ಕಾನೂನು ಮಾಹಿತಿ ಕಾರ್ಯಕ್ರಮವನ್ನು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಉಪ ನಿರೀಕ್ಷಕ ಪ್ರಸನ್ನ ಎಂ.ಎಸ್. ಉದ್ಘಾಟಿಸಿದರು. ಪ್ರಮುಖರಾದ ಮೊಹಮ್ಮದ್ ಶರೀಫ್, ನವೀನ್ ಸಾಲ್ಯಾನ್, ಸುಕುಮಾರ್ ಮುನಿಯಾಲು, ಉದಯ್, ಹರೀಶ್ ಸಚ್ಚೇರಿಪೇಟೆ, ಸತೀಶ್ ಶೆಟ್ಟಿ ಉಪಸ್ಥಿತರಿದ್ದರು.
ಕಾರ್ಕಳ: ಪತ್ರಕರ್ತರು ಸಮಾಜದ ಕನ್ನಡಿಯಾಗಿದ್ದು, ವರದಿಗಾರಿಕೆ ಮಾಡುವ ಸಂದರ್ಭ ಜಾಗರೂಕತೆ ಮತ್ತು ಕಾನೂನಿನ ಅರಿವು ಅತ್ಯಂತ ಮುಖ್ಯ. ಸಂವಿಧಾನ ಮತ್ತು ಕಾನೂನುಬದ್ಧ ಮಿತಿಗಳನ್ನು ಮೀರದಂತೆ ವರದಿ ಮಾಡುವ ಜವಾಬ್ದಾರಿ ಪತ್ರಕರ್ತರ ಮೇಲಿದೆ ಎಂದು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಉಪ ನಿರೀಕ್ಷಕ ಪ್ರಸನ್ನ ಎಂ.ಎಸ್. ಹೇಳಿದರು.
ಕಾರ್ಕಳ ಪತ್ರಿಕಾ ಭವನದಲ್ಲಿ ನಡೆದ ಕಾನೂನು ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಪರಾಧ ಸುದ್ದಿಗಳು, ತನಿಖಾ ಹಂತದಲ್ಲಿರುವ ಪ್ರಕರಣಗಳು ಹಾಗೂ ಸೂಕ್ಷ್ಮ ಸಂವೇದನಾಶೀಲ ವಿಷಯಗಳ ಬಗ್ಗೆ ವರದಿ ಮಾಡುವಾಗ ಕಾನೂನು ಚೌಕಟ್ಟನ್ನು ಕಡ್ಡಾಯವಾಗಿ ಮೀರಬಾರದು. ವಿಶೇಷವಾಗಿ ಜನರ ಗೌಪ್ಯತೆಗೆ ಧಕ್ಕೆಯಾಗದಂತೆ, ತಪ್ಪು ಮಾಹಿತಿ ಪ್ರಸಾರವಾಗದಂತೆ ಎಚ್ಚರ ವಹಿಸಬೇಕು. ಸುಳ್ಳು ಸುದ್ದಿ ಪ್ರಕಟಿಸಿದರೆ ಅಂಥವರ ವಿರುದ್ಧ ಕೇಸ್ ದಾಖಲಿಸಬಹುದು. ಕಾನೂನು ತಿಳಿದುಕೊಂಡು ಸುದ್ದಿ ಪ್ರಸಾರ ಮಾಡಬೇಕು ಎಂದರು.
ಪತ್ರಕರ್ತರ ಸಂಘದ ಅಧ್ಯಕ್ಷ ಮೊಹಮ್ಮದ್ ಶರೀಫ್ ಅಧ್ಯಕ್ಷತೆ ವಹಿಸಿದ್ದರು. ಮೂಡುಬಿದಿರೆ ಪತ್ರಕರ್ತರ ಸಂಘದ ಅಧ್ಯಕ್ಷ ನವೀನ್ ಸಾಲ್ಯಾನ್, ಹೆಬ್ರಿ ಪತ್ರಕರ್ತರ ಸಂಘದ ಅಧ್ಯಕ್ಷ ಸುಕುಮಾರ್ ಮುನಿಯಾಲು, ಜಿಲ್ಲಾ ಉಪಾಧ್ಯಕ್ಷ ಉದಯ್, ಕಾರ್ಕಳ ಪತ್ರಕರ್ತರ ಸಂಘದ ಕಾರ್ಯದರ್ಶಿ ಹರೀಶ್ ಸಚ್ಚೇರಿಪೇಟೆ, ಕೋಶಾಧಿಕಾರಿ ಸತೀಶ್ ಶೆಟ್ಟಿ ಉಪಸ್ಥಿತರಿದ್ದರು.