ಉಡುಪಿಯ ಪಂದುಬೆಟ್ಟು ಗ್ರಾಮದಲ್ಲಿ ಆಯೋಜಿಸಿದ್ದ 'ಆಶೀರ್ವಾದದ ದೀಪ' ಕಾರ್ಯಕ್ರಮವನ್ನು ತೇಜಾವತಿ ಉದ್ಘಾಟಿಸಿದರು. ನವೀನ್​ ಶೆಟ್​ಇ ಕುತ್ಯಾರು, ಯಶ್​ಪಾಲ್​ ಸುವರ್ಣ, ಪ್ರಮೋದ್​ ಮಧ್ವರಾಜ್​, ಉಮೇಶ್​ ಎ. ನಾಯ್ಕ್​, ಕೆ.ಉದಯಕುಮಾರ್​ ಶೆಟ್ಟಿ, ದಿನಕರ್​ ಶೆಟ್ಟಿ ಹೆರ್ಗ, ರೇಶ್ಮಾ ಉದಯ್​ ಶೆಟ್ಟಿ ಇತರರಿದ್ದರು. 
ಉಡುಪಿ

ನೊಂದವರ ಬದುಕಿಗೆ ಬೆಳಕಾದ ಪ್ರಧಾನಿ ಮೋದಿ

* 'ಆಯುಷ್ಮಾನ್​ ಭಾರತ' ಫಲಾನುಭವಿ ತೇಜಾವತಿ ಕೃತಜ್ಞತೆ

* ಜಿಲ್ಲಾ ಬಿಜೆಪಿಯಿಂದ "ಆಶೀರ್ವಾದದ ದೀಪ' ಅಭಿಯಾನ

ಉಡುಪಿ: ಆಮ ವಾತ ಕಾಯಿಲೆಗೆ ತುತ್ತಾಗಿ 23 ವರ್ಷದಿಂದ ನಡೆಯಲಾಗದ ಸ್ಥಿತಿಯಲ್ಲಿದ್ದ ನನಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ನೀಡಿದ 'ಆಯುಷ್ಮಾನ್​ ಭಾರತ' ಯೋಜನೆಯಡಿ ಮೂರೂವರೆ ಲಕ್ಷ ರೂ. ವೆಚ್ಚದಲ್ಲಿ ಮೊಣಕಾಲಿನ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡೆ. ಇದೀಗ ನಡೆದಾಡುತ್ತಿದ್ದು, ನಿತ್ಯಕರ್ಮ ನಿರ್ವಹಿಸಲು ಶಕ್ತಳಾಗಿದ್ದೇನೆ. ಬಾಳಿನಲ್ಲಿ ಭರವಸೆ ಕಳೆದುಕೊಂಡಿದ್ದ ನನ್ನ ಬದುಕಿಗೆ ಆಶಾಕಿರಣವಾಗಿ, ಆತ್ಮವಿಶ್ವಾಸ ತುಂಬಿದ ಪ್ರಧಾನಿ ಮೋದಿ ಅವರಿಗೆ ಭಗವಂತನು ದೀರ್ಘಾಯುಷ್ಯ ಮತ್ತು ಇನ್ನಷ್ಟು ಶ್ರೇಯಸ್ಸು ಅನುಗ್ರಹಿಸಲಿ ಎಂದು ಆಯುಷ್ಮಾನ್​ ಭಾರತ ಯೋಜನೆಯ ಫಲಾನುಭವಿ ತೇಜಾವತಿ ಹಾರೈಸಿದರು.
ಪ್ರಧಾನಿ ಮೋದಿ ಅವರ 76ನೇ ಜನ್ಮದಿನ ಹಾಗೂ 25 ವರ್ಷದ ಆಡಳಿತದ ನಿಮಿತ್ತ ಜಿಲ್ಲಾ ಬಿಜೆಪಿಯಂದ ಜಿಲ್ಲಾದ್ಯಂತ ಆಯೋಜಿಸಿರುವ 'ಸೇವಾ ಸಂಕಲ್ಪ ಅಭಿಯಾನ'ದ ನಿಮಿತ್ತ ಉಡುಪಿಯ ಅಂಬಲಪಾಡಿ ಗ್ರಾಪಂ ವ್ಯಾಪ್ತಿಯ ಪಂದುಬೆಟ್ಟು ನಿವಾಸಿ, 'ಆಯುಷ್ಮಾನ್​ ಭಾರತ' ಯೋಜನೆಯ ಫಲಾನುಭವಿ ತೇಜಾವತಿ ಅವರ ನಿವಾಸದಲ್ಲಿ ಗುರುವಾರ (ಸೆ.18) ಆಯೋಜಿಸಿದ್ದ 'ಆಶೀರ್ವಾದದ ದೀಪ' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ತಿಂಗಳ ಕಾಲ ಅಭಿಯಾನ
ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್​ ಶೆಟ್ಟಿ ಮಾತನಾಡಿ, ಸದಾ ಜನಹಿತ ಬಯಸುವ ಪ್ರಧಾನಿ ಮೋದಿ ರೂಪಿಸಿದ ಅನೇಕ ಜನಪರ ಯೋಜನೆಗಳು ಜಿಲ್ಲೆಯ ಸಾವಿರಾರು ಫಲಾನುಭವಿಗಳಿಗೆ ಬೆಳಕಾಗಿದೆ. ಹೀಗಾಗಿ ಯೋಜನೆ ಫಲಾನುಭವಿಗಳು, ಕಾರ್ಯಕರ್ತರು ಮತ್ತು ಅಭಿಮಾನಿಗಳು ಜಿಲ್ಲಾದ್ಯಂತ ತಮ್ಮ ಮನೆಗಳಲ್ಲಿ 'ಆಶೀರ್ವಾದದ ದೀಪ' ಬೆಳಗಿಸುವ ಮೂಲಕ ಮೋದಿ ಅವರಿಗೆ ಉತ್ತಮ ಅರೋಗ್ಯ ಮತ್ತು ಯಶಸ್ಸಿಗಾಗಿ ಪ್ರಾರ್ಥಿಸಿದ್ದಾರೆ. ಇದೊಂದು ಭಾವನಾತ್ಮಕ ಕ್ಷಣವಾಗಿದ್ದು, 1 ತಿಂಗಳ ಕಾಲ ಅಭಿಯಾನ ನಡೆಯಲಿದೆ ಎಂದರು.
ಸ್ಥಳೀಯ ಹಿರಿಯ ಕೃಷಿಕರಾದ ಕಮಲಾ ಪೂಜಾರ್ತಿ, ಕೃಷ್ಣಪ್ಪ ಬೆಲ್ಚಡ, ಸಿಆರ್​ಪಿಎಫ್​ ತರಬೇತಿ ಪಡೆದು ದೇಶಸೇವೆಗೆ ಸಜ್ಜಾಗಿರುವ ಯೋಧ ಕೃಷ್ಣ ಪಂದುಬೆಟ್ಟು ಅವರನ್ನು ಸನ್ಮಾನಿಸಲಾಯಿತು. ಅಭಿಯಾನದ ಜಿಲ್ಲಾ ಸಹ ಸಂಚಾಲಕ ಉಮೇಶ್​ ಎ. ನಾಯ್ಕ್​ ಪ್ರಾಸ್ತಾವಿಕವಾಗಿ ಮಾತನಾಡಿದರು.
ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ, ಎಸ್​ಐಆರ್​ ಮಂಗಳೂರು ವಿಭಾಗ ಸಂಚಾಲಕ ಕೆ.ಉದಯಕುಮಾರ್​ ಶೆಟ್ಟಿ, ಮಾಜಿ ಸಚಿವ ಪ್ರಮೋದ್​ ಮಧ್ವರಾಜ್​, ಸೇವಾ ಸಂಕಲ್ಪ ಅಭಿಯಾನದ ಜಿಲ್ಲಾ ಸಂಚಾಲಕ ದಿನಕರ್​ ಶೆಟ್ಟಿ ಹೆರ್ಗ, ಆಶೀರ್ವಾದ ದೀಪ ಕಾರ್ಯಕ್ರಮದ ಜಿಲ್ಲಾ ಪ್ರಮುಖ್​ ರೇಶ್ಮಾ ಉದಯ್​ ಶೆಟ್ಟಿ, ಎಸ್​ಐಆರ್​ ಜಿಲ್ಲಾ ಸಂಚಾಲಕ ಶ್ರೀಕಾಂತ್​ ನಾಯಕ್​, ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷೆ ನಳಿನಿ ಪ್ರದೀಪ್​ ರಾವ್​, ಜಿಲ್ಲಾ ಕೋಶಾಧಿಕಾರಿ ಪ್ರವೀಣಕುಮಾರ್​ ಶೆಟ್ಟಿ ಕಪ್ಪೆಟ್ಟು, ಜಿಲ್ಲಾ ಕಾರ್ಯದರ್ಶಿ ಶಿವಕುಮಾರ್​ ಅಂಬಲಪಾಡಿ, ಜಿಲ್ಲಾ ಮಾಧ್ಯಮ ಸಂಚಾಲಕ ಶಶಾಂಕ್​ ಶಿವತ್ತಾಯ, ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಉಷಾ ಪ್ರಕಾಶ್​ ಶೆಟ್ಟಿ, ಬಿಜೆಪಿ ಉಡುಪಿ ನಗರ ಉಪಾಧ್ಯಕ್ಷೆ ದಯಾಶಿನಿ, ಪಂದುಬೆಟ್ಟು ವಾರ್ಡ್​ ಅಧ್ಯಕ್ಷ ಸುಧೀರ್​ ಕುಮಾರ್​ ಹಾಗೂ ಪಕ್ಷದ ವಿವಿಧ ಮೋರ್ಚಾದ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.