ಉಡುಪಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸಂಸ್ಥಾಪನಾ ದಿನದ ನಿಮಿತ್ತ ಪಕ್ಷದ ಹಿರಿಯರನ್ನು ಸನ್ಮಾನಿಸಲಾಯಿತು. ಕುತ್ಯಾರು ನವೀನ್ ಶೆಟ್ಟಿ, ಯಶ್ಪಾಲ್ ಸುವರ್ಣ, ದಿನಕರ್ ಶೆಟ್ಟಿ ಹೆರ್ಗ, ಶ್ರೀಕಾಂತ್ ನಾಯಕ್ ಅಲೆವೂರು, ದಿನಕರ್ ಬಾಬು, ಕುಯಿಲಾಡಿ ಸುರೇಶ್ ನಾಯಕ್, ಸತ್ಯಾನಂದ್ ನಾಯಕ್ ಇದ್ದರು.
* ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಆಶಯ
* ಬಿಜೆಪಿ ಸಂಸ್ಥಾಪನಾ ದಿನ ಆಚರಣೆ
ಉಡುಪಿ: ಭಾರತೀಯ ಜನತಾ ಪಾರ್ಟಿಯು ವಿಶ್ವದಲ್ಲೇ 'ನಂಬರ್ ಒನ್' ಪಕ್ಷವಾಗಿ ಗುರುತಿಸಿಕೊಂಡಿದ್ದು, ನಾವೆಲ್ಲರೂ ಅಂತಹ ಪಕ್ಷದಲ್ಲಿದ್ದೇವೆ ಎಂಬ ಹೆಮ್ಮಯಿದೆ. ಬಿಜೆಪಿ ಇಂದು ಈ ಮಟ್ಟದಲ್ಲಿ ಬೆಳೆಯಲು, ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವವೇ ಮೆಚ್ಚುವಂತಹ ಆಡಳಿತ ನೀಡುವಲ್ಲಿ ಪಕ್ಷವನ್ನು ತಳಮಟ್ಟದಲ್ಲಿ ಬೆಳೆಸಿದ ಹಿರಿಯರ ತ್ಯಾಗ ಹಾಗೂ ಪರಿಶ್ರಮವೇ ಕಾರಣ. ಹಿರಿಯರ ಕೊಡುಗೆ, ಪಕ್ಷದ ಸಿದ್ಧಾಂತ, ಬದ್ಧತೆ ಕಿರಿಯರಿಗೆ ಪ್ರೇರಣೆಯಾಗಬೇಕು ಎಂದು ಶಾಸಕ ಯಶ್ಪಾಲ್ ಆಶಯ ವ್ಯಕ್ತಪಡಿಸಿದರು.
ಉಡುಪಿಯ ಕಡಿಯಾಳಿಯಲ್ಲಿರುವ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸೋಮವಾರ (ಏ.6) ಆಯೋಜಿಸಿದ್ದ ಬಿಜೆಪಿ ಸಂಸ್ಥಾಪನಾ ದಿನ ಸಮಾರಂಭದಲ್ಲಿ ಮಾತನಾಡಿದರು.
ಪಕ್ಷದ ಹಿರಿಯರಿಗೆ ಗೌರವ
ಸಂಸ್ಥಾಪನಾ ದಿನದ ನಿಮಿತ್ತ ಪಕ್ಷದ ಹಿರಿಯ ಕಾರ್ಯಕರ್ತರಾದ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೆ.ಟಿ. ಪೂಜಾರಿ ಕೊಡವೂರು, ಕಾಳು ಶೇರಿಗಾರ್ ಕೊಡವೂರು, ದಯಾನಂದ ನಾಯಕ್ ಮಣಿಪಾಲ, ಬಿ.ರಮಾನಾಥ ಹೆಗ್ಡೆ ಹೆರ್ಗ, ಹೆರಿಯ ಅಮ್ಮುಂಜೆ ಇವರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಭಾರತ ಮಾತೆ, ಪಂಡಿತ್ ದೀನ ದಯಾಳ್ ಉಪಾಧ್ಯಾಯ ಹಾಗೂ ಶ್ಯಾಮ ಪ್ರಸಾದ್ ಮುಖರ್ಜಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ನಾಯಕ್ ಅಲೆವೂರು ವಂದೇ ಮಾತರಂ ಗೀತೆ ಹಾಡಿದರು.
ಮಾಜಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ರಾಜ್ಯ ಎಸ್ಸಿ ಮೋರ್ಚಾ ಉಪಾಧ್ಯಕ್ಷ ದಿನಕರ್ ಬಾಬು, ಬಿಜೆಪಿ ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಸತ್ಯಾನಂದ್ ನಾಯಕ್, ಪಕ್ಷದ ಪ್ರಮುಖರು, ಜಿಲ್ಲಾ ಮೋರ್ಚಾ, ಪ್ರಕೋಷ್ಠ, ಮಂಡಲಗಳ ಸಹಿತ ವಿವಿಧ ಸ್ತರದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
ಶ್ರೀನಿಧಿ ಹೆಗ್ಡೆ ಸ್ವಾಗತಿಸಿದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನಕರ್ ಶೆಟ್ಟಿ ಹೆರ್ಗ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಿರೀಶ್ ಎಂ. ಅಂಚನ್ ವಂದಿಸಿದರು. ಶಿವಕುಮಾರ್ ಅಂಬಲಪಾಡಿ ಕಾರ್ಯಕ್ರಮ ನಿರೂಪಿಸಿದರು.
ವಿಶ್ವವೇ ನಿಬ್ಬೆರಗಾಗಿ ನೋಡುವ ರೀತಿಯಲ್ಲಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಶ್ರೇಷ್ಠ ಆಡಳಿತ ನಡೆಸುತ್ತಿದೆ. ಬಿಜೆಪಿಯ ಆಚಾರ, ವಿಚಾರ, ಸಿದ್ಧಾಂತ ಅರಿತು ಯುವಜನರು ಪಕ್ಷದಲ್ಲಿ ಹೆಚ್ಚು ತೊಡಗಿಕೊಳ್ಳಬೇಕು. ಏ.12ರ ವರೆಗೆ ಪಕ್ಷದ ಸಂಸ್ಥಾಪನಾ ದಿನದ ಆಚರಣೆ, ಬೂತ್ ಮಟ್ಟದಲ್ಲಿ ಹಿರಿಯರನ್ನು ಗೌರವಿಸಲಾಗುವುದು.