ ರಾಜ್ಯದ ಜಿಯಾಹುಲ್​ ವಜೂಲ್​ ಶೇಖ್​ ಯಾನೆ ದೀಪಕ್​ (38) ಬಂಧಿತರು.

ಹತ್ಯೆ ಮಾಡಿ ಬೈಕ್​ನಲ್ಲಿ ಪರಾರಿ

ಮುದರಂಗಡಿಯಲ್ಲಿ ಸೆಂಟ್​ ಕ್ಷೇವಿಯರ್​ ಚರ್ಚ್​ನ ಕಾಂಪ್ಲೆಕ್ಸ್​ನಲ್ಲಿ ಡೇವಿಡ್​ ಡಿಸೋಜ ಎಂಬವರು ಪ್ರಿನ್ಸ್​ ಎಂಟರ್​ಪೆಸಸ್​ ಹೆಸರಿನ ಉದ್ಯಮದ ಕಚೇರಿ ಹೊಂದಿದ್ದರು. ಶುಕ್ರವಾರ ಕಚೇರಿಗೆ ಬಂದ್ದಿದ್ದ ಅವರು ಮಧ್ಯಾಹ್ನ 3:45ರ ವೇಳೆಯಲ್ಲಿ ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ತನ್ನ ಕಾರಿನತ್ತ ಬಂದು ಬಾಗಿಲು ತೆರೆಯುತ್ತಿದ್ದಾಗ ಬೈಕ್​ನಲ್ಲಿ ಬಂದ ಅಪರಿಚಿತರಿಬ್ಬರಲ್ಲಿ ಓರ್ವ ಏಕಾಏಕಿ ಡೇವಿಡ್​ನನ್ನು ನೆಲಕ್ಕೆ ತಳ್ಳಿ ಕೂಡಲೇ ಅವರ ತಲೆಗೆ ಪಿಸ್ತೂಲ್​ನಿಂದ ಗುಂಡು ಹಾರಿಸಿ ಹತ್ಯೆ ಮಾಡಿ ಬೈಕ್​ ಏರಿ ಇಬ್ಬರೂ ಪರಾರಿಯಾಗಿದ್ದರು.

ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು

ಕಾರ್ಯಾಚರಣೆಯ ವೇಳೆ ಗಾಯಗೊಂಡಿದ್ದ ಕಾಪು ಪೊಲೀಸ್​ ಠಾಣೆಯ ಪಿಎಸ್​ಐ ತೇಜಸ್ವಿ ಹಾಗೂ ಕಾಲಿಗೆ ಗುಂಡೇಟು ತಗುಲಿ ಗಾಯಗೊಂಡಿದ್ದ ಪ್ರಮುಖ ಆರೋಪಿ ರಾಜು ಎಂಬಾತನನ್ನೂ ಚಿಕಿತ್ಸೆಗಾಗಿ ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಎಸ್ಪಿ ಹರಿರಾಮ್​ ಶಂಕರ್​ ಮಾರ್ಗದರ್ಶನದಲ್ಲಿ ಉಡುಪಿ ಡಿವೈಎಸ್ಪಿ ಬೆಳ್ಳಿಯಪ್ಪ ನೇತೃತ್ವದಲ್ಲಿ ಕಾಪು ಸಿಪಿಐ ಅಝ್ಮತ್​ ಅಲಿ ಜಿ., ಡಿಎಸ್​ಬಿ ವಿಭಾಗದ ಎಸ್​ಐ ಹರೀಶ್​, ಬೈಂದೂರು ಸಿಪಿಐ ಶಿವಕುಮಾರ್​, ಕುಂದಾಪುರ ಸಿಪಿಐ ಸಂತೋಷ್​ ಕಾಯ್ಕಿಣಿ, ಬೈಂದೂರು ಎಸ್​ಐ ಮಹೇಶ್​, ಕೊಲ್ಲೂರು ಎಸ್​ಐ ವಿನಯ್​, ಕಾರ್ಕಳ ಗ್ರಾಮಾಂತರ ಎಸ್​ಐ ಪ್ರಸನ್ನ ಎಂ.ಎಸ್​., ಪಡುಬಿದ್ರಿ ಎಸ್​ಐಗಳಾದ ಶಕ್ತಿವೇಲು ಹಾಗೂ ಅನಿಲ್​, ಶಿರ್ವ ಎಸ್​ಐಗಳಾಧ ಮಂಜುನಾಥ್​ ಮರಬದ, ಲೋಹಿತ್​ ಕುಮಾರ್​, ಪ್ರೊಬೆಷನರಿ ಎಸ್​ಐ ಶಿಫಾಝ್​ ಹಾಗೂ ಸಿಬ್ಬಂದಿ, ಜಿಲ್ಲಾ ಅಪರಾಧ ಪರಿಶೀಲನಾಧಿಕಾರಿ, ಬೆರಳಚ್ಚು, ಶ್ವಾನದಳ ಹಾಗೂ ಸಿಡಿಆರ್​ ಸೆಲ್​ ಉಡುಪಿ ಇವರು ಯಶಸ್ವಿ ಕಾರ್ಯಾಚರಣೆಯಲ್ಲಿದ್ದರು.

ಕೊಲೆ ಮಾಡಿ ಬಸ್ಸಿನಲ್ಲಿ ಹೊರಟರು!

ಡೇವಿಡ್​ ಡಿಸೋಜ ಅವರನ್ನು ಹತ್ಯೆ ಮಾಡಿದ ಬಳಿಕ ಮೂವರೂ ಆರೋಪಿಗಳು ಪಡುಬಿದ್ರೆ ಬಳಿ ಭಟ್ಕಳದತ್ತ ಸಾಗುತ್ತಿದ್ದ ಬಸ್​ ಹತ್ತಿದ್ದರು. ಈ ವೇಳೆ ಕಾರ್ಯಾಚರಣೆ ಆರಂಭಿಸಿದ್ದ ಪೊಲೀಸರು, ಖಚಿತ ಮಾಹಿತಿ ಮೇರೆಗೆ ಆರೋಪಿಗಳಿದ್ದ ಬಸ್​ಅನ್ನು ಬೈಂದೂರಿನ ಒತ್ತಿನಾಣೆ ಎಂಬಲ್ಲಿ ತಡೆದು ನಿಲ್ಲಿಸಿದರು. ಪೊಲೀಸರು ತಪಾಸಣೆ ಆರಂಭಿಸಿದಾಗ ಮೂವರೂ ಆರೋಪಿಗಳು ಬಸ್​ನಿಂದ ಇಳಿದು ಓಡಿ ಹೋದರು. 

ಆರೋಪಿಯ ಕಾಲಿಗೆ ಗುಂಡೇಟು 

ಬಸ್​ನಿಂದ ಇಳಿದು ಓಡುತ್ತಿದ್ದ ಮೂವರನ್ನೂ ಬೆನ್ನಟ್ಟಿ ಹಿಡಿಯುವ ವೇಳೆ ಪ್ರಮುಖ ಆರೋಪಿ ರಾಜು ಎಂಬಾತ ಕಾಪು ಪೊಲೀಸ್​ ಠಾಣೆಯ ಪಿಎಸ್​ಐ ತೇಜಸ್ವಿ ಅವರನ್ನು ತಳ್ಳಿ ದೂಡಿಹಾಕಿ, ಆತನ ಬಳಿಯಿದ್ದ ಪಿಸ್ತೂಲಿನಿಂದ ಗುಂಡು ಹಾರಿಸಿದನು ಎನ್ನಲಾಗಿದೆ. ಈ ವೇಳೆ ಪೊಲೀಸರು ತಮ್ಮ ಜೀವ ರಕ್ಷಣೆಗಾಗಿ ಆರೋಪಿ ರಾಜು ಕಾಲಿಗೆ ಗುಂಡು ಹಾರಿಸಿದ್ದು, ನೆಲ್ಲಕ್ಕೆ ಬಿದ್ದ ರಾಜುವನ್ನು ಬಂಧಿಸಿದರು. ಪೊಲೀಸರಿಗೆ ಗುಂಡು ಹಾರಿಸಿ ಗಾಯಗೊಳಿಸಿದ ಬಗ್ಗೆ ರಾಜು ವಿರುದ್ಧ ಬೈಂದೂರು ಪೊಲೀಸ್​ ಠಾಣೆಯಲ್ಲಿ ಕೊಲೆ ಯತ್ನ ಹಾಗೂ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಪ್ರಕರಣ ದಾಖಲಾಗಿದೆ.

ಭಟ್ಕಳ, ಕುಮಟಾದಲ್ಲಿ ಇನ್ನಿಬ್ಬರು ಅರೆಸ್ಟ್​

ಪ್ರಮುಖ ಆರೋಪಿ ರಾಜುವನ್ನು ಬಂಧಿಸುವ ಕಾರ್ಯಾಚರಣೆ ವೇಳೆ ಇನ್ನಿಬ್ಬರು ಆರೋಪಿಗಳಾದ ಅಜಯ್​ ರಸ್ತೋಗಿ ಹಾಗೂ ಜಿಯಾಹುಲ್​ ವಜೂಲ್​ ಶೇಖ್​ ಓಡಿ ತಪ್ಪಿಸಿಕೊಂಡು ಮತ್ತೆ ಬಸ್​ ಹತ್ತಿ ತೆರಳಿದ್ದರು. ಕಾರ್ಯಾಚರಣೆ ಮುಂದುವರಿಸಿದ ಉಡುಪಿ ಪೊಲೀಸರು, ಕುಮಟಾ ಹಾಗೂ ಭಟ್ಕಳದ ಪೊಲೀಸರ ಸಹಕಾರದಲ್ಲಿ ಅವರಿಬ್ಬರನ್ನೂ ಬಂಧಿಸುವಲ್ಲಿ ಯಶಸ್ವಿಯಾದರು.
"

ಡೇವಿಡ್​ ಡಿಸೋಜ ಹತ್ಯೆಗೆ ಹಣಕಾಸು ವಿಚಾರದಲ್ಲಿನ ವೈಮನಸ್ಸು ಕಾರಣವಾಗಿತ್ತು ಎನ್ನುವುದು ತನಿಖೆಯಿಂದ ತಿಳಿದುಬಂದಿದೆ. ಅದೇ ಕಾರಣಕ್ಕೆ ಸುಪಾರಿ ನೀಡಿ ಹತ್ಯೆ ಮಾಡಲಾಗಿದ್ದು, 24 ಗಂಟೆಯೊಳಗೆ ಅನ್ಯ ರಾಜ್ಯದ ಮೂವರು ಆರೋಪಿಗಳನ್ನು ಬಂಧಿಸಿದ್ದೇವೆ. ಹತ್ಯೆಗೆ ಬಳಸಿದ್ದ ಪಿಸ್ತೂಲ್​ ಹಾಗೂ ಪಡುಬಿದ್ರೆ ಸಮೀಪದ ಎರ್ಮಾಳಿನಲ್ಲಿ ಬಿಟ್ಟು ಹೋಗಿದ್ದ ಬೈಕ್​ ವಶಕ್ಕೆ ಪಡೆದಿದ್ದೇವೆ. ಸುಪಾರಿ ಕೊಟ್ಟವರು ಹಾಗೂ ಸ್ಥಳೀಯವಾಗಿ ಹತ್ಯೆಗೆ ಸಹಕರಿಸಿದವರು, ಆಶ್ರಯ ನೀಡಿದವರು ಯಾರೆಂದು ತನಿಖೆ ನಡೆಸಲಾಗುತ್ತಿದೆ.

— ಹರಿರಾಮ್​ ಶಂಕರ್​. ಜಿಲ್ಲಾ ಪೊಲೀಸ್​ ವರಿಷ್ಠ.