ಅಂಗಾಂಗಗಳ ದಾನ ಮಾಡಿದ ಮಣಿಪಾಲದ ಪ್ರಣವ್​ ಹೆಗ್ಡೆ. 
ಉಡುಪಿ

ಪ್ರಣವ್​ ಅಂಗಾಂಗ ದಾನ; ಹಲವರಿಗೆ ಜೀವದಾನ

* ಮಿದುಳು ನಿಷ್ಕ್ರಿಯ (ಬ್ರೈನ್ ಡೆಡ್​) ಘೋಷಣೆ

* ಮಾದರಿಯಾದ ಕುಟುಂಬದವರ ನಿರ್ಧಾರ 

ಉಡುಪಿ: ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಣಿಪಾಲದ ಪ್ರಣವ್​ ಹೆಗ್ಡೆ (41) ಅವರ ಮಿದುಳು ನಿಷ್ಕ್ರಿಯಗೊಂಡಿದ್ದರಿಂದ ಅವರ ಕುಟುಂಬದವರು ವಿವಿಧ ಅಂಗಾಂಗ ದಾನ ಮಾಡುವ ಮೂಲಕ ಹಲವು ರೋಗಿಗಳಿಗೆ ಹೊಸ ಬದುಕು ನೀಡಿದ್ದಾರೆ.
ಆ.17ರಂದು ತೀವ್ರ ಅನಾರೋಗ್ಯದಿಂದಾಗಿ ಗಂಭೀರ ಸ್ಥಿತಿಯಲ್ಲಿದ್ದ ಪ್ರಣವ್​ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರ ಸತತ ಪ್ರಯತ್ನದ ನಡುವೆಯೂ ಅವರ ಆರೋಗ್ಯ ಸುಧಾರಿಸಲಿಲ್ಲ. ಬಳಿಕ ಅವರನ್ನು ಮಿದುಳು ನಿಷ್ಕ್ರಿಯ (ಬ್ರೈನ್​ ಡೆಡ್​) ಎಂದು ಘೋಷಿಸಲಾಯಿತು. ಅಧಿಕೃತ ತಜ್ಞ ವೈದ್ಯರ ತಂಡ ಎರಡು ಬಾರಿ ಅವರ ಮಿದುಳು ತಪಾಸಣೆ ನಡೆಸಿ, ಮಾನವ ಅಂಗಾಂಗ ಕಸಿ ಕಾಯಿದೆ 1994ರ ಪ್ರಕಾರ ಬ್ರೈನ್​ ಡೆಡ್​ ಆಗಿರುವುದನ್ನು ಖಚಿತಪಡಿಸಿತು.

ಅಂಗಾಂಗಗಳ ಹಂಚಿಕೆ

ಬೆಂಗಳೂರಿನ ಜೀವಸಾರ್ಥಕತೆ ಹಾಗೂ ರಾಜ್ಯ ಅಂಗಾಂಗ ಮತ್ತು ಅಂಗಾಂಶ ಕಸಿ ಸಂಸ್ಥೆ (ಎಸ್​ಒಟಿಟಿಒ)ಯ ಸಮನ್ವಯದೊಂದಿಗೆ ವಿವಿಧ ಅಂಗಾಂಗ ಹಂಚಿಕೆ ಮಾಡಲಾಯಿತು. ಯಕೃತ್​ ಮತ್ತು ಒಂದು ಮೂತ್ರಪಿಂಡವನ್ನು ಮಂಗಳೂರಿನ ಎ.ಜೆ. ಆಸ್ಪತ್ರೆಗೆ, ಕಣ್ಣಿನ ಪೊರೆ (ಕಾರ್ನಿಯಾ)ಗಳನ್ನು ಅತ್ತಾವರದ ಕೆಎಂಸಿಗೆ ನೀಡಲಾಯಿತು. ಕಸಿಗಾಗಿ ಕಾಯುತ್ತಿದ್ದ ನೋಂದಾಯಿತ ರೋಗಿಯೊಬ್ಬರಿಗೆ ಕಸ್ತೂರ್ಬಾ ಆಸ್ಪತ್ರೆಯು ಒಂದು ಮೂತ್ರಪಿಂಡವನ್ನು ಪಡೆಯಿತು.

ಅಪರೂಪದ ನಿರ್ಧಾರ, ದೊಡ್ಡ ಮನಸ್ಸಿನ ಸಂಕೇತ

ಮಿದುಳು ಮೃತಪಟ್ಟಿದ್ದರಿಂದ ಕುಟುಂಬದವರು ಸ್ವಇಚ್ಛೆಯಿಂದ ಪ್ರಣವ್​ ಅವರ ಅಂಗಾಂಗ ದಾನಕ್ಕೆ ಒಪ್ಪಿಗೆ ನೀಡಿದರು. ಆಪ್ತರನ್ನು ಕಳೆದುಕೊಂಡ ನೋವಿನ ಸಂದರ್ಭದಲ್ಲೂ ಸಹ ಇತರರಿಗೆ ಜೀವ ನೀಡುವ ಅವರ ಈ ನಿರ್ಧಾರ ಅಪರೂಪದ ಧೈರ್ಯ ಮತ್ತು ದೊಡ್ಡ ಮನಸ್ಸಿನ ಸಂಕೇತವಾಗಿದೆ. ಅನೇಕರ ಜೀವ ಉಳಿಸುವಲ್ಲಿ ಅಂಗಾಂಗ ದಾನ ಎಷ್ಟು ಮಹತ್ವದ್ದು ಎನ್ನುವುದು ಇದರಿಂದ ತಿಳಿದುಬರುತ್ತದೆ ಎಂದು ಮಾಹೆ ಟೀಚಿಂಗ್​ ಹಾಸ್ಪಿಟಲ್ಸ್​ನ ಸಿಇಒ ಡಾ. ಸುಧಾಕರ್​ ಕಂಟಿಪುಡಿ ಶ್ಲಾಘಿಸಿದ್ದಾರೆ.
"

ಅಂಗಾಂಗ ದಾನವು ಒಬ್ಬರು ಇನ್ನೊಬ್ಬರಿಗೆ ನೀಡಬಹುದಾದ ಅತ್ಯಂತ ದೊಡ್ಡ ಕೊಡುಗೆ. ಆಪ್ತರನ್ನು ಕಳೆದುಕೊಂಡ ನೋವಿನ ಸಂದರ್ಭದಲ್ಲೂ ಪ್ರಣವ್​ ಹೆಗ್ಡೆ ಕುಟುಂಬದವರು ಇತರರಿಗೆ ಜೀವ ನೀಡುವ ನಿರ್ಧಾರ ಕೈಗೊಂಡಿರುವುದು ಮಹತ್ವದ ಮಾದರಿ. ಕಸಿಗಾಗಿ ಕಾಯುತ್ತಿರುವ ರೋಗಿಗಳಿಗೆ ಭರವಸೆ ಮೂಡಿಸಿದ ಈ ಶ್ರೇಷ್ಠ ಕಾರ್ಯಕ್ಕಾಗಿ ನಾವು ಆ ಕುಟುಂಬಕ್ಕೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುತ್ತೇವೆ.

— ಡಾ. ಅವಿನಾಶ್​ ಶೆಟ್ಟಿ. ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ.