ಉಡುಪಿ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಹರಿರಾಂ ಶಂಕರ್​. 
ಉಡುಪಿ

ಬ್ರಹ್ಮಾವರ ಠಾಣೆ ಪ್ರಕರಣ; ತನಿಖೆಗೆ ನಿರ್ಧಾರ

ಉಡುಪಿ ಎಸ್ಪಿ ಹರಿರಾಂ ಶಂಕರ್​ ಪ್ರಕಟಣೆ

ಉಡುಪಿ: ಬ್ರಹ್ಮಾವರ ಠಾಣಾ ವ್ಯಾಪ್ತಿಯ ಪ್ರಕರಣವೊಂದಕ್ಕೆ ಸಂಬಂಧಿಸಿ ಸಮಾಜದಲ್ಲಿ ವಿವಿಧ ಅನುಮಾನ ಹುಟ್ಟಿಕೊಂಡಿದ್ದು, ಸದರಿ ಪ್ರಕರಣದ ತನಿಖೆ ಸ್ಥಗಿತಗೊಳಿಸಿ ಸೂಕ್ತ ತನಿಖಾಧಿಕಾರಿಗೆ ವರ್ಗಾಯಿಸಲು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಹರಿರಾಂ ಶಂಕರ್​ ನಿರ್ಧರಿಸಿದ್ದಾರೆ. 
ಈ ವಿಚಾರವಾಗಿ ಮಂಗಳವಾರ (ಡಿ.16) ಪ್ರಕಟಣೆ ಹೊರಡಿಸಿರುವ ಅವರು, ಬ್ರಹ್ಮಾವರದಲ್ಲಿ ಟಿಸಿದ ವಿದ್ಯಮಾನಗಳ ಕುರಿತು ಮಾಹಿತಿ ನೀಡಿದ್ದಾರೆ.

ಘಟನೆ ವಿವರ

2014ರಲ್ಲಿ ಸಂಭವಿಸಿದ್ದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿ 2025ರ ಡಿ.9ರಂದು ಆರೋಪಿ ಆಶಿಕ್​ ಎಂಬವರಿಗೆ ಕೋರ್ಟ್​ನಿಂದ ಶಿಕ್ಷೆ ಆಗಿದೆ. ಅಲ್ಲದೆ, 20 ಲಕ್ಷ ರೂ. ಹಾಗೂ ಅದರ ಬಡ್ಡಿಯನ್ನು ನ್ಯಾಯಾಲಯಕ್ಕೆ ಜಮಾ ಮಾಡುವಂತೆಯೂ ನ್ಯಾಯಾಧೀಶರು ತೀರ್ಪು ನೀಡಿದ್ದರು. ಆದರೆ, ಆರೋಪಿ ಆಶಿಕ್​, ಕೋರ್ಟ್​ಗೆ ಹಾಜರಾಗದೆ ಹಾಗೂ ಹಣವನ್ನು ಕಟ್ಟದೆ ನಾಪತ್ತೆಯಾಗಿದ್ದಾನೆ. ಹೀಗಾಗಿ ನ್ಯಾಯಾಲಯವು ಆರೋಪಿಯನ್ನು ದಸ್ತಗಿರಿ ಮಾಡಿ ಡಿ.17ರ ಒಳಗೆ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಮಲ್ಪೆ ಪೊಲೀಸ್​ ಠಾಣೆ ಸೂಚನಾ ಪತ್ರ ಹೊರಡಿಸಿ ಆದೇಶ ಮಾಡಿತ್ತು.

ಪೊಲೀಸರ ಕರ್ತವ್ಯಕ್ಕೆ ಅಡ್ಡಿ

ನ್ಯಾಯಾಲಯದ ಸೂಚನಾ ಪತ್ರದಂತೆ ವಾರಂಟ್​ ಜಾರಿಗೊಳಿಸಲು ಮಲ್ಪೆ ಪೊಲೀಸ್​ ಠಾಣೆಯ ಸಿಬ್ಬಂದಿ ಬ್ರಹ್ಮಾವರದಲ್ಲಿರುವ ಆರೋಪಿಯ ಮನೆಗೆ ತೆರಳಿದ್ದರು. ಆ ಸಂದರ್ಭದಲ್ಲಿ ಮನೆಯಲ್ಲಿದ್ದ ಇಬ್ಬರು ಮಹಿಳೆಯು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಬ್ರಹ್ಮಾವರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.

ಗೊಂದಲ, ಅನುಮಾನ ಬೇಡ

ಘಟನೆಗೆ ಸಂಬಂಧಿಸಿ ಎರಡ್ಮೂರು ದಿನದಿಂದ ಬಿಲ್ಲವ ಸಮಾಜದ ಸಂಘಟನೆ, ಚುನಾಯಿತ ಪ್ರತಿನಿಧಿಗಳು, ಮಹಿಳಾ ಸಂಘಟನೆಗಳ ಮುಖಂಡರು ಹಾಗೂ ರಾಜಕೀಯ ಪಕ್ಷಗಳ ಮುಖಂಡರು ಬೇರೆ ಬೇರೆ ರೀತಿಯಲ್ಲಿ ಅನುಮಾನ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಸದ್ಯ ಈ ಪ್ರಕರಣದ ತನಿಖೆ ಸ್ಥಗಿತಗೊಳಿಸಿದ್ದೇನೆ. ಅಲ್ಲದೆ, ಸಂತ್ರಸ್ತ ಮಹಿಳೆಯರು ಇಲಾಖಾ ಸಿಬ್ಬಂದಿ ವಿರುದ್ಧ ಮಾಡಿರುವ ಹಲ್ಲೆಯ ಆರೋಪವನ್ನು ಹಿರಿಯ ಅಧಿಕಾರಿಗಳಿಂದ ವಿಚಾರಣೆ ನಡೆಸಿ ಲೋಪ ಕಂಡುಬಂದಲ್ಲಿ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಈ ವಿಚಾರಕ್ಕೆ ಸಂಬಂಧಿಸಿ ಯಾವುದೇ ರೀತಿಯ ಗೊಂದಲ, ಅನುಮಾನ ಪಡಬೇಕಿಲ್ಲ. ಸೂಕ್ತ ನ್ಯಾಯ ಒದಗಿಸುವ ದೃಷ್ಟಿಯಿಂದ ಈ ನಿರ್ಧಾರ ಕೈಗೊಂಡಿರುತ್ತೇನೆ ಎಂದು ಎಸ್ಪಿ ಹರಿರಾಂ ತಿಳಿಸಿದ್ದಾರೆ.