ಉಡುಪಿಯ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಅಭಿಯಾನದ ಪೂರ್ವಸಿದ್ಧತಾ ಸಭೆಯಲ್ಲಿ ಕುತ್ಯಾರು ನವೀನ್ ಶೆಟ್ಟಿ ಮಾತನಾಡಿದರು. ಶ್ರೀಕಾಂತ್ ನಾಯಕ್, ಮಹಾವೀರ ಹೆಗ್ಡೆ, ಕಮಲಾಕ್ಷ ಹೆಬ್ಬಾರ್, ಶಿವಕುಮಾರ್ ಅಂಬಲಪಾಡಿ ಇದ್ದರು.
* ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ನವೀನ್ ಶೆಟ್ಟಿ ಮಾಹಿತಿ
* ಕಾರ್ಯಕರ್ತರೊಂದಿಗೆ ಪೂರ್ವಸಿದ್ಧತಾ ಸಭೆ
ಉಡುಪಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಐತಿಹಾಸಿಕ ಸಾಧನೆಗಳೊಂದಿಗೆ ಜೂ.7ರಂದು 12 ವರ್ಷ ಪೂರೈಸಲಿದೆ. ತನ್ನಿಮಿತ್ತ ಜೂ.5ರಿಂದ 21ರ ವರೆಗೆ ಜಿಲ್ಲಾದ್ಯಂತ 'ವಿಶ್ವಾಸ, ಅಭಿವೃದ್ಧಿ ಮತ್ತು ಜನ ಕಲ್ಯಾಣದ 12 ವರ್ಷ' ಎಂಬ ಅಭಿಯಾನ ನಡೆಯಲಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಮಾಹಿತಿ ನೀಡಿದರು.
ಉಡುಪಿಯ ಕಡಿಯಾಳಿಯಲ್ಲಿರುವ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಂಗಳವಾರ (ಜೂ.2) ಆಯೋಜಿಸಿದ್ದ ಅಭಿಯಾನದ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿದರು.
ಗೋಪೂಜೆಯೊಂದಿಗೆ ಉದ್ಘಾಟನೆ
ಉಡುಪಿ ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ಜಿಲ್ಲಾ ರೈತ ಮೋರ್ಚಾ ಸಹಯೋಗದೊಂದಿಗೆ ಜೂ.5ರಂದು ಬೆಳಗ್ಗೆ 9:30ಕ್ಕೆ ನೀಲಾವರದ ಗೋಶಾಲೆಯಲ್ಲಿ ಅಭಿಯಾನದ ಉದ್ಘಾಟನೆ ನಡೆಯಲಿದೆ. ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ವಿ.ಸುನೀಲಕುಮಾರ್, ಗುರ್ಮೆ ಸುರೇಶ್ ಶೆಟ್ಟಿ, ಯಶ್ಪಾಲ್ ಸುವರ್ಣ, ಕಿರಣಕುಮಾರ್ ಕೊಡ್ಗಿ, ಗುರುರಾಜ್ ಗಂಟಿಹೊಳೆ ಹಾಗೂ ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್. ಪಾಟೀಲ್ ನಡಹಳ್ಳಿ ಅವರ ಉಪಸ್ಥಿತಿಯಲ್ಲಿ ಗೋಪೂಜೆಯೊಂದಿಗೆ ಅಭಿಯಾನ ಆರಂಭಗೊಳ್ಳಲಿದೆ ಎಂದರು.
ಅಭಿಯಾನದ ಜಿಲ್ಲಾ ಸಹ ಸಂಚಾಲಕ ಶಿವಕುಮಾರ್ ಅಂಬಲಪಾಡಿ ಮಾತನಾಡಿ, ಜಿಲ್ಲಾ, ಮಂಡಲ ಮತ್ತು ಬೂತ್ ಮಟ್ಟದಲ್ಲಿ ನಡೆಸಬೇಕಾಗಿರುವ ಅಭಿಯಾನದ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ನಾಯಕ್, ಅಭಿಯಾನದ ಜಿಲ್ಲಾ ಸಂಚಾಲಕ ಮಹಾವೀರ ಹೆಗ್ಡೆ, ಜಿಲ್ಲಾ ಪದಾಧಿಕಾರಿಗಳು, ಜಿಲ್ಲಾ ಮೋರ್ಚಾ ಹಾಗೂ ಮಂಡಲಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಜಿಲ್ಲಾ ಪ್ರಕೋಷ್ಠಗಳ ಸಂಯೋಜಕರು, ಅಭಿಯಾನದ ಮಂಡಲ ತಂಡದ ಸಂಚಾಲಕರು ಮತ್ತು ಸದಸ್ಯರು ಉಪಸ್ಥಿತರಿದ್ದರು.
ಅಭಿಯಾನದ ಜಿಲ್ಲಾ ಸಹ ಸಂಚಾಲಕ ಕಮಲಾಕ್ಷ ಹೆಬ್ಬಾರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಉಪಾಧ್ಯಕ್ಷೆ ನಳಿನಿ ಪ್ರದೀಪ್ ರಾವ್ ವಂದಿಸಿದರು.
ಹದಿನೇಳು ದಿನ ವಿವಿಧ ಕಾರ್ಯಕ್ರಮ
ಹದಿನೇಳು ದಿನದ ಅಭಿಯಾನದಲ್ಲಿ ಗಿಡ ನೆಡುವ ಕಾರ್ಯಕ್ರಮ, ಮಾಧ್ಯಮ ಸಂವಾದ, ವಿಶೇಷ ಸಂಪರ್ಕ ಅಭಿಯಾನ, ಸ್ವಚ್ಛತಾ ಅಭಿಯಾನ, ಪ್ರಗತಿ ಪಥ ಯಾತ್ರೆ, ವಿಕಸಿತ ಭಾರತ ಸಂಕಲ್ಪ ಸಮಾವೇಶ, ಸಭಾಂಗಣದ ಸಭೆ, ಕಲ್ಯಾಣ ಶಿಬಿರ, ಮೋದಿ ಸರ್ಕಾರದ ಸಾಧನೆಗಳ ಪ್ರದರ್ಶಿನಿ, ಸಾವಯವ ಕೃಷಿ ಕಾರ್ಯಾಗಾರ ಹಾಗೂ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ನಡೆಯಲಿದೆ.
ಅಭಿಯಾನದ ಉದ್ಘಾಟನೆಯಂದು 'ಏಕ್ ಪೇಡ್ ಮಾ ಕೆ ನಾಮ್' ಶೀರ್ಷಿಕೆಯಡಿ ಔಷಧೀಯ ಗಿಡ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನೂ ಆಚರಿಸಲಾಗುವುದು. ಅಲ್ಲದೆ, ಜಿಲ್ಲೆಯ ಎಲ್ಲ ಮಂಡಲ ಮತ್ತು ಬೂತ್ ಮಟ್ಟದಲ್ಲಿ ಗಿಡ ನೆಡುವ ಕಾರ್ಯಕ್ರಮ ನಡೆಯಲಿದೆ. ನಮ್ಮ ಎಲ್ಲ ಕಾರ್ಯಕರ್ತರು ಪಾಲ್ಗೊಂಡು ಈ ಅಭಿಯಾನ ಯಶಸ್ವಿಗೊಳಿಸಬೇಕು.
— ಕುತ್ಯಾರು ನವೀನ್ ಶೆಟ್ಟಿ. ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ.