ಬಿಜೆಪಿ ಒಬಿಸಿ ಮೋರ್ಚಾ ವತಿಯಿಂದ ನೀಡಿದ ದೂರಿನ ಪ್ರತಿಯನ್ನು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧಾಕರ ನಾಯ್ಕ ಸ್ವೀಕರಿಸಿದರು.
ಉಡುಪಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು "ಭಯೋತ್ಪಾದಕ" ಎಂದು ಕರೆದು ಅವಮಾನಿಸಿರುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ರ್ಖಗೆ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾ ಬಿಜೆಪಿ ಒಬಿಸಿ ಮೋರ್ಚಾ ವತಿಯಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ಸಲ್ಲಿಸಿದೆ.
ಒಬಿಸಿ ಮೋರ್ಚಾದ ಜಿಲ್ಲಾಧ್ಯಕ್ಷ ವಿಜಯ ಕೊಡವೂರು ಮಾತನಾಡಿ, ಪ್ರಧಾನಿ ಹುದ್ದೆ ಹಾಗೂ ದೇಶದ 140 ಕೋಟಿ ಜನರ ಭಾವನೆಗಳಿಗೆ ರ್ಖಗೆ ಘೋರ ಅವಮಾನ ಮಾಡಿದ್ದಾರೆ. ಸೋಲಿನ ಭೀತಿಯಿಂದ ಕಾಂಗ್ರೆಸ್ ಪಕ್ಷವು ಇಂತಹ ಅಸಂವಿಧಾನಿಕ ಮತ್ತು ದ್ವೇಷಪೂರಿತ ಹೇಳಿಕೆಗಳನ್ನು ನೀಡುತ್ತಿದೆ. ಇಂತಹ ಪ್ರಚೋದನಕಾರಿ ಮಾತುಗಳು ಸಮಾಜದಲ್ಲಿ ಸೌಹಾರ್ದತೆ ಕೆಡಿಸಿ ಅಶಾಂತಿ ಸೃಷ್ಟಿಸುವ ಉದ್ದೇಶ ಹೊಂದಿವೆ. "ಸಂವಿಧಾನಕ್ಕೆ ಗೌರವ ಕೊಡುವ ಯಾರು ಕೂಡ ಇಂತಹ ಪದಬಳಕೆಯನ್ನು ಸಹಿಸುವುದಿಲ್ಲ ಎಂದು ಹೇಳಿದರು.
ಒಬಿಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಐರೋಡಿ ವಿಠ್ಠಲ್ ಪೂಜಾರಿ, ಒಬಿಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಂದ್ರ ವರಂಗ, ಮತ್ತು ನಗರಸಭಾ ಮಾಜಿ ಅಧ್ಯಕ್ಷ ಪ್ರಭಾಕರ್ ಪೂಜಾರಿ, ಬಿಜೆಪಿ ಎಸ್ಟಿ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಉಮೇಶ್ ನಾಯ್ಕ್ ಚೆರ್ಕಡಿ, ನಗರ ಒಬಿಸಿ ಮೋರ್ಚಾ ಉಪಾಧ್ಯಕ್ಷ ಜಯಕರ್ ಆಚಾರ್ಯ ಮೊದಲಾದವರಿದ್ದರು.