ಬಾಲಪ್ರತಿಭೆಗಳ ಚಿಗುರು ಸಾಂಸ್ಕೃತಿಕ ಕಾರ್ಯಕ್ರಮವನ್ನು ಶಾಸಕ ಗುರುರಾಜ್ ಗಂಟಿಹೊಳೆ ಉದ್ಘಾಟಿಸಿದರು. ಪ್ರಮುಖರಾದ ನಾಗೇಶ ಕೆ.ನಾಯ್ಕ, ಡಾ.ಗೋವಿಂದಬಾಬು ಪೂಜಾರಿ, ರಮೇಶ ವಿ.ದೇವಾಡಿಗ, ನಂದೀಶ್ ದೇವಾಡಿಗ ಉಪಸ್ಥಿತರಿದ್ದರು.  
ಉಡುಪಿ

ಸಾಮಾಜಿಕ ಅಭಿರುಚಿಯಿಂದ ಸಾಂಘಿಕ ಸಮಾಜ ನಿರ್ಮಾಣ

ಬೈಂದೂರು: ಸಾಂಸ್ಕೃತಿಕ ಮತ್ತು ಸಾಮಾಜಿಕ ಅಭಿರುಚಿಯಿಂದ ಸಾಂಘಿಕ ಸಮಾಜ ನಿರ್ಮಾಣ ಸಾಧ್ಯ. ಮಕ್ಕಳು ವಿವಿಧ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಹೆಚ್ಚು ಕ್ರಿಯಾಶೀಲರಾಗುತ್ತಾರೆ. ಇಲಾಖೆಯಿಂದ ನಡೆಸುವ ಜಿಲ್ಲಾಮಟ್ಟದ ಕಾರ್ಯಕ್ರಮ ಪ್ರತಿಭೆಗಳ ಭವಿಷ್ಯ ರೂಪಿಸುವ ಕಾರ್ಯಕ್ರಮಗಳಾಗಿರಲಿ ಎಂದು ಶಾಸಕ ಗುರುರಾಜ್ ಗಂಟಿಹೊಳೆ ಹೇಳಿದರು.
ಬಿಜೂರು ಮೂರ್ಗೊಳಿಹಕ್ಲು ಶ್ರೀ ನಂದಿಕೇಶ್ವರ ಸಭಾಭವನದಲ್ಲಿ ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಬಾಲಪ್ರತಿಭೆಗಳ ಚಿಗುರು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ ಕೆ.ನಾಯ್ಕ ಮಾತನಾಡಿದರು. ಉದ್ಯಮಿ ಡಾ.ಗೋವಿಂದಬಾಬು ಪೂಜಾರಿ, ಬಿಜೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ರಮೇಶ ವಿ.ದೇವಾಡಿಗ, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಂದೀಶ್ ದೇವಾಡಿಗ ಉಪಸ್ಥಿತರಿದ್ದರು.
ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಸ್ತಾವನೆಗೈದರು. ಮುಖ್ಯಶಿಕ್ಷಕ ಮಂಜುನಾಥ ಎಸ್. ಸ್ವಾಗತಿಸಿದರು. ಶಿಕ್ಷಕರಾದ ಸುಧಾಕರ ಪಿ. ನಿರೂಪಿಸಿದರು. ಸುಬ್ರಹ್ಮಣ್ಯ ವಂದಿಸಿದರು.

ಮಕ್ಕಳಲ್ಲಿನ ಪ್ರತಿಭೆ ಗುರುತಿಸಲು ಹಾಗೂ ಮಕ್ಕಳನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಆಯೋಜಿಸಲಾಗುತ್ತಿರುವ ಕಾರ್ಯಕ್ರಮಗಳು ಅತ್ಯಂತ ಯಶಸ್ವಿಯಾಗಿ ನಡೆಯುತ್ತಿವೆ. ಇಂತಹ ಕಾರ್ಯಕ್ರಮಗಳ ಮೂಲಕ ಅನೇಕ ಮಕ್ಕಳಿಗೆ ತಮ್ಮ ಪ್ರತಿಭೆ ತೋರ್ಪಡಿಸಲು ವೇದಿಕೆ ದೊರೆತಂತಾಗಿದೆ. ಮುಂದಿನ ದಿನಗಳಲ್ಲಿ ಮಕ್ಕಳ ಪ್ರತಿಭೆ ಅನಾವರಣಗೊಳಿಸುವ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿರಬೇಕು.

— ನಾಗೇಶ ಕೆ.ನಾಯ್ಕ ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ