ಕೋಟ ಶ್ರೀನಿವಾಸ ಪೂಜಾರಿ. ಉಡುಪಿ ಸಂಸದ.
* ಸಂಸತ್ ಅಧಿವೇಶನದಲ್ಲಿ ಸಂಸದ ಕೋಟ ಪೂಜಾರಿ ಪ್ರಸ್ತಾಪ
* ಕೇರಳ-ಬೈಂದೂರು ಮೂಲಕ ಕಾರವಾರದವರೆಗೆ ಯೋಜನೆ
ಉಡುಪಿ: ಕರ್ನಾಟಕ ರಾಜ್ಯದ ಕರಾವಳಿ ಜಿಲ್ಲೆಗಳ ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನ ದಟ್ಟಣೆ ವಿಪರೀತವಾಗುತ್ತಿದ್ದು, ನಿತ್ಯ ಅನೇಕ ಅಪಘಾತ ಸಂಭವಿಸುತ್ತಿವೆ. ಹೀಗಾಗಿ ಕೇರಳ ರಾಜ್ಯದ ಗಡಿಯಾದ ತಲಪಾಡಿಯಿಂದ ಬೈಂದೂರು ಮೂಲಕ ಕಾರವಾರದವರೆಗೆ ರೈಲ್ವೆ ಹಳಿಗಳಿಗೆ ಸನಿಹದಲ್ಲಿ ಹೊಸ ಎಕ್ಸ್ಪ್ರೆಸ್ ರಾಷ್ಟ್ರೀಯ ಹೆದ್ದಾರಿ (ಎನ್ಎಚ್) ರಚಿಸಬೇಕು ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ದೆಹಲಿಯಲ್ಲಿ ನಡೆಯುತ್ತಿರುವ ಸಂಸತ್ ಅಧಿವೇಶನದಲ್ಲಿ ಪ್ರಸ್ತಾಪಿಸಿದರು.
ದೆಹಲಿಯಲ್ಲಿ ಗುರುವಾರ (ಡಿ.18) ನಡೆದ ಲೋಕಸಭೆಯಲ್ಲಿ ನಿಯಮ 377ರ ಅನ್ವಯ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಮಾತನಾಡಿ, ಈ ಯೋಜನೆಯಿಂದ ಕರಾವಳಿಯ ಪ್ರವಾಸೋದ್ಯಮಕ್ಕೆ ಹೆಚ್ಚು ಅವಕಾಶವಾಗಲಿದೆ. ಅಲ್ಲದೆ, ಮಂಗಳೂರಿನಿಂದ ಗೋವಾ ರಾಜ್ಯದ ಗಡಿಯವರೆಗೆ ಇರುವ ಕರಾವಳಿ ಕರ್ನಾಟಕದಲ್ಲಿ ಅಭಿವೃದ್ಧಿಯ ಹೊಸ ಶಖೆ ಪ್ರಾರಂಭವಾಗಲಿದೆ ಎಂದು ಉಲ್ಲೇಖಿಸಿದರು.
ರಸ್ತೆ ಮೇಲ್ದರ್ಜೆಗೆ ಏರಿಸಿ
ಆಗುಂಬೆ (ಎನ್ಎಚ್-169ಎ), ಶೃಂಗೇರಿ, ಅಗಲಗುಂಡಿ, ಜೈಪುರ, ಬಾಳೆಹೊನ್ನೂರು, ಹೈರಂಬಿ, ಆಲ್ದೂರು, ನದಿಪುರ, ಚಿಕ್ಕಮಗಳೂರು ಸಂಪರ್ಕದ ಸುಮಾರು 120 ಕಿಮೀ ಲೋಕೋಪಯೋಗಿ ಇಲಾಖೆಯ ರಸ್ತೆಯನ್ನು ಮೇಲ್ದರ್ಜೆಗೇರಿಸಿ ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತಿಸಬೇಕು. ಈ ಅಭಿವೃದ್ಧಿ ಕಾರ್ಯದಿಂದ ಶೃಂಗೇರಿಯಂತಹ ಧಾರ್ಮಿಕ ಕೇಂದ್ರಗಳಿಗೆ ಬರುವ ಭಕ್ತರಿಗೆ ಹಾಗೂ ಈ ಭಾಗದ ಕೃಷಿ ಪ್ರದೇಶಗಳಲ್ಲಿ ಸುರಕ್ಷಿತ ಸಂಚಾರಕ್ಕೆ ಅನುಕೂಲವಾಗಲಿದೆ ಎಂದರು.
ಉಡುಪಿ ಜಿಲ್ಲೆಯ ಕುಂದಾಪುರ, ಕೋಟೇಶ್ವರ, ಹಾಲಾಡಿ, ಸೋಮೇಶ್ವರ, ಆಗುಂಬೆ ಮೂಲಕ ಶೃಂಗೇರಿ ತಲುಪುವ 88 ಕಿ.ಮೀ. ರಸ್ತೆಯನ್ನೂ ಸಹ ಮೇಲ್ದರ್ಜೆಗೇರಿಸಿ ರಾಷ್ಟ್ರೀಯ ಹೆದ್ದಾರಿಯಾಗಿ ಘೋಷಿಸಿ ಅಭಿವೃದ್ಧಿ ಮಾಡಬೇಕು ಎಂದು ಸಂಸದ ಕೋಟ ಪೂಜಾರಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.