ಮುಂಡಾಜೆ ಗ್ರಾಮ ಪಂಚಾಯಿತಿಯ ಎರಡು ಮತ್ತು ಮೂರನೇ ವಾರ್ಡ್‌ಸಭೆಯಲ್ಲಿ ಭಾಗವಹಿಸಿದ್ದ ಗ್ರಾಮಸ್ಥರು ಅಹವಾಲುಗಳನ್ನು ಸಲ್ಲಿಸಿದರು. 
ಉಡುಪಿ

ರಸ್ತೆ ಅಭಿವೃದ್ಧಿಯಾಗದಿದ್ದರೆ ಚುನಾವಣೆ ಬಹಿಷ್ಕಾರ

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಮುಂಡಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎರಡನೇ ಹಾಗೂ ಮೂರನೇ ವಾರ್ಡ್‌ನ ಗ್ರಾಮಸಭೆಗೆ ಪೂರ್ವಭಾವಿಯಾಗಿ ನಡೆದ ವಾರ್ಡ್‌ಸಭೆಯಲ್ಲಿ ಮೂಲಸೌಕರ್ಯಗಳ ಕೊರತೆ, ರಸ್ತೆ ಅಭಿವೃದ್ಧಿ, ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದ ಉಂಟಾಗಿರುವ ಸಮಸ್ಯೆಗಳು ಹಾಗೂ ವಿದ್ಯುತ್ ವ್ಯತ್ಯಯ ಸೇರಿ ಹಲವು ಸಮಸ್ಯೆಗಳ ಕುರಿತು ಗಂಭೀರ ಚರ್ಚೆ ನಡೆಯಿತು.
ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದ ಗ್ರಾಮಸ್ಥರು ತಮ್ಮ ವ್ಯಾಪ್ತಿಯ ಸಮಸ್ಯೆಗಳ ಕುರಿತು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದು ಅಸಮಾಧಾನ ವ್ಯಕ್ತಪಡಿಸಿದರು.
ಸೀಟು-ಕಾಯರ್ತೋಡಿ-ಕೊಡಂಗೆ-ಮೂಲಾರು-ಕುಡೆಂಚಿ ಸಂಪರ್ಕ ರಸ್ತೆಯ ಅಭಿವೃದ್ಧಿ ವಿಚಾರ ಪ್ರಸ್ತಾಪಗೊಂಡಿತು. ಈ ರಸ್ತೆ ಹಲವು ದಶಕಗಳಿಂದ ಸಾರ್ವಜನಿಕರ ಪ್ರಮುಖ ಸಂಪರ್ಕ ವಾರ್ಗವಾಗಿದ್ದರೂ ಇದುವರೆಗೆ ಸಮರ್ಪಕವಾಗಿ ಅಭಿವೃದ್ಧಿ ಕಾಮಗಾರಿ ನಡೆದಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಬಾರಿಯೂ ಚುನಾವಣೆ ಸಂದರ್ಭ ರಸ್ತೆ ಅಭಿವೃದ್ಧಿಯ ಭರವಸೆ ನೀಡಿ ಶಿಲಾನ್ಯಾಸ ಕಾರ್ಯಕ್ರಮ ನಡೆಸಲಾಗುತ್ತದೆ. ಆದರೆ ಕಾಮಗಾರಿ ಮಾತ್ರ ಆರಂಭವಾಗುವುದಿಲ್ಲ. ಅಭಿವೃದ್ಧಿ ಎಂಬುದು ಈ ಭಾಗದ ಜನರಿಗೆ ಮರೀಚಿಕೆಯಾಗಿದೆ. ಈ ರಸ್ತೆಯ ಅಭಿವೃದ್ಧಿಗೆ ತಕ್ಷಣ ಕ್ರಮ ಕೈಗೊಳ್ಳದಿದ್ದಲ್ಲಿ ಮುಂಬರುವ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದರು.

ವಾರ್ಡ್‌ಸಭೆಗೆ ಅಭೂತಪೂರ್ವ ಸ್ಪಂದನೆ

ವಾರ್ಡ್‌ಸಭೆಯಲ್ಲಿ 150ಕ್ಕೂ ಅಧಿಕ ಮಂದಿ ಪಾಲ್ಗೊಂಡು ತಮ್ಮ ಸಮಸ್ಯೆಗಳು ಮತ್ತು ಬೇಡಿಕೆಗಳನ್ನು ಮಂಡಿಸಿದರು. ವಾರ್ಡ್‌ಸಭೆಯಲ್ಲಿ ಹಿಂದೆಂದೂ ಕಾಣದಷ್ಟು ಗ್ರಾಮಸ್ಥರ ಹಾಜರಾತಿ ಕಂಡುಬಂತು. ಸಾರ್ವಜನಿಕರ ಜಾಗೃತಿ ಹಾಗೂ ಗ್ರಾವಾಭಿವೃದ್ಧಿಯ ಬಗ್ಗೆ ಇರುವ ಕಾಳಜಿಗೆ ಸಭೆ ಸಾಕ್ಷಿಯಾಯಿತು.
ಪಂಚಾಯಿತಿ ಕಾರ್ಯದರ್ಶಿ ನಾಗವೇಣಿ, ವಿಶೇಷ ಆಹ್ವಾನಿತರಾಗಿದದ ಪ್ರೌಢಶಾಲೆ ನಿವೃತ್ತ ಮುಖ್ಯಶಿಕ್ಷಕ ಪದ್ಮನಾಭ ಆರ್.ಪಟವರ್ಧನ್, ಬಿಜು ಅಗರಿ ಉಪಸ್ಥಿತರಿದ್ದರು. ಪಿಡಿಒ ಗಾಯತ್ರಿ ಸ್ವಾಗತಿಸಿದರು.

ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಲ್ಪಿಸಿ

ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದ ಗ್ರಾಮದಲ್ಲಿ ಸಮಸ್ಯೆಗಳು ಉಂಟಾಗಿವೆ ಎಂದು ಗ್ರಾಮಸ್ಥರು ದೂರಿದರು. ಮಳೆಗಾಲದಲ್ಲಿ ನೀರು ಸರಿಯಾಗಿ ಹರಿಯದೆ ಕೆಲವು ಕಡೆಗಳಲ್ಲಿ ರಸ್ತೆ ಸಂಪರ್ಕಕ್ಕೆ ತೊಂದರೆ ಉಂಟಾಗಿದೆ. ಸಂಚಾರ ಸಮಸ್ಯೆಯಿಂದ ಜನರು ಹೈರಾಣಾಗಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹಿರಿಯ ಅಧಿಕಾರಿಗಳು ಮುಂಬರುವ ಗ್ರಾಮಸಭೆಗೆ ಆಗಮಿಸಿ ಸಾರ್ವಜನಿಕರ ಅಹವಾಲುಗಳನ್ನು ಆಲಿಸಿ ಸಮಸ್ಯೆಗಳಿಗೆ ಶ್ರೀ ಪರಿಹಾರ ಕಲ್ಪಿಸಬೇಕು ಎಂಬ ಆಗ್ರಹ ಸಭೆಯಲ್ಲಿ ವ್ಯಕ್ತವಾಯಿತು.