ಮೂಲ್ಕಿ: ಮೂಲ್ಕಿ ಒಡೆಯರಬೆಟ್ಟು ಘಜನಿ ಚರ್ಚ್ ಬಳಿಯ ನಿವಾಸಿ ಲಕ್ಷ್ಮಣ ದೇವಾಡಿಗ(65) ಅವರ ಮೃತದೇಹ ಬುಧವಾರ ಮನೆ ಸಮೀಪದ ಕೆರೆಯಲ್ಲಿ ಪತ್ತೆಯಾಗಿದೆ.
ಲಕ್ಷ್ಮಣ ದೇವಾಡಿಗ ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದು, ಮೂಲ್ಕಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಬುಧವಾರ ಬೆಳಗ್ಗೆ ಕೆರೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸ್ಥಳೀಯರಿಗೆ ಪರಿಸರದಲ್ಲಿ ವಿಪರೀತ ದುರ್ವಾಸನೆ ಬರುತ್ತಿರುವುದನ್ನು ಕಂಡು ಪರಿಶೀಲಿಸಿದಾಗ ಕೆರೆಯಲ್ಲಿ ಮೃತದೇಹ ಕೊಳೆತ ಸ್ಥಿತಿಯಲ್ಲಿ ಕಂಡು ಬಂದಿದೆ. ಕೂಡಲೇ ಸ್ಥಳೀಯರು ಮೂಲ್ಕಿ ಪೊಲೀಸರು, ಮನೆಯವರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿದ್ದಾರೆ.
ಬಳಿಕ ಜೀವ ರಕ್ಷಕ ತಂಡದ ಸದಸ್ಯರಾದ ಪ್ರಸಾದ್ ಪೂಜಾರಿ ಯಾನೆ ಪೇಚು, ದಾವೂದ್ ಇಬ್ರಾಹಿಂ ಮತ್ತಿತರರು ಕೆರೆಯಲ್ಲಿದ್ದ ಶವವನ್ನು ಮೇಲಕ್ಕೆತ್ತಿ ಮೂಲ್ಕಿ ಸರ್ಕಾರಿ ಶವಾಗಾರಕ್ಕೆ ಸೇರಿಸಿದ್ದಾರೆ. ಲಕ್ಷ್ಮಣ ದೇವಾಡಿಗ ರಾತ್ರಿ ಹೊತ್ತು ನಡೆದುಕೊಂಡು ಹೋಗುತ್ತಿರುವಾಗ ಆಯತಪ್ಪಿ ಕೆರೆಗೆ ಬಿದ್ದು ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. ಅವರು ಕೂಲಿ ಕೆಲಸ ಮಾಡುತ್ತಿದ್ದು ಅವಿವಾಹಿತನಾಗಿದ್ದ. ಮೂಲ್ಕಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.