ಮೂಡುಬೆಳ್ಳೆ ಬೊಬ್ಬರ್ಯ ಕೆರೆ. 
ಉಡುಪಿ

ಬೊಬ್ಬರ್ಯಕೆರೆಗಿಲ್ಲ ಆಸರೆ : ಈಡೇರದ ದಾನಿಯ ಕನಸು

ಸ್ಥಳೀಯಾಡಳಿತದಿಂದ ಸಿಗಲಿ ಕಾಯಕಲ್ಪ

ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ

ಊರಿನ ಸೌಂದರ್ಯದೊಂದಿಗೆ ನೀರಿನಾಸರೆಯಾಗಿ, ಅಂತರ್ಜಲ ವೃದ್ಧಿಯ ಮೂಲವಾಗಿ, ಪ್ರಾಣಿಪಕ್ಷಿಗಳ ದಾಹ ತಣಿಸುವ ಮೂಡುಬೆಳ್ಳೆ ಪೇಟೆಯ ಸಮೀಪವೇ ಇರುವ ಬೊಬ್ಬರ್ಯಕೆರೆ ‘ಅಮೃತ ಸರೋವರ’ ಹೆಸರು ಪಡೆದಿದ್ದರೂ ಅಭಿವೃದ್ಧಿಯ ಹಲವು ಸಾಧ್ಯತೆಗಳನ್ನು ತನ್ನೊಡಲೊಳಗೆಯೇ ಇರಿಸಿಕೊಂಡು ಸೊರಗುತ್ತಿದೆ.

ಮೇಲಿನ ಮತ್ತು ಕೆಳಗಿನ ಕೆರೆಗಳ ಒಟ್ಟು ವಿಸ್ತೀರ್ಣ 5.86 ಎಕರೆ ಇದ್ದು, ನಟ್ಟ ನಡುವೆ ಕಟ್ಟಿಂಗೇರಿ ಮುಖ್ಯರಸ್ತೆ ಹಾದುಹೋಗಿದೆ. ಪೇಟೆ ಬಳಿಯೇ ಇಷ್ಟೊಂದು ದೊಡ್ಡ ಕೆರೆ ಇದ್ದು, ಪ್ರವಾಸೋದ್ಯಮಕ್ಕೆ ತೆರೆದುಕೊಂಡಿರುವುದು ಕಾಪು ತಾಲೂಕಿನಲ್ಲೇ ಅಪರೂಪ ಎನ್ನಬಹುದು. 125 ವರ್ಷಗಳ ಹಿಂದೆ ದಾನಿಯೊಬ್ಬರು ಸಾರ್ವಜನಿಕರಿಗೆ ಕೆರೆ ನಿರ್ಮಿಸುವ ಉದ್ದೇಶಕ್ಕಾಗಿಯೇ ತನ್ನ ಜಮೀನು ಬಿಟ್ಟುಕೊಟ್ಟಿದ್ದರು. ಆದರೆ ಆ ಅಜ್ಞಾತ ದಾನಿಯ ಕನಸು ಇಂದಿಗೂ ಈಡೇರಿಲ್ಲ.

ಏನೆಲ್ಲ ಮಾಡಬಹುದು?

ಕೆರೆ ದಂಡೆಯ ಮೇಲೆ ವಾಕಿಂಗ್ ಟ್ರ್ಯಾಕ್ ಅಳವಡಿಸಿ ಈಗಾಗಲೇ ಅಳವಡಿಸಿದ ಇಂಟರ್‌ಲಾಕನ್ನು ವಿಸ್ತರಿಸಬಹುದು. ಬೋಟಿಂಗ್ ಸೌಲಭ್ಯ ಕಲ್ಪಿಸಿಕೊಡಬಹುದು. ಕೆರೆಯ ಹೂಳನ್ನೆತ್ತಿ ನೀರಿನ ಸಂಗ್ರಹ ಸಾಮರ್ಥ್ಯ ಹೆಚ್ಚಿಸಿದ್ದಲ್ಲಿ ಅಂತರ್ಜಲ ವೃದ್ಧಿಸಬಹುದು. ಮೀನು ಸಾಕಣೆ ಮಾಡಬಹುದು. ಕೆರೆಯ ನಡುವೆ ಕಾರಂಜಿ ಹಾಗೂ ಲೈಟಿಂಗ್ ವ್ಯವಸ್ಥೆ, ಕೆರೆ ದಂಡೆಯಲ್ಲಿ ಆಸನದ ವ್ಯವಸ್ಥೆ ಕಲ್ಪಿಸಬಹುದು.

ನಗರ ತೆಕ್ಕೆಗೆ

ಪ್ರಸ್ತುತ ಬೆಳ್ಳೆ ಗ್ರಾಮದ ತೋಕೋಳಿ, ನೆಲ್ಲಿಕಟ್ಟೆವರೆಗಿನ ಪ್ರದೇಶಗಳು ನಗರ ಪರಿಮಿತಿಯಲ್ಲಿ ಗುರುತಿಸಲಾಗುತ್ತಿದೆ. ಅಲೆವೂರು ಗ್ರಾಪಂ ಈಗಾಗಲೇ ನಗರ ಪ್ರಾಧಿಕಾರದ ವ್ಯಾಪ್ತಿಯಲ್ಲಿದೆ. ಭವಿಷ್ಯದಲ್ಲಿ ಮಣಿಪುರ ಗ್ರಾಪಂ ಬಳಿಕ ಬೆಳ್ಳೆ ಗ್ರಾಪಂ ಉಡುಪಿ ನಗರದ ತೆಕ್ಕೆಗೆ ಸೇರಲಿದೆ. ಈ ಬಗ್ಗೆ ಮುಂದಾಲೋಚನೆ ನಡೆಸಿ ಪ್ರಕೃತಿಯ ಅವಿಭಾಜ್ಯ ಅಂಗವಾದ ಕೆರೆಯನ್ನು ಉಳಿಸಿ ಅಭಿವೃದ್ಧಿಪಡಿಸಲು ಸ್ಥಳೀಯಾಡಳಿತ ಸಂಕಲ್ಪ ತೊಡಬೇಕಿದೆ.

ಪಕ್ಷಿಗಳ ಆಶ್ರಯತಾಣ

ಬೆಳ್ಳಕ್ಕಿ, ಕೊಕ್ಕರೆ, ಹಂಸ ಸಹಿತ ಪಕ್ಷಿಗಳು ಕೆರೆಯ ತಂಪಾದ ವಾತಾವರಣದಲ್ಲಿ ಆಶ್ರಯ ಪಡೆದುಕೊಳ್ಳುತ್ತಿವೆ. ಒಮ್ಮೆಗೆ ವಲಸೆ ಹೋಗುವ ಪಕ್ಷಿಗಳು ಇನ್ನೊಮ್ಮೆ ಗುಂಪಾಗಿ ಬಂದು ಪರಿಸರದ ಅಂದವನ್ನು ಹೆಚ್ಚಿಸುತ್ತವೆ. ಕೆಲವು ವರ್ಷಗಳ ಹಿಂದೆ ಉದ್ಯೋಗ ಖಾತ್ರಿ ಯೋಜನೆಯಡಿ ಕೆರೆಯ ಹೂಳೆತ್ತಲಾಗಿತ್ತು. ಪಾಂಬೂರು ಹೊಳೆಯಿಂದ ಪೈಪ್‌ಲೈನ್ ಮೂಲಕ ಜಲಜೀವನ್ ಮಿಷನ್ ನೀರಿನ ಯೋಜನೆಯ ಪೈಪ್‌ಲೈನ್ ಸಂಪರ್ಕವೂ ಕೆರೆಗೆ ಇದೆ.

ನನ್ನ ಮನೆ ಸಮೀಪವಿರುವ ಬೊಬ್ಬರ್ಯ ಕೆರೆಯ ದಂಡೆಯ ಭಾಗವನ್ನು 3 ಲಕ್ಷ ರೂ. ವೆಚ್ಚ ಮಾಡಿ ಪುನರ್ ನಿರ್ಮಿಸಿದ್ದೇನೆ. 4 ಸಾವಿರ ರೋಹು, ಕಾಟ್ಲಾ ತಳಿಯ ಮೀನುಗಳನ್ನು ಶಿವಮೊಗ್ಗ, ಕಾರ್ಕಳದಿಂದ ತಂದು ಕೆರೆಗೆ ಬಿಡಲಾಗಿದೆ. ಕೆರೆಯ ಸಮಗ್ರ ಅಭಿವೃದ್ಧಿಗೆ ಗ್ರಾಮ ಪಂಚಾಯಿತಿ, ಸ್ಥಳೀಯರ ಸಹಕಾರ ಅಗತ್ಯ.
ಜೆರಾಲ್ಡ್ ಫರ್ನಾಂಡಿಸ್ ಮಾಜಿ ಅಧ್ಯಕ್ಷ, ಉಡುಪಿ ಜಿಲ್ಲಾ ಪಂಚಾಯಿತಿ