ವಿಜಯವಾಣಿ ಸುದ್ದಿಜಾಲ ಕುಂದಾಪುರ
ಶಾಲೆಗಳಿಗೆ ಬೇಸಿಗೆ ರಜೆ ಮುಗಿಯುತ್ತಾ ಬಂದಿದ್ದು, ಶಾಲಾ ಕಾಲೇಜು ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಆದರೆ ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳಿಗೆ ಬಸ್ ಸಮಸ್ಯೆ, ಪಠ್ಯಕ್ಕಿಂತ ಪ್ರಯಾಣದ ಚಿಂತೆ ಕಾಡುತ್ತಿದೆ.
ಜೂನ್ ಮೊದಲ ವಾರ ಶಾಲೆ, ಕಾಲೇಜು ಆರಂಭವಾಗಲಿವೆ. ಖಾಸಗಿ ವಿದ್ಯಾಸಂಸ್ಥೆಗಳಿಗೆ ಹೋಗುವವರ ಶಾಲೆಗಳ ಆಯ್ಕೆ, ಪ್ರವೇಶ ಬಹುತೇಕ ಮುಗಿದು ಪುಸ್ತಕ, ಸಮವಸ್ತ್ರ ವ್ಯವಸ್ಥೆಯೂ ಕೆಲವು ಶಾಲೆ, ಕಾಲೇಜುಗಳಲ್ಲಿ ಆಗಿದ್ದರೆ, ಕೆಲವು ಶಾಲೆ, ಕಾಲೇಜುಗಳಲ್ಲಿ ಆರಂಭದ ವಾರ ವ್ಯವಸ್ಥೆ ಮಾಡುತ್ತಾರೆ. ಆದರೆ ಮುಖ್ಯವಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸಮಸ್ಯೆ ಆಗುವುದು ಬಸ್‌ನದ್ದು.
ಗ್ರಾಮೀಣ ಪ್ರದೇಶಗಳ ಶಾಲಾ, ಕಾಲೇಜು ವಿದ್ಯಾರ್ಥಿಗಳು ಶಾಲಾ ಬಸ್‌ಗಳ ಹೊರತಾಗಿ ಆಶ್ರಯಿಸುವುದು ಸರ್ಕಾರಿ ಮತ್ತು ಖಾಸಗಿ ಬಸ್‌ಗಳನ್ನು. ಸಮಯಕ್ಕೆ ಸರಿಯಾಗಿ ಬಾರದ ಮತ್ತು ತಡವಾಗಿ ಬರುವ ಬಸ್‌ಗಳಿಂದಾಗಿ ವಿದ್ಯಾರ್ಥಿಗಳು ತರಗತಿಗಳನ್ನು ತಪ್ಪಿಸಿಕೊಳ್ಳುವುದು, ಹಾಜರಾತಿ ತಪ್ಪಿಸಿಕೊಳ್ಳುವುದೂ ಇದೆ. ಕುಂದಾಪುರ ಮತ್ತು ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ಖಾಸಗಿ ಮತ್ತು ಸರ್ಕಾರಿ ಬಸ್ ಕೊರತೆ ಇದೆ. ಅಪರೂಪಕೊಮ್ಮೆ ಸಂಚರಿಸುವ ಬಸ್‌ಗಳನ್ನೇ ಈ ಭಾಗದ ಜನರು ನೆಚ್ಚಿಕೊಂಡಿದ್ದು, ಶಾಲಾ- ಕಾಲೇಜು ಪ್ರಾರಂಭವಾದ ಬಳಿಕ ಬೆಳಗ್ಗೆ ಮತ್ತು ಸಂಜೆ ವೇಳೆ ಬಸ್ಸಿನಲ್ಲಿ ಪ್ರಯಾಣಿಸುವುದು ಸಾಹಸವೇ ಸರಿ.
ಅಮಾಸೆಬೈಲು, ಜಡ್ಡಿನಗದ್ದೆ, ಕಳೆಸಂಕ, ಆಜ್ರಿ, ಕಮಲಶಿಲೆ, ಕೆರಾಡಿ, ನೂಜಾಡಿ, ಆಲೂರು, ಹಕ್ಲಾಡಿ, ಪಡುಕೋಣೆ, ಬಡಾಕೆರೆ, ಮೊವಾಡಿ, ಬಗ್ವಾಡಿ, ಬೆಳ್ಳಾಲ, ಹೆಮ್ಮಕ್ಕಿ, ಕಂದಾವರ, ಮೂಡ್ಲಕಟ್ಟೆ-ಉಳ್ಳೂರು, ಪಡುವರಿ, ದೊಂಬೆ, ತಾರಾಪತಿ ಮೊದಲಾದ ಪ್ರದೇಶಗಳಿಗೆ ಸಮರ್ಪಕ ಬಸ್ ವ್ಯವಸ್ಥೆ ಇಲ್ಲ. ಬಸ್‌ಗೆ ಕಾಯುವ ವಿದ್ಯಾರ್ಥಿಗಳು ಬಸ್ ಸಿಗದೆ ನಿಲ್ದಾಣದಲ್ಲೇ ಉಳಿಯುವುದೂ ಇದೆ. ನಂತರ ದುಬಾರಿ ಹಣ ತೆತ್ತು ಆಟೋ, ಕಾರು ಮೂಲಕ ಶಾಲಾ ಕಾಲೇಜು ಸೇರುವುದಿದೆ. ಶಂಕರನಾರಾಯಣ- ಕೊಲ್ಲೂರು ಮಾರ್ಗದಲ್ಲಿ ವಂಡ್ಸೆ, ನೆಂಪು, ನೇರಳಕಟ್ಟೆ, ಅಂಪಾರು ಭಾಗದ ವಿದ್ಯಾರ್ಥಿಗಳಿಗೆ ಉಡುಪಿ- ಶಂಕರನಾರಾಣ ಮಾರ್ಗದಲ್ಲಿ ವಿದ್ಯಾರ್ಥಿಗಳು ಬೆಳಗ್ಗೆ ಬಸ್‌ಗಳು ಸಿಗದೆ ಪಡುವ ಪಾಡು ಹೇಳತೀರದು. ಕೊಲ್ಲೂರು- ಶಂಕರನಾರಾಯಣ ಮಾರ್ಗದಲ್ಲಿ ಬಸ್ ಸಂಪರ್ಕ ಇಲ್ಲದೆ ಇರುವುದರಿಂದ ಅನೇಕ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಶಂಕರನಾರಾಯಣ ಪದವಿ ಕಾಲೇಜಿಗೆ ಹೋಗಲು ಸಾಧ್ಯವಾಗದೆ, ಕುಂದಾಪುರ ಕಾಲೇಜಿಗೆ ಸೇರ್ಪಡೆಯಾಗುತ್ತಿದ್ದಾರೆ.
ಇನ್ನೂ ದೊರೆತಿಲ್ಲ ಕೆಎಸ್‌ಆರ್‌ಟಿಸಿ ಭಾಗ್ಯ
ಗ್ರಾಮೀಣ ಪ್ರದೇಶಗಳಲ್ಲಿ ಕೆಲವೊಂದು ಖಾಸಗಿ ಬಸ್‌ಗಳು ಸಂಚರಿಸುತ್ತಿದ್ದರೆ, ಸರ್ಕಾರಿ ಬಸ್ ಸಂಚಾರ ಇಲ್ಲ. ಸರ್ಕಾರಿ ಬಸ್ಸಿಗಾಗಿ ಅನೇಕ ವರ್ಷಗಳಿಂದ ಬೇಡಿಕೆ ಇಟ್ಟು ಹೋರಾಟ ನಡೆಸುತ್ತಾ ಬಂದರೂ ಸರ್ಕಾರಿ ಬಸ್ ಭಾಗ್ಯ ಇನ್ನೂ ದೊರೆತಿಲ್ಲ. ಸಂಚರಿಸುವ ಬಸ್‌ಗಳಲ್ಲಿ ಸ್ಥಳಾವಕಾಶ ಕೊರತೆ. ಈ ಬಸ್‌ಗಳು ಪ್ರತಿನಿತ್ಯ ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದು, ಶಾಲೆ ಆರಂಭ ಹಾಗೂ ಸಂಜೆ ಬಿಡುವ ಸಮಯದಲ್ಲಿ ವಿದ್ಯಾರ್ಥಿಗಳು ಫುಟ್‌ಬೋರ್ಡ್ ಮೇಲೆ ನೇತಾಡಿಕೊಂಡು ಬರುವ ದೃಶ್ಯಗಳು ಸಾಮಾನ್ಯ. ಕೆಲವೊಮ್ಮೆ ಬಸ್ ಬಾರದೆ ಜನರು ಕಾಯುತ್ತಲೇ ಇರುತ್ತಾರೆ.
ಅನೇಕ ಕಡೆಗಳಲ್ಲಿಲ್ಲ ನಿಲುಗಡೆ
ಕುಂದಾಪುರ ಮತ್ತು ಬೈಂದೂರು ವ್ಯಾಪ್ತಿಯ ಅನೇಕ ಗ್ರಾಮೀಣ ಪ್ರದೇಶಗಳಲ್ಲಿ ಖಾಸಗಿ ಮತ್ತು ಸರ್ಕಾರಿ ಬಸ್ ಸಂಚಾರ ವಿರಳವಾಗಿದ್ದು, ಪ್ರಯಾಣಿಕರಿದ್ದರೂ ಅನೇಕ ಕಡೆಗಳಲ್ಲಿ ಬಸ್ ನಿಲ್ಲಿಸುವುದಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಈ ಶೈಕ್ಷಣಿಕ ವರ್ಷದಲ್ಲಾದರೂ ಸಮಸ್ಯೆ ಬಗೆಹರಿಸಬೇಕು ಎಂದು ವಿದ್ಯಾರ್ಥಿಗಳು ಮತ್ತು ಪಾಲಕರು ಆಗ್ರಹಿಸಿದ್ದಾರೆ.
ಕಳೆದ ವರ್ಷ ಸಾಕಷ್ಟು ತರಗತಿಗಳು ಸಮಯಕ್ಕೆ ಸರಿಯಾಗಿ ಬಾರದ ಮತ್ತು ತಡವಾಗಿ ಬರುವ ಬಸ್‌ಗಳಿಂದಾಗಿ ಸಮಸ್ಯೆಯಿಂದಾಗಿ ಮಿಸ್ ಆಗಿವೆ. ಈ ವರ್ಷವಾದರೂ ಸಮಸ್ಯೆ ಆಗದಿರಲಿ.
— ಸುರೇಂದ್ರ, ಸಂತ್ರಸ್ತ ವಿದ್ಯಾರ್ಥಿ
ಬೆಳಗ್ಗೆ ಏಳು ಗಂಟೆಯಿಂದ ಒಂಬತ್ತೂವರೆ ತನಕ ಮಕ್ಕಳಿಗೆ ಶಾಲೆ ಕಾಲೇಜಿಗೆ ಹೋಗುವ ಬಸ್ ಸಿಗುತ್ತಿಲ್ಲ. ಸಂಜೆ ನಾಲ್ಕೂವರೆಯಿಂದ ಮತ್ತೆ ಅದೇ ಚಿಂತೆಯಾಗಿ. ಬಸ್ ಸಿಗದೆ, ತಡವಾಗಿ ಮಕ್ಕಳು ಮನೆ ತಲುಪುವಾಗ ಸಂಜೆ ಏಳೂವರೆ ಗಂಟೆ ಆಗುವುದೂ ಇದೆ.
— ನಾಗರಾಜ್, ಪಾಲಕ