ನೀರು ಶೇಖರಣೆಗೊಂಡಿರುವ ಕೆರೆ.
- ಪ್ರತಿ ಗ್ರಾಮ ಪಂಚಾಯಿತಿಗೆ ವಾರಾಹಿ ನೀರಿನ ಸರಬರಾಜು
- ಅಂತರ್ಜಲ ಮಟ್ಟ ಹೆಚ್ಚು
- ಕೆರೆಗಳಲ್ಲಿ ನಾಲ್ಕಾರು ಅಡಿ ನೀರು
ಬಂಡೀಮಠ ಶಿವರಾಮ ಆಚಾರ್ಯ ಬ್ರಹ್ಮಾವರ
ಬ್ರಹ್ಮಾವರ ತಾಲೂಕಿನ ಬಾರಕೂರು, ಉಪ್ಪೂರು, ಹಾರಾಡಿ, ಬೈಕಾಡಿ, ಹನೆಹಳ್ಳಿ, ಚೇರ್ಕಾಡಿ, ವಾರಂಬಳ್ಳಿ, ಹಂದಾಡಿ, ನೀಲಾವರ, ಆರೂರು, ಹಾವಂಜೆ ಗ್ರಾಮ ಪಂಚಾಯಿತಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಪ್ರತಿ ವರ್ಷ ಏಪ್ರಿಲ್, ಮೇನಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಕಂಡು ಬರುತ್ತಿತ್ತು. ಆದರೆ ಈ ವರ್ಷ ಇದಕ್ಕೆ ಬ್ರೇಕ್ ಬಿದ್ದಿದೆ.
ಪ್ರತಿ ಗ್ರಾಮ ಪಂಚಾಯಿತಿಗೆ ವಾರಾಹಿ ನೀರಿನ ಸರಬರಾಜು ಇರುವ ಕಾರಣ ಬ್ರಹ್ಮಾವರ ತಾಲೂಕಿನ ಹತ್ತು ಗ್ರಾಪಂಗೆ ನಡೂರಿನಲ್ಲಿರುವ ವಾರಾಹಿ ನೀರು ಸರಬರಾಜಿನಿಂದಾಗಿ ನೀರಿನ ತತ್ವಾರ ಇಲ್ಲದಂತಾಗಿದೆ.
ಕೆಲವು ವರ್ಷಗಳ ಹಿಂದೆ ಇಲ್ಲಿ ಹಲವಾರು ನದಿಗಳು ಹರಿಯುತ್ತಿದ್ದರೂ ನದಿ ನೀರಿನಲ್ಲಿ ಉಪ್ಪು ನೀರು ಹರಿಯುತ್ತಿದ್ದ ಕಾರಣ ಮತ್ತು ಪರಿಸರದ ಅನೇಕ ತೆರೆದ ಬಾವಿಯಲ್ಲಿ ಉಪ್ಪಿನ ಅಂಶ ಕಂಡು ಬಂದು ಸಿಹಿ ನೀರಿಗಾಗಿ ಜನರು ಹಪಹಪಿಸುತ್ತಿದ್ದರು. ಬ್ರಹ್ಮಾವರ ತಾಲೂಕಿನ 3 ಜೀವನದಿಗಳಾದ ಸೀತಾ, ಸ್ವರ್ಣ ಮತ್ತು ಮಡಿಸಾಲು ಹೊಳೆಗೆ ನೀಲಾವರ, ಬೈಕಾಡಿ, ಬೆಣ್ಣೆಕುದ್ರು, ಕಾಡೂರು, ಉಪ್ಪೂರು ಬಳಿ ಸಣ್ಣ ನೀರಾವರಿ ಇಲಾಕೆಯಿಂದ ಸಿಹಿ ನೀರು ಶೇಖರಣೆ ಮಾಡಲು ಹಾಕಲಾದ ಕಿಂಡಿ ಅಣೆಕಟ್ಟುಗಳಲ್ಲಿ ನದಿ ನೀರು ಶೇಖರಣೆಗೊಳ್ಳುವ ಕಾರಣ ನೀರಿನ ಅಂತರ್ಜಲ ಹೆಚ್ಚಿದೆ.
ಬರಿದಾಗಿಲ್ಲ ನದಿ
ಬಾರಕೂರಿನ ಕೋಟೆಕೇರಿ, ಮೂಡುಕೇರಿ, ಚೌಳಿಕೇರಿ, ರಂಗನಕೇರಿ, ಮಣೆಗಾರಕೇರಿ, ಪಡಸಾಲಕೇರಿ, ಬೆಳ್ತಿ ಕೇರಿಗಳ ಕೆರೆಗಳು ಮೇನಲ್ಲಿ ಬರಿದಾಗುತ್ತಿತ್ತು. ಆದರೆ ಈ ವರ್ಷ ಇನ್ನೂ ನಾಲ್ಕಾರು ಅಡಿ ನೀರು ಶೇಖರಣೆಯಾಗಿದ್ದು, ಬ್ರಹ್ಮಾವರ ಭಾಗದ ಬಹತೇಕ ಜನರ ಜೀವ ಜಲಕ್ಕೆ ಸಹಕಾರಿಯಾಗಿದೆ.
ಕಳೆದ ವರ್ಷದ ತನಕ ಬಾರಕೂರು ಹನೆಹಳ್ಳಿ ಗ್ರಾಪಂನಲ್ಲಿ 50 ಸಾವಿರ ಸಾಮರ್ಥ್ಯದ 2 ಮತ್ತು 1 ಲಕ್ಷ ಸಾಮರ್ಥ್ಯದ 2 ಟ್ಯಾಂಕ್‌ಗೆ 6 ತೆರೆದ ಬಾವಿಗಳಿದ್ದು, ಗ್ರಾಮದಲ್ಲಿ ನೀರಿನ ಬೇಡಿಕೆ ಇರುವಷ್ಟು ಪೂರೈಕೆ ವಾಡಲು ಕಷ್ಟವಾಗುತ್ತಿತ್ತು. ಈ ವರ್ಷ ವಾರಾಹಿ ನೀರಿನ ಪೂರೈಕೆಯಿಂದ ಪ್ರತಿ ಮನೆಗಳಿಗೆ ನೀರಿನ ಸಮಸ್ಯೆ ಇಲ್ಲದಂತಾಗಿದೆ.
ಪ್ರಭಾಶಂಕರ ಪುರಾಣಿಕ ಹನೆಹಳ್ಳಿ ಗ್ರಾಪಂ ಅಭಿವೃದ್ಧಿ ಅಧಿಕಾರಿ