ಕಪ್ಪು ತಲೆ ಹುಳ ಬಾಧೆಯಿಂದ ತೆಂಗಿನ ಮರಗಳು ಸಂಪೂರ್ಣ ಹಾನಿಗೊಂಡಿರುವುದು. 
ಉಡುಪಿ

ತೆಂಗಿಗೆ ಕಪ್ಪುತಲೆ ಹುಳ ಬಾಧೆ!

50 ಎಕರೆಗೂ ಅಧಿಕ ಪ್ರದೇಶಕ್ಕೆ ಹಾವಳಿ

ವಿಜಯವಾಣಿ ಸುದ್ದಿಜಾಲ ಕುಂದಾಪುರ

ಬೈಂದೂರು ತಾಲೂಕಿನ ಹಡವು ಗ್ರಾಮ, ಅತ್ತಿಕೋಣೆ, ಸೇನಾಪುರ ಗ್ರಾಮದ ಪಡುಕೋಣೆ ವ್ಯಾಪ್ತಿಯಲ್ಲಿನ ತೆಂಗಿನ ಮರಗಳು ಕಪ್ಪು ತಲೆ ಹುಳ ಬಾಧೆಯಿಂದ ಸಂಪೂರ್ಣ ಹಾನಿಗೊಳಗಾಗಿವೆ. 50 ಎಕರೆಗೂ ಅಧಿಕ ಪ್ರದೇಶಕ್ಕೆ ಈ ಹುಳ ಆವರಿಸಿದ್ದು, ನೂರಾರು ಮರಗಳು ಹಾನಿಗೊಳಗಾಗಿವೆ.

300ರಿಂದ 500ಕ್ಕೂ ಅಧಿಕ ತೆಂಗಿನ ಮರಗಳಲ್ಲಿ ಈ ಕೀಟ ಬಾಧೆ ಕಾಣಿಸಿಕೊಂಡಿದ್ದು, ಮರಗಳಲ್ಲಿ ಇರುವ ಗರಿಗಳು ಸಂಪೂರ್ಣ ಕರಟಿ, ಉದುರಿ ಹೋಗುತ್ತಿವೆ. ಹೊಸದಾಗಿ ಗರಿ ಮೂಡುತ್ತಿಲ್ಲ. ಹೊಸ ಫಲದ ಲಕ್ಷಣವೂ ಕಾಣುತ್ತಿಲ್ಲ, ಹಸುರಿನ ಅಂಶ ಸಂಪೂರ್ಣ ಮಾಯವಾಗಿದೆ. ಕನ್ನಡಕುದ್ರು ಪ್ರದೇಶದಲ್ಲಿ ಉಪ್ಪು ನೀರಿನ ಸಮಸ್ಯೆ ಹೆಚ್ಚಿದ್ದ ಪ್ರದೇಶವಾಗಿದ್ದು, ಈಗ ಈ ಪ್ರದೇಶಗಳು ಕೂಡ ಉಪ್ಪು ನೀರಿನ ಸಮಸ್ಯೆಯಿಂದ ತೊಂದರೆ ಅನುಭವಿಸುತ್ತಿವೆ. ಅದು ಕೂಡ ಒಂದು ಕಾರಣ ಆಗಿರಬಹುದು ಎಂದು ರೈತರು ಅಂದಾಜಿಸಿದ್ದಾರೆ.

ಸಮಸ್ಯೆಗೆ ಪರಿಹಾರ ಏನು?

ಒಂದು ಗರಿಯಲ್ಲಿ ಮೊದಲು ಕಾಣಿಸಿಕೊಂಡರೆ ಅದನ್ನು ತುಂಡು ಮಾಡಿ, ಸುಟ್ಟು ಹಾಕಿ. ಅದು ಆಗದಿದ್ದರೆ ಮೋನೋ ಕ್ರೋಟೋಪಾಸ್ ಅಥವಾ ಕ್ಲೋರ್ ಫೈರಿಫಾಜ್ ರಾಸಾಯನಿಕವನ್ನು 1 ಲೀ. ನೀರಿಗೆ 2 ಎಂಎಲ್ ಹಾಕಿ, ಅದನ್ನು ಗರಿಗಳಿಗೆ ಸಿಂಪಡಿಸಿ. ಇಡೀ ತೋಟಕ್ಕೂ ಸಿಂಪಡಣೆ ಮಾಡಬಹುದು. ಆಗ ಆ ಹುಳಗಳು ಶೇ.90ರಷ್ಟು ಸಾಯುತ್ತವೆ. ಇದರೊಂದಿಗೆ ಎಲ್ಲ ಮರಗಳಿಗೆ ಪೋಟ್ಯಾಶ್ ಕೊಡಬೇಕು(ಎಂಒಪಿ ಗೊಬ್ಬರ). ಒಂದೊಂದು ಮರಗಳಿಗೆ 23 ಕೆ.ಜಿ.ಯಷ್ಟು ಗೊಬ್ಬರವನ್ನು 1 ಮೀ. ದೂರದಲ್ಲಿ ಮರದ ಸುತ್ತ ಹಾಕಬೇಕು. ಅನಂತರ ತೆಳ್ಳಗೆ ನೀರು ಕೊಡಬೇಕು. ಹುಳ ಬಾಧೆ ಗಂಭೀರವಾಗಿದ್ದರೆ ಹುಳಗಳನ್ನು ತಿನ್ನುವ ಕೀಟ(ಪರತಂತ್ರ ಜೀವಿ)ಗಳನ್ನು 1 ಮರಕ್ಕೆ 12ರಂತೆ ಬಿಡಬೇಕು ಎಂದು ಕೃಷಿ ವಿಜ್ಞಾನಿ ಸಲಹೆ ನೀಡಿದ್ದಾರೆ.

ತೆಂಗಿನ ಮರದ ಗರಿಗಳ ನಡುವೆ ಕಪ್ಪು ತಲೆ ಹುಳ ಕಾಣಿಸಿಕೊಂಡಿರುವುದು.
ಹಡವು ಗ್ರಾಮದ ಅತ್ತಿಕೋಣೆ, ಪಡುಕೋಣೆ ಭಾಗದಲ್ಲಿ ಹತ್ತಾರು ಎಕರೆಗಳಲ್ಲಿರುವ ತೆಂಗಿನ ಮರಗಳಲ್ಲಿ ಈ ಹುಳ ಬಾಧೆ ಕಾಣಿಸಿಕೊಂಡಿದೆ. ಈ ಬಗ್ಗೆ ತೋಟಗಾರಿಕಾ ಇಲಾಖೆ ಅಧಿಕಾರಿಗಳಿಗೂ ತಿಳಿಸಿದ್ದೇವೆ. ಆದಷ್ಟು ಬೇಗ ತೋಟಗಾರಿಕಾ ಇಲಾಖೆ ಅಧಿಕಾರಿಗಳು ಸ್ಪಂದಿಸಬೇಕು. ಇಲ್ಲದಿದ್ದರೆ ಈ ಭಾಗದ ತೆಂಗು ಬೆಳೆಗಾರರ ಬದುಕು ಸರ್ವನಾಶ ಆಗಬಹುದು. ಈ ಭಾಗದ ಇನ್ನಷ್ಟು ಪ್ರದೇಶಗಳಿಗೂ ಹರಡುವ ಸಾಧ್ಯತೆ ಇದೆ.
ಟೋನ್ ಡಿಸೋಜ ಹಡವು ಗ್ರಾಮದ ತೆಂಗು ಬೆಳೆಗಾರ
ಈ ಹುಳ ಬಾಧೆಗೊಳಗಾದ ಮರಗಳು ಸಾಯುವುದಿಲ್ಲ. ಹುಳದ ಬಾಧೆ ಕಡಿಮೆಯಾದಾಗ ಚೇತರಿಕೆ ಕಾಣುತ್ತವೆ. ಗರಿ ಒಣಗಿ, ಇಳುವರಿ ಕಡಿಮೆಯಾಗುತ್ತದೆ. ಎಲ್ಲ ಗರಿ ಒಣಗಿದರೆ, ಗರಿಗಳು ಹಾಳಾದರೆ ಮರಗಳಲ್ಲಿ ಹಲವು ರೋಗ, ಸುಳಿ, ಸೊರಗು ರೋಗ ಸಹಿತ ಕೀಟ ಬಾಧೆ ಇನ್ನು ಜಾಸ್ತಿಯಾಗುತ್ತವೆ. ಗೊಬ್ಬರ ಹಾಕಿದರೆ, ಉತ್ತಮ ನಿರ್ವಹಣೆ ಮಾಡಿದರೆ ಒಳ್ಳೆಯ ಫಸಲು ಪಡೆಯಬಹುದು.
ಡಾ.ರೇವಣ್ಣ ರೇವಣ್ಣನವರ್ ಬ್ರಹ್ಮಾವರ ಕೃಷಿ ಕೇಂದ್ರದ ಕೀಟಶಾಸ್ತ್ರ ವಿಜ್ಞಾನಿ
ಕಳೆದ ಬಾರಿ ಕನ್ನಡಕುದ್ರು ಭಾಗದಲ್ಲಿ ಕಾಣಿಸಿಕೊಂಡಿದ್ದವು. ಕೃಷಿ ವಿಜ್ಞಾನಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇವೆ. ಯಾವ ಹಂತದಲ್ಲಿ ಇದೆ ಎಂಬುದನ್ನು ನೋಡಬೇಕು. ಅಲ್ಲಿ ಲೈಟ್ ಟ್ರಾಪ್ ವಿಧಾನ ಮಾಡಿದ್ದೆವು. ಅನಂತರ ಮಳೆಯಿಂದ ನಿಯಂತ್ರಣ ಆಗಿದೆ. ಇಲ್ಲಿಯೂ ಲೈಟ್ ಟ್ರಾಪ್ ವಿಧಾನ ಮಾಡಬಹುದು. ಪರತಂತ್ರ ಜೀವಿ ತರಿಸುವ ಬಗ್ಗೆ ಪ್ರಯತ್ನಿಸಲಾಗುವುದು.
ನಿಧೀಶ್ ಕೆ.ಜಿ. ಸಹಾಯಕ ನಿರ್ದೇಶಕ, ಉಡುಪಿ ತೋಟಗಾರಿಕಾ ಇಲಾಖೆ