ಉಡುಪಿ: ಮಲ್ಪೆ ಪಡುಕೆರೆ ಧಕ್ಕೆಯಲ್ಲಿ ನಡೆದಿದ್ದ ಬೋಟ್ ಕಾರ್ಮಿಕನನ್ನು ಸಹೋದ್ಯೋಗಿ ಕೊಲೆ ಮಾಡಿದ್ದು, ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಚಿಕ್ಕಮಗಳೂರು ಮೂಲದ ಅಭಿಷೇಕ್ ಮೃತ ಯುವಕ. ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಅರಕೆರೆ ನಿವಾಸಿ ಗೋವಿಂದರಾಜ್ ಆರೋಪಿ.
ಸೋಮವಾರ ರಾತ್ರಿ ಪಡುಕೆರೆ ದಕ್ಕೆಯಲ್ಲಿದ್ದ ಮೀನುಗಾರಿಕಾ ಬೋಟಿನಲ್ಲಿ ಗೋವಿಂದರಾಜ್ ಹಾಗೂ ಅಭಿಷೇಕ್ ನಡುವೆ ತೀವ್ರ ಗಲಾಟೆ ನಡೆದಿತ್ತು. ಈ ವೈಷಮ್ಯದ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗಿನ ಜಾವ ಆರೋಪಿ ಗೋವಿಂದರಾಜ್ ಬೋಟ್ನಲ್ಲಿಯೇ ಅಭಿಷೇಕ್ನನ್ನು ಕೊಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದ.
ರೈಲ್ವೇ ನಿಲ್ದಾಣದಲ್ಲಿ ಆರೋಪಿ ಸೆರೆ
ಕೊಲೆ ನಡೆದ ಕುರಿತು ಮಾಹಿತಿ ತಲುಪುತ್ತಿದ್ದಂತೆಯೇ ಕಾರ್ಯಪ್ರವೃತ್ತರಾದ ಮಲ್ಪೆ ಪೊಲೀಸರು ಆರೋಪಿಯ ಪತ್ತೆಗೆ ಉಡುಪಿ ಭಾಗದಲ್ಲಿ ಜಾಲ ಬೀಸಿದ್ದು, ಆರೋಪಿ ಗೋವಿಂದರಾಜ್ ಉಡುಪಿಯಿಂದ ಹೈದರಾಬಾದ್ ಅಥವಾ ಮುಂಬೈಗೆ ಪರಾರಿಯಾಗುವ ಉದ್ದೇಶದಿಂದ ರೈಲ್ವೇ ನಿಲ್ದಾಣಕ್ಕೆ ತೆರಳುತ್ತಿದ್ದಾಗ ವಶಕ್ಕೆ ಪಡೆದಿದ್ದಾರೆ.
ಬಂಧಿತ ಆರೋಪಿ ಗೋವಿಂದರಾಜ್ ಕಳೆದ ಸುಮಾರು 15 ವರ್ಷಗಳಿಂದ ತನ್ನ ಸ್ವಂತ ಮನೆಗೆ ಹೋಗದೇ ಮುಂಬೈ, ಹೈದರಾಬಾದ್ ಸೇರಿದಂತೆ ವಿವಿಧ ಕಡೆಗಳಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದನೆಂದು ವಿಚಾರಣೆ ವೇಳೆ ತಿಳಿದುಬಂದಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.