ಮೂಡುಬಿದಿರೆ ಭಟ್ಟಾರಕ ಸ್ವಾಮೀಜಿಯಿಂದ ಯೋಗಾಸನ.
ಮೂಡುಬಿದಿರೆ: ಯೋಗದ ಮೂಲಕ ದೇಹ, ಮನಸ್ಸಿನ ಹೊಂದಾಣಿಕೆ ಸಾಧಿಸಿ ಶಾಂತಿ, ಆರೋಗ್ಯ ಪಡೆಯಬಹುದು. ಯೋಗದಲ್ಲಿ ಲೋಕಕಲ್ಯಾಣದ ಭಾವನೆ ಅಡಗಿದ್ದು, ಪ್ರತಿಯೊಬ್ಬರೂ ಪ್ರತಿದಿನ ಕನಿಷ್ಠ 10 ನಿಮಿಷಗಳಾದರೂ ಯೋಗಾಭ್ಯಾಸ ಮಾಡಬೇಕು ಎಂದು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಪಟ್ಟಾಚಾರ್ಯವರ್ಯ ಸ್ವಾಮೀಜಿ ಕರೆ ನೀಡಿದರು.
ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಧವಳತ್ರಯ ಜೈನ ಕಾಶಿ ಟ್ರಸ್ಟ್, ಮೂಡುಬಿದಿರೆ ಶ್ರೀ ಜೈನ ಮಠ ವತಿಯಿಂದ ಎರಡು ದಿನಗಳ ಯೋಗ ಶಿಬಿರ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಪಟ್ಟಾಚಾರ್ಯವರ್ಯ ಸ್ವಾಮೀಜಿ ಮಾರ್ಗದರ್ಶನದಲ್ಲಿ ನಡೆಯಿತು.
ಸ್ವಸ್ತಿಶ್ರೀ ಜೈನ ವಸತಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳು ಸ್ವಸ್ತಿಶ್ರೀ ಭಟ್ಟಾರಕ ಭವನದಲ್ಲಿ ಶನಿವಾರ ನಡೆದ ಯೋಗ ಶಿಬಿರದಲ್ಲಿ ಭಾಗವಹಿಸಿದರು. ದೆಹಲಿ, ಬೆಂಗಳೂರು ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿದ ಯಾತ್ರಾರ್ಥಿಗಳು ಭಾನುವಾರ ಯೋಗಾಭ್ಯಾಸದಲ್ಲಿ ಪಾಲ್ಗೊಂಡರು. ಸ್ವಾಮೀಜಿಯವರು ಪದ್ಮಾಸನ, ಪರ್ವತಾಸನ, ಅನುಲೋಮ-ವಿಲೋಮ, ವಿವಿಧ ಯೋಗಾಸನಗಳ ಮಹತ್ವ ವಿವರಿಸಿದರು. ಮಯೂರಾಸನ, ಗೋರಕ್ಷಾಸನ, ಗರುಡಾಸನ, ಬ್ರಹ್ಮಚರ್ಯಾಸನ, ಶೀರ್ಷಾಸನ, ಸರ್ವಾಂಗಾಸನಗಳ ಪ್ರಾತ್ಯಕ್ಷಿಕೆ ನೀಡಿದರು. ಪ್ರಾಂಶುಪಾಲೆ ಸೌಮ್ಯಾ ಜೈನ್, ಉಪನ್ಯಾಸಕರು ಉಪಸ್ಥಿತರಿದ್ದರು.