ಡೇವಿಡ್ ಡಿಸೋಜ ಹತ್ಯೆಗೆ ಹಣಕಾಸು ನೆರವು ನೀಡಿದ್ದ ಬಿಹಾರ ರಾಜ್ಯದ ಆರೋಪಿ ಸೂರಜ್ ಅರ್ಜುನ್ ಪ್ರಸಾದ್.
* ಉತ್ತರಾಖಂಡದಲ್ಲಿ ಬಿಹಾರ ರಾಜ್ಯದ ಯುವಕ ವಶಕ್ಕೆ
* ಈವರೆಗೆ ಒಟ್ಟು 8 ಜನರ ದಸ್ತಗಿರಿ ಮಾಡಿದ ಪೊಲೀಸರು
ಉಡುಪಿ: ಕಾಪು ತಾಲೂಕಿನ ಮುದರಂಗಡಿಯಲ್ಲಿ ಆ.7ರಂದು ಮಧ್ಯಾಹ್ನ ನಡೆದಿದ್ದ ಉದ್ಯಮಿ ಡೇವಿಡ್ ಡಿಸೋಜ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಇನ್ನೋರ್ವ ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಬಿಹಾರ ರಾಜ್ಯದ ಶೇಖಪುರ ಸಮೀಪದ ಕಟ್ಟಾರಿ ನಿವಾಸಿ ಸೂರಜ್ ಅರ್ಜುನ್ ಪ್ರಸಾದ್ (31) ಬಂಧಿತ. ಹಂತಕರ ಪತ್ತೆ ಕಾರ್ಯಾಚರಣೆಗಾಗಿ ನಿಯೋಜನೆಗೊಂಡಿದ್ದ ಕುಂದಾಪುರ ಠಾಣೆ ಪೊಲೀಸರು ಆರೋಪಿ ಸೂರಜ್ನನ್ನು ಉತ್ತರಾಖಂಡ ರಾಜ್ಯದ ನೈನಿತಾಲ್ ಜಿಲ್ಲೆಯ ಹಲ್ದ್ವಾನಿ ಬಳಿ ಬಂಧಿಸಿ ಕರೆತಂದಿದ್ದಾರೆ.
ಇತರ ಆರೋಪಿಗಳೊಂದಿಗೆ ಸೇರಿ ಹತ್ಯೆಗೆ ಒಳಸಂಚು ನಡೆಸಿ ಹಣಕಾಸು ಪೂರೈಕೆ ಮಾಡಿದ್ದ ಮೊಹಮ್ಮದ್ ಇರ್ಷಾದ್, ಚಿರಾಗ್ ಪೂಜಾರಿ, ಸದಾನಂದ್ ದೇವಾಡಿಗ ಮತ್ತು ಕಿಶೋರ್ ರಾಮ ಪೂಜಾರಿ ಎಂಬವರನ್ನೂ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಡೇವಿಡ್ ಡಿಸೋಜ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ ಪ್ರಕರಣದಲ್ಲಿ ಈಗಾಗಲೇ ನೇರವಾಗಿ ಭಾಗಿಯಾಗಿದ್ದ ಅನ್ಮೋಲ್ ರಸ್ತೋಗಿ, ಜಿಯಾಹುಲ್ ವಾಜುಲ್ ಶೇಖ್ ಇವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಪ್ರಮುಖ ಆರೋಪಿ ರಾಜು (ಪೊಲೀಸರ ಗುಂಡೇಟಿನಿಂದ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಆರೋಪಿ) ವಿರುದ್ಧ ಪೊಲೀಸರ ಹತ್ಯೆಗೆ ಯತ್ನಸಿದ ಆರೋಪದಡಿ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಸ್ಪತ್ರೆಯಿಂದ ಬಿಡುಗಡೆಗೊಂಡ ಬಳಿಕ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲಾಗುವುದು. ಈವರೆಗೆ ಒಟ್ಟು 8 ಆರೋಪಿಗಳನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಎಸ್ಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.