ಬೆಳ್ತಂಗಡಿ: ಧರ್ಮಸ್ಥಳ-ಉಜಿರೆ ಹೆದ್ದಾರಿಯಲ್ಲಿ ನೇತ್ರಾವತಿ ಸ್ನಾನಘಟ್ಟದ ಸಮೀಪ ಮಣ್ಣ ಸಂಕ ಎಂಬಲ್ಲಿ ಕೆಎಸ್ಸಾರ್ಟಿಸಿ ಬಸ್ ಹಾಗೂ ಕಾರಿನ ನಡುವೆ ಶುಕ್ರವಾರ ಮಧ್ಯಾಹ್ನ ಭೀಕರ ಅಪಘಾತ ಸಂಭವಿಸಿ ಕಾರು ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾರೆ.
ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ. ಕಾರು ಚಾಲಕ ಧರ್ಮಸ್ಥಳದ ನಿವಾಸಿ ಅನಂತರಾಮ್ (64) ಗಂಭೀರವಾಗಿ ಗಾಯಗೊಂಡಿದ್ದು, ಕೂಡಲೇ ಸ್ಥಳೀಯರ ಸಹಕಾರದೊಂದಿಗೆ ಆಸ್ಪತ್ರೆಗೆ ದಾಖಲಿಸಲಾಯಿತು.
ಶುಕ್ರವಾರ ಕಾಮಗಾರಿ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಧರ್ಮಸ್ಥಳ ಪೊಲೀಸ್ ಠಾಣೆಯ ಸಮೀಪದಿಂದ ಒಂದು ರಸ್ತೆಯನ್ನು ಮುಚ್ಚಿ ಒಂದೇ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು. ಈ ಬಗ್ಗೆ ಯಾವುದೆ ಸೂಚನಾ ಫಲಕಗಳನ್ನು ಹಾಕಲಾಗಿರಲಿಲ್ಲ. ಇದರಿಂದಾಗಿ ಕಾರು ಚಾಲಕ ವೇಗವಾಗಿ ರಸ್ತೆಯ ಮಧ್ಯದಲ್ಲಿ ಕಾರನ್ನು ಚಲಾಯಿಸುತ್ತಾ ಸಾಗಿದ್ದು ತಿರುವಿನಲ್ಲಿ ಬಸ್ ಎದುರು ಬಂದಾಗ ಅಪಘಾತ ಸಂಭವಿಸಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.