ಬಿಜೆಪಿ ಕಾಸರಗೋಡು ಜಿಲ್ಲಾ ನಾಯಕತ್ವ ಶಿಬಿರವನ್ನು ವಿ.ಕೆ.ಸಜೀವನ್ ಉದ್ಘಾಟಿಸಿದರು. ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷೆ ಎಂ.ಎಲ್.ಅಶ್ವಿನಿ, ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ ಎಂ.ಸಂಜೀವ ಶೆಟ್ಟಿ ಮೊದಲಾದವರಿದ್ದರು.  
ಉಡುಪಿ

ಕೇರಳದಲ್ಲಿ ಬಿಜೆಪಿಯೇ ನೈಜ ಪ್ರತಿಪಕ್ಷ

ಕಾಸರಗೋಡು: ವಿಧಾನಸಭಾ ಚುನಾವಣೆಯೊಂದಿಗೆ ಕೇರಳದಲ್ಲಿ ಬಿಜೆಪಿ ಜನರ ಮನಸ್ಸಿನಲ್ಲಿ ಪ್ರಮುಖ ವಿಪಕ್ಷವಾಗಿ ಹೊರಹೊಮ್ಮಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಿಂದ ಆಕರ್ಷಿತರಾಗಿ ಹೊಸದಾಗಿ ಪಕ್ಷಕ್ಕೆ ಸೇರ್ಪಡೆಗೊಳ್ಳುವವರಿಗೆ ಪಕ್ಷದ ಸಿದ್ಧಾಂತ, ಕಾರ್ಯಸೂಚಿಗಳ ಬಗ್ಗೆ ತಿಳಿವಳಿಕೆ ಮೂಡಿಸುವ ಉದ್ದೇಶದಿಂದ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ಬಿಜೆಪಿ ರಾಜ್ಯ ಕೋಶ ಸಂಯೋಜಕ ವಿ.ಕೆ.ಸಜೀವನ್ ಹೇಳಿದರು.
ಬಿಜೆಪಿ ಕಾಸರಗೋಡು ಜಿಲ್ಲಾ ಕಚೇರಿ ಸಭಾಂಗಣದಲ್ಲಿ ಪಂಡಿತ್ ದೀನದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾ ಅಭಿಯಾನಕ್ಕೆ ಸಂಬಂಧಿಸಿದಂತೆ ಜಿಲ್ಲಾ ನಾಯಕತ್ವ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಆಡಳಿತಕ್ಕೇರಿದ ಒಂದೇ ತಿಂಗಳ ಅವಧಿಯೊಳಗೆ, ಕುಟುಂಬ ರಾಜಕಾರಣದಲ್ಲಿ ಎಡರಂಗವನ್ನು ಮೀರಿಸುವ ಸಾಧನೆಯನ್ನು ಐಕ್ಯರಂಗ ಮಾಡುತ್ತಿದೆ. ಎಡರಂಗ ಸರ್ಕಾರದ ಆಡಳಿತಾವಧಿಯಲ್ಲಿ ಸಚಿವರೊಬ್ಬರು ತನ್ನ ಸೊಸೆಯನ್ನು ಸರ್ಕಾರಿ ಸಿಬ್ಬಂದಿಯಾಗಿ ನೇಮಿಸಿಕೊಂಡಿದ್ದರೆ, ಐಕ್ಯರಂಗದ ಸಚಿವ ಈಗ ತನ್ನ ಅಳಿಯನನ್ನೇ ಅಡಿಷನಲ್ ಪ್ರೈವೇಟ್ ಸೆಕ್ರೆಟರಿಯಾಗಿ ನೇಮಿಸಿಕೊಂಡು ರಾಜ್ಯದ ಜನತೆಗೆ ದ್ರೋಹ ಬಗೆದಿದ್ದಾರೆ ಎಂದು ಟೀಕಿಸಿದರು.
ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷೆ ಎಂ.ಎಲ್.ಅಶ್ವಿನಿ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ ಎಂ.ಸಂಜೀವ ಶೆಟ್ಟಿ, ರಾಜ್ಯ ಸಮಿತಿ ಸದಸ್ಯ ಎ.ವೇಲಾಯುಧನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್.ಸುನೀಲ್, ರಾಜ್ಯ ಪರಿಷತ್ ಸದಸ್ಯ ಶಿವಕೃಷ್ಣ ಭಟ್, ಜಿಲ್ಲಾ ಕೋಶ ಸಂಯೋಜಕ ಸುಕುಮಾರ್ ಕುದ್ರೆಪ್ಪಾಡಿ ಉಪಸ್ಥಿತರಿದ್ದರು.