ಉಡುಪಿ: ಜಿಲ್ಲೆಯಾದ್ಯಂತ ಇರುವ ಬಿ.ಎಸ್.ಎನ್.ಎಲ್ ಸ್ಥಾವರಗಳನ್ನು 3ಜಿ ಯಿಂದ 4 ಜಿ ಗೆ ಬದಲಾವಣೆ ಮಾಡುವುದರೊಂದಿಗೆ ಗ್ರಾಹಕರಿಗೆ ಉತ್ತಮ ರೀತಿಯ ಸೇವೆಗಳನ್ನು ಒದಗಿಸಬೇಕು. ಹೊಸದಾಗಿ ಟವರ್ಗಳನ್ನು ನಿಮಾರ್ಣ ಮಾಡಲು ಜಿಲ್ಲಾಡಳಿತದಿಂದ ಬೇಡಿಕಗನುಗುಣವಾಗಿ 39 ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ಜಿಪಂ ಸಭಾಂಗಣದಲ್ಲಿ ನಡೆದ ಬಿಎಸ್ಎನ್ಎಲ್ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಪೆರ್ಡೂರಿನ ಕುಕ್ಕುಂಡಿಯ ನಿವೇಶನದಲ್ಲಿ ಮರತೆರವಿನ ಕಾರ್ಯಗಳನ್ನು ಅರಣ್ಯ ಇಲಾಖೆ ಶ್ರೀಘ್ರ ಮಾಡಬೇಕು. ಟವರ್ಗಳ ನಿರ್ವಹಣೆಯನ್ನು ವ್ಯವಸ್ಥಿತವಾಗಿ ನಿರ್ವಹಿಸಿ ನೆಟ್ವರ್ಕ್ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಬೇಕು. ಗ್ರಾಹಕರಿಗೆ ಗುಣಮಟ್ಟದ ಸೇವೆ ನೀಡಬೇಕು. ಜಿಲ್ಲೆಯ ಎಲ್ಲಾ ಸ್ಥಾವರಗಳಿಗೆ ಡಿ.ಜಿ. ಸೆಟ್ಗಳನ್ನು ಅಳವಡಿಸಬೇಕು. ಪವರ್ಪ್ಲಾಂಟ್ ನಿರಂತರವಾಗಿ ಕಾರ್ಯ ನಿರ್ವಹಿಸುವಂತೆ ನೋಡಿಕೊಳ್ಳಬೇಕು. ಅವಶ್ಯವಿರುವಲ್ಲಿ ಬ್ಯಾಟರಿ ಅಥವಾ ಸೋಲಾರ್ ಬ್ಯಾಟರಿಗಳ ಅಳವಡಿಸಬೇಕು ಎಂದರು.
ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಹಾಗೂ ಹತ್ತಿರದ ಆಸ್ಪತ್ರೆಗಳಲ್ಲಿಯೂ ನೆಟ್ವರ್ಕ್ ಸಮಸ್ಯೆ ಕಂಡು ಬರುತ್ತಿದೆ. ಸಮಸ್ಯೆಗಳನ್ನು ಪರಿಹರಿಸಿ ನೆಟ್ವರ್ಕ್ನಲ್ಲಿ ಸುಧಾರಣೆ ತರಬೇಕು. ಜಿಲ್ಲೆಯಲ್ಲಿ ಇನ್ನು ಮುಂದೆ ಪ್ರತಿ ತಿಂಗಳೂ ಸಭೆ ನಡೆಯಲಿದೆ. ಕಾಪು ಮತ್ತು ಕಮಲಶಿಲೆಯಂತ ಪ್ರೇಕ್ಷಣಿಯ ಹಾಗೂ ಧಾರ್ಮಿಕ ಸ್ಥಳಗಳಲ್ಲಿ ನೆಟ್ವರ್ಕ್ ಸಮಸ್ಯೆಯ ದೂರುಗಳು ಬರುತ್ತಿವೆ. ಇದನ್ನು ಪರಿಹರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ತಿಳಿಸಿದರು.
ಬ್ರಹ್ಮಾವರ ತಾಲೂಕಿನ ಕರ್ಜೆ ಮತ್ತು ಕಾಪುವಿನ ಕಟಪಾಡಿಯಲ್ಲಿ ಟವರ್ಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಹಾಗೂ ನಾಡ್ಪಾಲು- ಕಬ್ಬಿನಾಲೆ ಪರಿಸರದಲ್ಲಿ ಮರುಸರ್ವೆ ನಡೆಸಲು ಅಧಿಕಾರಿಗಳಿಗೆ ತಿಳಿಸಿದರು.
ಸಭೆಯಲ್ಲಿ ಬಿಎಸ್ಎನ್ಎಲ್ ಬೆಂಗಳೂರು ವಿಭಾಗದ ಸಿಜಿಎಂ ಸುಕುಮಾರನ್ ಎನ್.ಕೆ, ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ನಾಯಕ್, ಪಿಜಿಎಂ ಬಿ.ವೆಂಕಟೇಶ್ವರಲು, ಮಂಗಳೂರು ಜಿಎಂ ಹೇಮಂತ್ ಎಸ್.ಬಿ. ಉಪಸ್ಥಿತರಿದ್ದರು.