ಉಡುಪಿ ಮಣಿಪಾಲದಲ್ಲಿ ಕೆಎಂಸಿಯಲ್ಲಿ ಕ್ಯಾನ್ಸರ್​ ನಿಯಂತ್ರಣ ಜಾಗೃತಿಗಾಗಿ ಶಿರಡಿ ಸಾಯಿಬಾಬಾ ಕ್ಯಾನ್ಸರ್​ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಕಟ್ಟಡವನ್ನು ಗುಲಾಬಿ ಬಣ್ಣದ ದೀಪಗಳಿಂದ ಅಲಂಕರಿಸಲಾಗಿತ್ತು. 
ಉಡುಪಿ

ನಿರ್ಲಕ್ಷ್ಯದಿಂದಲೇ ಸ್ತನ ಕ್ಯಾನ್ಸರ್​ ಉಲ್ಬಣ

* ಕೆಎಂಸಿ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ ಶೆಟ್ಟಿ ಅಭಿಪ್ರಾಯ

* ಜಾಗೃತಿಗಾಗಿ ಗುಲಾಬಿ ಬಣ್ಣದ ದೀಪಾಲಂಕಾರ ಉದ್ಘಾಟನೆ

ಉಡುಪಿ: ಇತ್ತೀಚೆಗಿನ ವರ್ಷಗಳಲ್ಲಿ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್​ ಹೆಚ್ಚತೊಡಗಿದ್ದು ಎಚ್ಚರಿಕೆ ಅಗತ್ಯ. ಭಯ, ಹಿಂಜರಿಕೆ ಅಥವಾ ಜಾಗೃತಿಯ ಕೊರತೆಯಿಂದಾಗಿ ಅನೇಕರು ವಿಳಂಬವಾಗಿ ಆಸ್ಪತ್ರೆಗೆ ಬರುತ್ತಾರೆ. ಈ ಕ್ಯಾನ್ಸರ್​ನ ಅನುಭವ ಒಬ್ಬರಿಂದ ಒಬ್ಬರಿಗೆ ವಿಭಿನ್ನವಾಗಿರುತ್ತದೆ. ಹೀಗಾಗಿ ನಿಮ್ಮ ದೇಹದ ಮಾತು ಆಲಿಸಿ. ಆರಂಭಿಕ ಲಕ್ಷಣ ನಿರ್ಲಕ್ಷಿಸದೆ ಜಾಗೃತರಾಗಿ ಸಕಾಲಕ್ಕೆ ಸೂಕ್ತ ಚಿಕಿತ್ಸೆ ಪಡೆಯುವುದು ಒಳಿತು ಎಂದು ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ ಶೆಟ್ಟಿ ಕಿವಿಮಾತು ಹೇಳಿದರು.

ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಮಣಿಪಾಲ ಮಹಿಳಾ ಸಮಾಜ, ಇನ್ನರ್​ ವೀಲ್​ ಮಣಿಪಾಲ ಮತ್ತು ಪವರ್​ ಗ್ರೂಪ್​ ಮಣಿಪಾಲದ ಸಹಯೋಗದೊಂದಿಗೆ ಸ್ತನ ಕ್ಯಾನ್ಸರ್​ ಜಾಗೃತಿ ಮಾಸದ ಅಂಗವಾಗಿ ಶುಕ್ರವಾರ ರಾತ್ರಿ ಶಿರಡಿ ಸಾಯಿಬಾಬಾ ಕ್ಯಾನ್ಸರ್​ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಕಟ್ಟಡವನ್ನು ಗುಲಾಬಿ ಬಣ್ಣದ ದೀಪಗಳಿಂದ ಬೆಳಗಿಸಲಾಗಿದ್ದು, ತನ್ನಿಮಿತ್ತ ಶುಕ್ರವಾರ (ಅ.16) ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಿಶ್ವಾದ್ಯಂತ ಪ್ರತಿವರ್ಷ ಅಕ್ಟೋಬರ್​ ತಿಂಗಳನ್ನು ಸ್ತನ ಕ್ಯಾನ್ಸರ್​ ಜಾಗೃತಿ ಮಾಸವಾಗಿ ಆಚರಿಸಲಾಗುತ್ತದೆ. ಈ ವರ್ಷದ ಧ್ಯೇಯವಾಕ್ಯವು 'ಪ್ರತಿಯೊಂದು ಕಥೆಯೂ ವಿಶಿಷ್ಟ, ಪ್ರತಿಯೊಂದು ಪಯಣವೂ ಮುಖ್ಯ' ಎನ್ನುವುದಾಗಿದೆ. ಗುಲಾಬಿ ರಿಬ್ಬನ್​ ಸ್ತನ ಕ್ಯಾನ್ಸರ್​ ಜಾಗೃತಿಯ ಅಂತಾರಾಷ್ಟ್ರೀಯ ಸಂಕೇತವಾಗಿದೆ. ಹೀಗಾಗಿ ಕ್ಯಾನ್ಸರ್​ ಆಸ್ಪತ್ರೆಯ ಕಟ್ಟಡವನ್ನು ಗುಲಾಬಿ ಬಣ್ಣದಲ್ಲಿ ಬೆಳಗಿಸಿ ಜಾಗೃತಿ ಮೂಡಿಲಾಗಿದೆ ಎಂದರು.

ನೇತ್ರಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಡಾ. ಸುಲತಾ ಭಂಡಾರಿ, ಪ್ಯಾಲಿಯೇಟಿವ್​ ಮೆಡಿಸಿನ್​ ಮತ್ತು ಸಪೋರ್ಟಿವ್​ ಕೇರ್​ ವಿಭಾಗದ ಮುಖ್ಯಸ್ಥೆ ಡಾ. ಅನುಜಾ, ಮಣಿಪಾಲ ಮಹಿಳಾ ಸಮಾಜದ ಉಪಾಧ್ಯಕ್ಷೆ ಹಾಗೂ ಇನ್ನರ್​ ವೀಲ್​ ಮಣಿಪಾಲದ ಜಿಲ್ಲಾ ಖಜಾಂಚಿ ದೀಪಾ ಭಂಡಾರಿ, ಪವರ್​ ಗ್ರೂಪ್​ ಮಣಿಪಾಲದ ಕಾರ್ಯದರ್ಶಿ ಸುಜಯಾ ಶೆಟ್ಟಿ ಉಪಸ್ಥಿತರಿದ್ದರು. ಕ್ಯಾನ್ಸರ್​ ವಿಭಾಗದ ವೈದ್ಯರು, ಆಸ್ಪತ್ರೆಯ ಸಿಬ್ಬಂದಿ ಹಾಗೂ ವಿವಿಧ ಸಂಸ್ಥೆಗಳ ಸದಸ್ಯರು ಪಾಲ್ಗೊಂಡಿದ್ದರು.

ಸ್ತನ ಕ್ಯಾನ್ಸರ್​ ಕೇವಲ ಮಹಿಳೆಯ ಮೇಲಷ್ಟೆ ಅಲ್ಲ, ಇಡೀ ಕುಟುಂಬದ ಮೇಲೆ ಪರಿಣಾಮ ಬೀರುತ್ತದೆ. ಈ ಕಾಯಿಲೆಯಿಂದ ಹೆಣ್ಣುಮಕ್ಕಳನ್ನು ರಕ್ಷಿಸುವಲ್ಲಿ ಜಾಗೃತಿಯೇ ಮೊದಲ ಹೆಜ್ಜೆ. ಆರಂಭಿಕ ಹಂತದಲ್ಲೇ ಪತ್ತೆಹಚ್ಚಿದರೆ ಚಿಕಿತ್ಸೆ ಹೆಚ್ಚು ಪರಿಣಾಮಕಾರಿಯಾಗಿ ಉತ್ತಮ ಫಲಿತಾಂಶ ಲಭಿಸುತ್ತದೆ. 40 ವರ್ಷ ಮೇಲ್ಪಟ್ಟ ಎಲ್ಲ ಮಹಿಳೆಯರೂ ನಿಯಮಿತವಾಗಿ ಸ್ತನ ಸ್ವಯಂ ಪರೀಕ್ಷೆ ಅಭ್ಯಾಸ ಮಾಡಿಕೊಳ್ಳಬೇಕು. ಬದಲಾವಣೆ ಕಂಡುಬಂದಲ್ಲಿ ತಡಮಾಡದೆ ವೈದ್ಯರನ್ನು ಸಂಪರ್ಕಿಸಬೇಕು.
ಡಾ. ಅನಂತ ಪೈ. ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಮೆಡಿಕಲ್​ ಆಂಕಾಲಜಿ ವಿಭಾಗದ ಮುಖ್ಯಸ್ಥ.