ಅಲೆಗಳ ಹೊಡೆತಕ್ಕೆ ಮರವಂತೆ ಔಟ್ ಡೋರ್ ಬಂದರಿನ ದಕ್ಷಿಣ ದಿಕ್ಕಿನ ಬ್ರೇಕ್ ವಾಟರ್‌ನ ಟೆಟ್ರಾಪೋಡ್ ಜಾರಿರುವುದು.
ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಗಾಳಿ ಮಳೆಯಿಂದಾಗಿ ಕಡಲ ಆರ್ಭಟಕ್ಕೆ ಮರವಂತೆ ಔಟ್ ಡೋರ್ ಬಂದರಿನ ದಕ್ಷಿಣ ದಿಕ್ಕಿನ ಬ್ರೇಕ್ ವಾಟರ್ ಅಪಾಯಕ್ಕೆ ಸಿಲುಕಿದೆ. ಬೃಹತ್ ಗಾತ್ರದ ಅಲೆಗಳು ಅಪ್ಪಳಿಸುತ್ತಿರುವ ಪರಿಣಾಮ ಬ್ರೇಕ್‌ವಾಟರ್‌ನ ಕಲ್ಲು ಮತ್ತು ಟೆಟ್ರಾಪೋಡ್‌ಗಳು ಕಡಲು ಸೇರುತ್ತಿವೆ.
ಕಳೆದೊಂದು ದಶಕದಿಂದ ನಡೆಯುತ್ತಿರುವ ಮರವಂತೆ ಬಂದರು ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಉತ್ತರ ದಿಕ್ಕಿನ ಬ್ರೇಕ್ ವಾಟರ್ ವಿಸ್ತರಣೆ ಬಳಿಕ ದಿಕ್ಕು ಬದಲಿಸಿದ ಕಡಲು, ಈಗ ದಕ್ಷಿಣದಲ್ಲಿ ಗೋಳು ಸೃಷ್ಟಿಸಿದೆ. ದಶಕದ ಹಿಂದೆ ನಿರ್ಮಾಣವಾದ ಪಶ್ಚಿಮದ ಬ್ರೇಕ್ ವಾಟರ್‌ಗೆ ರಕ್ಕಸ ಗಾತ್ರದ ಅಲೆಗಳು ಅಪ್ಪಳಿಸುತ್ತಿದ್ದು, ಅಲ್ಲಿಯೂ ಕುಸಿತ ಸಂಭವಿಸಿದೆ. ಅಳವೆಯಲ್ಲಿಯೂ ಭಾರಿ ಅಲೆಗಳು ಏಳುತ್ತಿದ್ದು, ಬಂದರಿನ ಒಳಭಾಗವನ್ನು ಕೊರೆಯುತ್ತಿದೆ.
ಕೇರಳ ವಾದರಿಯ ಔಟ್ ಡೋರ್ ಬಂದರು ನಿರ್ವಾಣಕ್ಕೆ 2011ರಲ್ಲಿ ಆಡಳಿತಾತ್ಮಕ ಅನುಮೋದನೆ ದೊರಕಿತ್ತು. ಮೊದಲ ಹಂತದಲ್ಲಿ 55 ಕೋಟಿ ರೂ. ಟೆಂಡರ್ ಆಗಿದ್ದು, 2013ರಲ್ಲಿ ಕಾಮಗಾರಿ ಆರಂಭಗೊಂಡಿತ್ತು. ಬಂದರಿನ ದಕ್ಷಿಣದಲ್ಲಿ 595 ಮೀ. ಮತ್ತು ಉತ್ತರ ದಿಕ್ಕಿನಲ್ಲಿ 560 ಮೀ. ಉದ್ದದ ಬ್ರೇಕ್ ವಾಟರ್ ನಿರ್ವಾಣ ಕಾರ್ಯ ನಡೆದಿತ್ತು. 2016ರಲ್ಲಿ ಪ್ರಾಕೃತಿಕ ವಿಕೋಪಕ್ಕೆ ಸಿಲುಕಿ ನಲುಗಿ ಹೋಗಿತ್ತು. 2022ರಲ್ಲಿ ಕಾಣಿಸಿದ್ದ ತೌ ಚಂಡವಾರುತದ ಪರಿಣಾಮ ಜರ್ಜರಿತಗೊಂಡಿತ್ತು. ಪ್ರಸ್ತುತ 84 ಕೋಟಿ ರೂ. ವೆಚ್ಚದಲ್ಲಿ ಉತ್ತರ ದಿಕ್ಕಿನ ಬ್ರೇಕ್ ವಾಟರ್ 812 ಮೀ.ಗೆ ವಿಸ್ತರಣೆಯಾಗಿದೆ. ದಕ್ಷಿಣದಲ್ಲಿ ಹೆಚ್ಚುವರಿಯಾಗಿ 65 ಮೀ. ವಿಸ್ತರಣೆ ನಡೆಯುತ್ತಿದೆ. ಪ್ರಸ್ತುತ ಕಡಲಿನ ಆರ್ಭಟ ಕಾಮಗಾರಿ ಮೇಲೆ ಪರಿಣಾಮ ಬೀರಿದೆ.
ಅಲೆಗಳ ಹೊಡೆತ ತಪ್ಪಿಸಲು ಬಂದರಿನ ಉತ್ತರ ದಿಕ್ಕಿನಲ್ಲಿ ಹೆಚ್ಚುವರಿಯಾಗಿ 260 ಮೀ. ವಿಸ್ತರಣೆ ಕಾರ್ಯ ನಡೆದಿದೆ. ದಕ್ಷಿಣ ದಿಕ್ಕಿನಲ್ಲಿ ಸುರಕ್ಷತೆಗಾಗಿ ಹೆಚ್ಚುವರಿಯಾಗಿ 65 ಮೀ. ವಿಸ್ತರಣೆ ನಡೆಯುತ್ತಿದೆ. ಅಲೆಗಳ ಆರ್ಭಟದಿಂದ ದಕ್ಷಿಣ ದಿಕ್ಕಿನಲ್ಲಿ ಎದುರಾಗಿರುವ ತೊಂದರೆ ಪರಿಹರಿಸಲು ಕ್ರಮ ವಹಿಸಲಾಗಿದೆ.
— ಪ್ರಸನ್ನ, ಇಂಜಿನಿಯರ್, ಬಂದರು ಮತ್ತು ಮೀನುಗಾರಿಕೆ ಇಲಾಖೆ
ಕಳೆದೊಂದು ದಶಕದಿಂದ ನಡೆಯುತ್ತಿರುವ ಔಟ್ ಡೋರ್ ಬಂದರು ಕಾಮಗಾರಿ ಇನ್ನೂ ಮುಕ್ತಾಯವಾಗಿಲ್ಲ. ಉತ್ತರದಲ್ಲಿ ಬ್ರೇಕ್ ವಾಟರ್ ವಿಸ್ತರಣೆಯಾಗಿದೆ. ಕಡಲಬ್ಬರ ಹೆಚ್ಚಳಗೊಂಡ ಬೆನ್ನಲ್ಲೇ ದಕ್ಷಿಣ ದಿಕ್ಕಿನ ಬ್ರೇಕ್ ವಾಟರ್‌ಗೆ ಭಾರಿ ಅಲೆಗಳು ಅಪ್ಪಳಿಸುತ್ತಿದ್ದು, ಕಲ್ಲು ಕುಸಿದು ಸಮುದ್ರ ಸೇರುತ್ತಿವೆ. ಸಂಬಂಧಿತ ಇಲಾಖೆ ಗಮನಹರಿಸಬೇಕು.
— ಶ್ರೀಧರ ಖಾರ್ವಿ ಸ್ಥಳೀಯ ಮೀನುಗಾರ ಮುಖಂಡ