ಉಡುಪಿಯ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ನವೀನ್ ಶೆಟ್ಟಿ ಕುತ್ಯಾರು ಮಾತನಾಡಿದರು. ಶಾಸಕ ಯಶ್ಪಾಲ್ ಸುವರ್ಣ, ಬಿಜೆಪಿ ಜಿಲ್ಲಾ ವಕ್ತಾರ ದಿವಾಕರ್ ಶೆಟ್ಟಿ, ಶ್ರೀನಿಧಿ ಹೆಗ್ಡೆ, ಶಿವಕುಮಾರ್ ಅಂಬಲಪಾಡಿ ಇದ್ದರು.
* ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ನವೀನ್ ಶೆಟ್ಟಿ ಕುತ್ಯಾರು ಎಚ್ಚರಿಕೆ
* ಕೂಡಲೇ ಅಗತ್ಯ ವೈದ್ಯರು, ಸಿಬ್ಬಂದಿ ಭರ್ತಿಗೆ ಆಗ್ರಹ
ಉಡುಪಿ: ಉಡುಪಿಯ ಅಜ್ಜರಕಾಡುನಲ್ಲಿರುವ ಉಡುಪಿ ಜಿಲ್ಲಾಸ್ಪತ್ರೆಯ ನೂತನ ಕಟ್ಟಡದ ಶೇ.90ರಷ್ಟು ಕಾಮಗಾರಿ ಮಗಿದು ಮೂರು ವರ್ಷವಾದರೂ ಅದನ್ನು ಪೂರ್ಣಗೊಳಿಸುವ ಇಚ್ಛಾಶಕ್ತಿ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಇಲ್ಲದಾಗಿದೆ. 2021ರಲ್ಲಿಯೇ ಕಾಮಗಾರಿ ಆರಂಭವಾಗಿದ್ದು ಇನ್ನೂ ಮುಗಿದಲಿಲ್ಲ. ಮೂರು ವಾರದೊಳಗೆ ಬಾಕಿ ಕಾಮಗಾರಿ ಪೂರ್ಣಗೊಳಿಸಿ ಆಸ್ಪತ್ರೆಯನ್ನು ಉದ್ಘಾಟಿಸಬೇಕು. ಇಲ್ಲದಿದ್ದಲ್ಲಿ ಸಾರ್ವಜನಿಕರ ಸಹಭಾಗಿತ್ವದಲ್ಲಿ ಪ್ರತಿಭಟನೆ ನಡೆಸಲಿದ್ದೇವೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ನವೀನ್ ಶೆಟ್ಟಿ ಕುತ್ಯಾರು ಎಚ್ಚರಿಕೆ ನೀಡಿದರು.
ಉಡುಪಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಂಗಳವಾರ (ಏ.7) ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಉಡುಪಿ ಜಿಲ್ಲೆಯಾಗಿ 29 ವರ್ಷ ಕಳೆದಿದೆ. ಆದರೂ 120 ಹಾಸಿಗೆಯ ತಾಲೂಕು ಮಟ್ಟದ ಆಸ್ಪತ್ರೆಯಾಗಿಯೇ ಉಳಿದಿದೆ. ಹೀಗಾಗಿ ಹೆಚ್ಚಿನ ಹಾಸಿಗೆ, ಐಸಿಯು ಸೌಲಭ್ಯವಿಲ್ಲದೆ ಬಡರೋಗಿಗಳು ಪರದಾಡುವ ಹೀನಾಯ ಸ್ಥಿತಿ ಉಂಟಾಗಿದೆ. ವೈದ್ಯಕೀಯ ಸಲಕರಣೆ ಖರೀದಿಗೆ ಕೂಡಲೇ ಅನುದಾನ ಹಾಗೂ ಕೊರತೆ ಇರುವ ವೈದ್ಯರು, ಸಿಬ್ಬಂದಿಯ ಹುದ್ದೆ ಭರ್ತಿಗೆ ಕ್ರಮ ಕೈಗೊಳ್ಳಬೇಕು ಎಂದರು.
ಆದಾಯ ಮಿತಿ ಹೆಚ್ಚಿಸಿ
ಆದಾಯ ಮಿತಿ ಹೆಚ್ಚಳದ ನೆಪದಿಂದ ಸಾಮಾಜಿಕ ಭದ್ರತಾ ಯೋಜನೆಯಡಿ ನೀಡುತ್ತಿರುವ ಮಾಸಾಶನ ನಿಲ್ಲಿಸಬೇಡಿ. ಕುಟುಂಬದ ವಾರ್ಷಿಕ ಆದಾಯ ಮಿತಿ 32 ಸಾವಿರ ರೂ. ಇದ್ದು ಅದನ್ನು 1.20 ಲಕ್ಷ ರೂ.ಗಳಿಗೆ ಹೆಚ್ಚಿಸಿ. ಸರ್ಕಾರದ ಅವೈಜ್ಞಾನಿಕ ನಿರ್ಧಾರದಿಂದ ರಾಜ್ಯದಲ್ಲಿ 24 ಲಕ್ಷ ಹಾಗೂ ಉಡುಪಿ ಜಿಲ್ಲೆಯಲ್ಲಿ 50 ಸಾವಿರಕ್ಕೂ ಅಧಿಕ ಜನರು ಪಿಂಚಣಿ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿಯೂ ಸಹ ಸೂಕ್ತ ಅಧಿಕಾರಿ, ಸಿಬ್ಬಂದಿಗಳಿಲ್ಲ. ಮೂರು ವರ್ಷಗಳ ಕಡತ ಬಾಕಿ ಇದ್ದು ಜನರು ಸರ್ಕಾರಿ ಕೆಲಸಕ್ಕೆ ಅಲೆದಾಡುತ್ತಿದ್ದಾರೆ. ಸರ್ಕಾರಿ ನಿವೇಶನದಲ್ಲಿ ಮನೆ ಕಟ್ಟಲೂ ಸಹ ಪರವಾನಗಿ ಲಭಿಸುತ್ತಿಲ್ಲ. ಸಾವಿರಾರು ಅರ್ಜಿಗಳಿಗೆ ಹಿಂಬರಹ ನೀಡುವ ಮೂಲಕ ಕಡತ ಕೊನೆಗಾಣಿಸುವ ಕಾರ್ಯ ಪ್ರಾಧಿಕಾರದಲ್ಲಿ ನಡೆಯುತ್ತಿದೆ ಎಂದು ನವೀನ್ ಶೆಟ್ಟಿ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ವಕ್ತಾರ ದಿವಾಕರ್ ಶೆಟ್ಟಿ, ಶ್ರೀನಿಧಿ ಹೆಗ್ಡೆ, ಶಿವಕುಮಾರ್ ಅಂಬಲಪಾಡಿ ಇದ್ದರು.
ಬಡವರ ಬದುಕಿನೊಂದಿಗೆ ಚೆಲ್ಲಾಟ ಆಡಬೇಡಿ