ಶಿಥಿಲಗೊಂಡ ಕರ್ಕಿ ಹಳೇ ಬಸ್ ನಿಲ್ದಾಣ.
ವಿಜಯವಾಣಿ ಸುದ್ದಿಜಾಲ ಕುಂದಾಪುರ
ತಲ್ಲೂರು- ನೇರಳಕಟ್ಟೆ ವಾರ್ಗದಲ್ಲಿರುವ ಕರ್ಕಿ ಬಸ್ ನಿಲ್ದಾಣ ಸಂಪೂರ್ಣ ಶಿಥಿಲಗೊಂಡಿದೆ. ಕುಸಿಯುವ ಭೀತಿಯಲ್ಲಿದ್ದು, ಹೊಸ ಬಸ್ ನಿಲ್ದಾಣ ನಿರ್ಮಿಸುವಂತೆ ಪ್ರಯಾಣಿಕರು ಆಗ್ರಹಿಸಿದ್ದಾರೆ.
50 ವರ್ಷಗಳ ಹಿಂದೆ ನಿರ್ಮಿಸಲಾದ ಈ ಬಸ್ ನಿಲ್ದಾಣ ಕಳೆದ 25 ವರ್ಷಗಳಿಂದ ಬಳಕೆಯಲ್ಲಿಲ್ಲ. ಗೋಡೆಗಳಲ್ಲಿ ಅಲ್ಲಲ್ಲಿ ಬಿರುಕುಗಳು ಕಾಣಿಸಿಕೊಂಡಿದ್ದು, ಹೆಗ್ಗಣಗಳ ವಾಸ ಸ್ಥಾನವಾಗಿದೆ. ನಿಲ್ದಾಣದ ಒಳಗೆ ಮಣ್ಣು ರಾಶಿ ಬಿದ್ದಿದೆ. ಹೆಂಚುಗಳು ಕಿತ್ತು ಹೋಗಿದ್ದು, ಕಟ್ಟಡ ಅಪಾಯಕಾರಿಯಾಗಿ ಪರಿಣಮಿಸಿದೆ.
ಮಳೆಗಾಲದಲ್ಲಿ ಈ ನಿಲ್ದಾಣ ಕುಸಿಯುವ ಸಾಧ್ಯತೆ ಇದೆ. ಬಸ್ ನಿಲ್ದಾಣವಿದ್ದರೂ ಇಲ್ಲಿನ ಜನ ಅಂಗಡಿಗಳ ಮುಂಭಾಗ ಹಾಗೂ ಮರದ ನೆರಳಿನಲ್ಲಿ ನಿಂತು ಬಸ್ ಹತ್ತಿಳಿಯುತ್ತಿದ್ದಾರೆ. ಈ ನಿಲ್ದಾಣದ ಬಳಿ ಅಳವಡಿಸಿರುವ ಸೋಲಾರ್ ಬೀದಿ ದೀಪ ಕೆಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿಲ್ಲ. ಹೀಗಾಗಿ ರಾತ್ರಿ ವೇಳೆ ಪ್ರಯಾಣಿಕರು ಕತ್ತಲೆಯಲ್ಲೇ ಸಂಚರಿಸಬೇಕಾದ ಪರಿಸ್ಥಿತಿ ನಿಮಾಣವಾಗಿದೆ.
ಬೆಳಗ್ಗೆ, ಸಂಜೆ ಜನದಟ್ಟಣೆ
ಕರ್ಕಿ ಬಸ್ ನಿಲ್ದಾಣದ ಸುತ್ತಮುತ್ತ ಬೆಳಗ್ಗೆ ಹಾಗೂ ಸಂಜೆ ವೇಳೆಯಲ್ಲಿ ಹೆಚ್ಚಿನ ಜನದಟ್ಟಣೆ ಕಂಡುಬರುತ್ತದೆ. ವಿದ್ಯಾರ್ಥಿಗಳು, ನೌಕರರು, ಕಾರ್ಮಿಕರು ಸೇರಿದಂತೆ ನೂರಾರು ಮಂದಿ ಇದೇ ಸ್ಥಳವನ್ನು ಬಸ್ ಹತ್ತಿಳಿಯಲು ಬಳಸುತ್ತಿದ್ದಾರೆ. ಇಷ್ಟೊಂದು ಜನರನ್ನು ಅವಲಂಬಿಸಿರುವ ಸ್ಥಳದಲ್ಲಿ ಸುಸಜ್ಜಿತ ಬಸ್ ನಿಲ್ದಾಣದ ಕೊರತೆ ಎದುರಾಗಿರುವುದರಿಂದ, ಶ್ರೀದಲ್ಲೇ ಹೊಸ ಬಸ್ ನಿಲ್ದಾಣ ನಿರ್ಮಿಸಿ ಪ್ರಯಾಣಿಕರಿಗೆ ಅಗತ್ಯ ಸೌಲಭ್ಯ ಕಲ್ಪಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಹಳೇ ಬಸ್ ನಿಲ್ದಾಣವನ್ನು ತೆರವುಗೊಳಿಸಿ ಹೊಸ ಕಟ್ಟಡ ನಿರ್ಮಿಸಲು ಸ್ಥಳೀಯಾಡಳಿತಕ್ಕೆ ಎರಡು ಮೂರು ಬಾರಿ ಮನವಿ ಮಾಡಲಾಗಿದೆ. ಆದರೆ ಇಲ್ಲಿವರೆಗೆ ಯಾವುದೇ ಕ್ರಮ ವಹಿಸಿಲ್ಲ. ಕೂಡಲೇ ಸ್ಥಳೀಯಾಡಳಿತ ಈ ಬಗ್ಗೆ ಗಮನಹರಿಸಬೇಕು.
— ಸುರೇಂದ್ರ ಆಚಾರ್ಯ, ಸ್ಥಳೀಯ
ಈ ಬಗ್ಗೆ ಮಾಹಿತಿ ಪಡೆದು ಶ್ರೀದಲ್ಲೇ ಸ್ಥಳಕ್ಕೆ ಭೇಟಿ ನೀಡಿ ಬಸ್ ನಿಲ್ದಾಣದ ಕಟ್ಟಡವನ್ನು ಪರಿಶೀಲಿಸಲಾಗುವುದು. ಕಟ್ಟಡದ ಸ್ಥಿತಿಗತಿಗಳನ್ನು ಅವಲೋಕಿಸಿದ ಬಳಿಕ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಹೊಸ ಬಸ್ ನಿಲ್ದಾಣ ನಿರ್ವಾಣದ ಅಗತ್ಯದ ಕುರಿತು ಸಂಬಂಧಪಟ್ಟ ಇಲಾಖೆಯೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ.
— ರೇಣುಕಾ ಹೆಗ್ಡೆ ಹಟ್ಟಿಯಂಗಡಿ ಪಿಡಿಒ