ಉಡುಪಿಯಲ್ಲಿ ಸಂಭವಿಸಿದ ದೋಣಿ ದುರಂತದಲ್ಲಿ ಮೃತಪಟ್ಟ ಚಾಮರಾಜನಗರ ಜಿಲ್ಲೆಯ ಸಿಂಧು ಹಾಗೂ ಶಂಕರಪ್ಪ.
* ಹಂಗಾರಕಟ್ಟೆ ಬೀಚ್ ಸಮೀಪ ಘಟನೆ
* ಮೈಸೂರಿನಿಂದ ಬಂದಿದ್ದ ಪ್ರವಾಸಿಗರು
ಉಡುಪಿ: ಪ್ರವಾಸಿಗರನ್ನು ವಿಹಾರಕ್ಕೆ ಕರೆದೊಯ್ಯುತ್ತಿದ್ದ ದೋಣಿಯೊಂದು ಸಮುದ್ರದಲ್ಲಿ ಪಲ್ಟಿಯಾಗಿ ಇಬ್ಬರು ಮೃತಪಟ್ಟಿದ್ದು, ನಾಲ್ಕು ಮಂದಿ ತೀವ್ರ ಅಸ್ವಸ್ಥರಾದ ಘಟನೆ ಮಲ್ಪೆ-ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ಹಂಗಾರಕಟ್ಟೆ ಬೀಚ್ನಲ್ಲಿ ಸೋಮವಾರ (ಜ.26) ಮಧ್ಯಾಹ್ನ 12 ಗಂಟೆಗೆ ಸಂಭವಿಸಿದೆ.
ಚಾಮರಾಜನಗರ ಜಿಲ್ಲೆಯ ಹರವೆ ಗ್ರಾಮದ ಶಂಕರಪ್ಪ (27), ನರಸೀಪುರ ತಾಲೂಕಿನ ಮೂಗೂರು ಗ್ರಾಮದ ಸಿಂಧು (25) ಮೃತಪಟ್ಟ ದುರ್ದೈವಿಗಳು. ಧರ್ಮರಾಜ್ (26) ಹಾಗೂ ದಿಶಾ (26) ಎಂಬವರ ಸ್ಥಿತಿ ಚಿಂತಾಜನಕವಾಗಿದೆ. ಉಳಿದ 10 ಜನರನ್ನು ರಕ್ಷಿಸಲಾಗಿದೆ.
ಮೈಸೂರಿನ ಸರಸ್ವತಿಪುರಂನ ಕಾಲ್ ಸೆಂಟರ್ನಲ್ಲಿ ಕೆಲಸ ಮಾಡುತ್ತಿದ್ದ 14 ಪ್ರವಾಸಿಗರು ಉಡುಪಿಗೆ ಬಂದಿದ್ದರು. ರೆಸಾರ್ಟೊಂದರಲ್ಲಿ ಉಳಿದಿದ್ದ ಅವರು, ಮಲ್ಪೆಯ ಡೆಲ್ಟಾ ಬೀಚ್ ಪಾಯಿಂಟ್ನಿಂದ ವೇವರ್ರೈಡರ್ಸ್ ಕಂಪನಿಗೆ ಸೇರಿದ ದೋಣಿಯಲ್ಲಿ ಸಮುದ್ರ ವಿಹಾರಕ್ಕೆ ತೆರಳಿದ್ದರು. ನದಿ ಮತ್ತು ಸಮುದ್ರ ಸಂಗಮ ಪ್ರದೇಶವಾದ ಹಂಗಾರಕಟ್ಟೆ ಹಡಗು ನಿರ್ಮಾಣ ಪ್ರದೇಶದ ಬಳಿ ದೋಣಿ ಮಗುಚಿ ಬಿದ್ದಿದೆ.
ದೋಣಿಯಲ್ಲಿ ವಿಹರಿಸುವಾಗ ಎಲ್ಲರಿಗೂ ಲೈಫ್ ಜಾಕೆಟ್ ನೀಡಿದ್ದರೂ ಕೆಲವರು ಧರಿಸಿರಲಿಲ್ಲ ಎಂದು ತಿಳಿದುಬಂದಿದೆ. ದೋಣಿ ಪಲ್ಟಿಯಾಗಿ ಪ್ರವಾಸಿಗರು ಅಪಾಯಕ್ಕೆ ಸಿಲುಕಿದ್ದ ಸಂದರ್ಭದಲ್ಲಿ ಸಮೀಪದಲ್ಲಿದ್ದ ದೋಣಿಗಳ ಸಹಾಯದಿಂದ ದಡಕ್ಕೆ ತರಲಾಗಿದೆ. ಮಲ್ಪೆ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದಾರೆ.
ಪ್ರವಾಸೋದ್ಯಮ ಇಲಾಖೆ ನಿರ್ಲಕ್ಷ್ಯವೇ ಕಾರಣ
* ಶಾಸಕ ಯಶ್ಪಾಲ್ ಸುವರ್ಣ ಆಕ್ರೋಶ
ಉಡುಪಿ: ದೋಣಿ ದುರಂತದಲ್ಲಿ ಪ್ರವಾಸಿಗರು ಸಾವಿಗೀಡಾಗಲು ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಶಾಸಕ ಯಶ್ಪಾಲ್ ಸುವರ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರವಾಸಿ ಬೋಟ್ ಹಾಗೂ ದೋಣಿಗಳು ನಿಯಮಾವಳಿ ಮೀರಿ, ಸೂಕ್ತ ಪರವಾನಗಿಯೂ ಇಲ್ಲದೆ ಕಾರ್ಯಾಚರಿಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿವೆ. ಆದರೂ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ. ನಕಲಿ ದಾಖಲೆ ನೀಡಿ ಕೆಲವು ಬೋಟ್ಗಳು ಪ್ರವಾಸಿ ಚಟುವಟಿಕೆ ನಡೆಸುತ್ತಿದ್ದು, ಆ ಬಗ್ಗೆಯೂ ಇಲಾಖೆ ಕ್ರಮವಹಿಸಿಲ್ಲ.
ಉಡುಪಿಯಲ್ಲಿ ಸಂಭವಿಸಿದ ದೋಣಿ ದುರಂತದಲ್ಲಿ ಚಾಮರಾಜನಗರ ಜಿಲ್ಲೆಯ ಇಬ್ಬರು ಪ್ರವಾಸಿಗರು ಮೃತಪಟ್ಟಿರುವುದಕ್ಕೆ ವಿಷಾದ ಹಾಗೂ ಸಂತಾಪ ಸೂಚಿಸುತ್ತೇನೆ. ಘಟನೆಯಲ್ಲಿ ಗಾಯೊಂಡಿರುವವರು ಶೀಘ್ರ ಚೇತರಿಸಿಕೊಳ್ಳಲೆಂದೂ ದೇವರಲ್ಲಿ ಪ್ರಾರ್ಥಿಸುತ್ತೇನೆ. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಒದಗಿಸುವಂತೆ ಮತ್ತು ಘಟನೆಯ ಕುರಿತು ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ.