ಪುಲ್ಲೂರ್ ಪೆರಿಯ ಗ್ರಾಮ ಪಂಚಾಯತಿಯಲ್ಲಿ ನಡೆದ ಕಲ್ಲಂಗಡಿ ಕೊಯ್ಲು. 
ಉಡುಪಿ

ಪಾಳುಭೂಮಿಯಲ್ಲಿ ಕಲ್ಲಂಗಡಿ ಬಂಪರ್ ಬೆಳೆ

ವಿಜಯವಾಣಿ ಸುದ್ದಿಜಾಲ ಕಾಸರಗೋಡು
ಮಾರುಕಟ್ಟೆಯಲ್ಲಿ ರಾಸಾಯನಿಕ ಮಿಶ್ರಿತ ಕಲ್ಲಂಗಡಿಗಳ ಪೂರೈಕೆ ಹೆಚ್ಚಾಗಿರುವ ಮಧ್ಯೆ ಕಾಸರಗೋಡು ಜಿಲ್ಲೆ ಗುಣಮಟ್ಟದ ಕಲ್ಲಂಗಡಿ ಬೆಳೆಯುವ ಮೂಲಕ ರಾಜ್ಯಕ್ಕೆ ಮಾದರಿಯಾಗಿದೆ. ಕುಟುಂಬಶ್ರೀ ರಾಜ್ಯ ಮಿಷನ್‌ನ ‘ವೇನಲ್ ಮಧುರಂ’(ಬೇಸಿಗೆಯ ಸಿಹಿ) ಯೋಜನೆಯ ಭಾಗವಾಗಿ ಕಲ್ಲಂಗಡಿ ಕೃಷಿಯಲ್ಲಿ ಕಾಸರಗೋಡು ಜಿಲ್ಲೆ ಪ್ರಥಮ ಸ್ಥಾನ ಪಡೆದುಕೊಂಡಿದೆ.
ಕುಟುಂಬಶ್ರೀ ಸದಸ್ಯರ ಹಾಗೂ ಜಿಎಲ್‌ಜಿ ತಂಡಗಳು ಜತೆಗೂಡಿ ಪಾಳುಬಿದ್ದ ಖಾಸಗಿ ಭೂಮಿಗಳು ಹಾಗೂ ಗುತ್ತಿಗೆ ಪಡೆದ ಭತ್ತದ ಗದ್ದೆಗಳನ್ನು ಕೃಷಿಗೆ ಯೋಗ್ಯವಾಗುವಂತೆ ಪರಿವರ್ತಿಸಿ ಕಲ್ಲಂಗಡಿ ಬೆಳೆಯಲು ಆರಂಭಿಸಿದ್ದಾರೆ.
ಕಾಞಂಗಾಡ್‌ನ ದುರ್ಗಾ ಕುಟುಂಬಶ್ರೀ ನೆರೆಕರೆ ಗುಂಪಿನ ಒಂಬತ್ತು ಸದಸ್ಯರ ತಂಡ ಕಲ್ಲಂಗಡಿ ಬೆಳೆ ಬೆಳೆಯಲು ಮುಂದಾಗಿದ್ದು, ಮನೆ ಸಮೀಪದ ಎರಡೂವರೆ ಎಕರೆ ಪಾಳುಬಿದ್ದಿದ್ದ ಭೂಮಿಯನ್ನು ಕೃಷಿಭೂಮಿಯಾಗಿ ಪರಿವರ್ತಿಸಿ ಕಲ್ಲಂಗಡಿ ಬೆಳೆದು ಉತ್ತಮ ಇಳುವರಿ ಪಡೆದಿದ್ದಾರೆ.

ಕಲ್ಲಂಗಡಿ ವಹಿವಾಟಿನಲ್ಲಿ ಜಿಲ್ಲೆ ಪ್ರಥಮ

ಕುಟುಂಬ ಶ್ರೀ ಯೋಜನೆ ಅನ್ವಯ ಮಧ್ಯವರ್ತಿಗಳ ಹಾವಳಿಯಿಲ್ಲದೆ ರೈತರೇ ಸ್ವತಃ ರಸ್ತೆಬದಿಗಳಲ್ಲಿ ಮಳಿಗೆಗಳನ್ನು ತೆರೆದು ಉತ್ತಮ ಆದಾಯ ಗಳಿಸಿದ್ದಾರೆ. ಕುಟುಂಬಶ್ರೀ ಯೋಜನೆಯಡಿ 6.78 ಕೋಟಿ ರೂ. ಕಲ್ಲಂಗಡಿ ವ್ಯಾಪಾರ ನಡೆಸಿದ್ದು, ಈ ಪೈಕಿ ಕಾಸರಗೋಡು ಜಿಲ್ಲೆಯೊಂದೇ 3.91 ಕೋಟಿ ರೂ. ವಹಿವಾಟು ನಡೆಸಿ ಪ್ರಥಮ ಸ್ಥಾನದಲ್ಲಿದೆ.
ಬಂಜರು ಭೂಮಿಯನ್ನು ಕೃಷಿ ಭೂಮಿಯಾಗಿ ಪರಿವರ್ತಿಸಿ ಕಲ್ಲಂಗಡಿ ಬೆಳೆಯುವ ಅಭಿಯಾನ ಕಳೆದ ವರ್ಷ ಡಿಸೆಂಬರ್‌ನಲ್ಲಿ ಆರಂಭವಾಗಿದ್ದು, ಮಾರ್ಚ್-ಏಪ್ರಿಲ್ ತಿಂಗಳಲ್ಲಿ ಭಾರಿ ಯಶಸ್ಸು ಪಡೆದಿದೆ. ಕುಟುಂಬ ಶ್ರೀ ಯೋಜನೆ ಅನ್ವಯ ರಾಜ್ಯಾದ್ಯಂತ ಇದ್ದ 817.78 ಎಕರೆ ಭೂಮಿಯಲ್ಲಿ 44 ಲಕ್ಷ ಕೆ.ಜಿ.ಯಷ್ಟು ಕಲ್ಲಂಗಡಿ ಬೆಳೆಯಲಾಗಿದೆ. ಇದರಲ್ಲಿ ಕಾಸರಗೋಡು ಜಿಲ್ಲೆಯದ್ದೇ ಸಿಂಹಪಾಲು ಆಗಿರುವುದು ಜಿಲ್ಲೆಯ ರೈತರಿಗೆ ಮತ್ತಷ್ಟು ಹುರುಪು ತಂದಿದೆ.

ಮಾರ್ಕೆಟ್‌ನಲ್ಲಿ ಬೇಡಿಕೆಯುಳ್ಳ ತಳಿಗಳು

ಬೇಡಿಕೆಗೆ ಅನುಗುಣವಾಗಿ ವಿವಿಧ ತಳಿಗಳ ಕಲ್ಲಂಗಡಿಗಳನ್ನು ಕಾಸರಗೋಡು ಜಿಲ್ಲೆಯಲ್ಲಿ ಬೆಳೆಯಲಾಗಿದ್ದು, ಈ ಪೈಕಿ ಕಪ್ಪು ಬಣ್ಣದ ಹೊರಭಾಗ ಹೊಂದಿರುವ ‘ಶುಗರ್ ಬೇಬಿ’ ಹಾಗೂ ಹಳದಿ ಬಣ್ಣದ ಒಳಭಾಗವಿರುವ ‘ಹಳದಿ ಮಂಚ್’ ತಳಿಗೆ ಬಹಳ ಬೇಡಿಕೆ ಕೇರಳ ಮಾರುಕಟ್ಟೆಯಲ್ಲಿದೆ. ಜತೆಗೆ ನಾಮಧಾರಿ, ಮಹಾರಾಜ, ಇರಾನಿ, ಸ್ವಾಮ್ ಮುಂತಾದ ತಳಿಗಳನ್ನು ಜಿಲ್ಲೆಯಲ್ಲಿ ವ್ಯಾಪಕವಾಗಿ ಬೆಳೆಸಲಾಗಿದೆ.

ಕಡಿಮೆ ಬೆಲೆಯಲ್ಲಿ ಗುಣಮಟ್ಟದ ಕಲ್ಲಂಗಡಿ ಬೆಳೆಯುವಿಕೆ ಹಾಗೂ ಪೂರೈಕೆಯಿಂದಾಗಿ ಹೊರ ರಾಜ್ಯಗಳಿಂದ ದೊಡ್ಡ ಪ್ರಮಾಣದ ಆಮದು ಕಡಿಮೆಯಾಗಿದೆ. ಪ್ರಸ್ತುತ 300ಕ್ಕೂ ಅಧಿಕ ಎಕರೆ ಕೃಷಿ ಭೂಮಿ ಬಳಕೆಯಾಗಿದ್ದು, ಸತತ ಸಹಕಾರ ದೊರೆತೆ ಭವಿಷ್ಯದಲ್ಲಿ 700 ಎಕರೆ ತನಕ ಕಲ್ಲಂಗಡಿ ಕೃಷಿ ವಿಸ್ತರಿಸಬಹುದು.

— ಕೆ. ರತೀಶ್ ಕುವಾರ್, ಕುಟುಂಬಶ್ರೀ ಜಿಲ್ಲಾ ಮಿಷನ್ ಸಂಯೋಜಕ.