ನೀಲಾವರದ ಗೋಶಾಲೆಯಲ್ಲಿ ಬಿಜೆಪಿಯ 'ವಿಶ್ವಾಸ-ಅಭಿವೃದ್ಧಿ ಮತ್ತು ಜನ ಕಲ್ಯಾಣದ 12 ವರ್ಷಗಳು' ಅಭಿಯಾನವನ್ನು ಗಿಡ ನೆಡುವ ಮೂಲಕ ಕುತ್ಯಾರು ನವೀನ್​ ಶೆಟ್ಟಿ ಚಾಲನೆ ನೀಡಿದರು. ಯಶ್​ಪಾಲ್​ ಸುವರ್ಣ, ಕಿರಣಕುಮಾರ್​ ಕೊಡ್ಗಿ, ಗುರ್ಮೆ ಸುರೇಶ್​ ಶೆಟ್ಟಿ, ಗುರುರಾಜ್​ ಗಂಟಿಹೊಳೆ, ಶಿಲ್ಪಾ ಜಿ. ಸುವರ್ಣ, ಕಮಲಾಕ್ಷ ಹೆಬ್ಬಾರ್​, ಶ್ರೀಕಾಂತ್​ ನಾಯಕ್​, ರಾಜೀವ್​ ಕುಲಾಲ್​, ಮಹಾವೀರ ಹೆಗ್ಡೆ ಇತರರಿದ್ದರು. 
ಉಡುಪಿ

ನಿರಂತರ ಕಾರ್ಯದಿಂದ ಗುರಿ ಮುಟ್ಟಲು ಸಾಧ್ಯ

* ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್​ ಶೆಟ್ಟಿ ಅಭಿಮತ

* 'ವಿಶ್ವಾಸ-ಅಭಿವೃದ್ಧಿ, ಜನ ಕಲ್ಯಾಣದ 12 ವರ್ಷ' ಅಭಿಯಾನ 

ಉಡುಪಿ: ಬಿಜೆಪಿ ಕೇವಲ ಪ್ರಚಾರಕ್ಕಾಗಿ ಅಥವಾ ವರದಿಗಾಗಿ ಕಾರ್ಯಕ್ರಮ ಮಾಡುವುದಿಲ್ಲ. ರಾಷ್ಟ್ರೀಯ ವಿಚಾರಧಾರೆ ಮತ್ತು ಪಕ್ಷದ ತತ್ವ ಸಿದ್ಧಾಂತಗಳಡಿ ಶೃದ್ಧೆ ಮತ್ತು ಬದ್ಧತೆಯಿಂದ ಅಭಿಯಾನಗಳನ್ನೆಲ್ಲ  ಯಶಸ್ವಿಗೊಳಿಸುತ್ತದೆ. ವಿರಮಿಸದೆ ಕೈಗೊಳ್ಳುವ ಕಾರ್ಯದಿಂಧ ಮಾತ್ರ ಗುರಿ ಮುಟ್ಟಲು ಸಾಧ್ಯ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್​ ಶೆಟ್ಟಿ ಅಭಿಪ್ರಾಯಪಟ್ಟರು.
ಜಿಲ್ಲಾ ಬಿಜೆಪಿ ನೇತೃತ್ವ ಹಾಗೂ ಜಿಲ್ಲಾ ರೈತ ಮೋರ್ಚಾ ಸಹಯೋಗದಲ್ಲಿ ನೀಲಾವರದ ಗೋಶಾಲೆಯಲ್ಲಿ ಶುಕ್ರವಾರ (ಜೂ.5) ಆಯೋಜಿಸಿದ್ದ ಜೂ.5ರಿಂದ 21ರ ವರೆಗೆ ಜಿಲ್ಲಾದ್ಯಂತ ನಡೆಯಲಿರುವ ಬಿಜೆಪಿಯ 'ವಿಶ್ವಾಸ-ಅಭಿವೃದ್ಧಿ ಮತ್ತು ಜನ ಕಲ್ಯಾಣದ 12 ವರ್ಷಗಳು' ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಹೆಮ್ಮೆಯ ಪ್ರಧಾನಿ ಮೋದಿ
ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಮಾತನಾಡಿ, 2014ರ ಮೊದಲು ದೇಶದಲ್ಲಿ ಎಂತಹ ಆರ್ಥಿಕ ಸಂಕಷ್ಟದ ಪರಿಸ್ಥಿತಿ ಇತ್ತೆಂದು ಜನತೆಗೆ ತಿಳಿದಿದೆ. ಆ ಬಳಿಕ ಎಲ್ಲರ ಆಶಾಕಿರಣವಾಗಿ ಮೂಡಿಬಂದ ವಿಶ್ವ ನಾಯಕ ಪ್ರಧಾನಿ ನರೇಂದ್ರ ಮೋದಿ ಎಲ್ಲ ಸವಾಲುಗಳನ್ನು ಸ್ವೀಕರಿಸಿ, ಐತಿಹಾಸಿಕ ಸಾಧನೆಯೊಂದಿಗೆ ಆರ್ಥಿಕತೆಯಲ್ಲಿ ದೇಶವನ್ನು 3ನೇ ಸ್ಥಾನಕ್ಕೇರಿಸಿದರು. ಜೂ.10ರಂದು ಅವರು ದೇಶದ ಸುದೀರ್ಘ ಅವಧಿಯ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗುತ್ತಿರುವುದು ಹೆಮ್ಮೆಯ ವಿಚಾರ. ಒಗ್ಗಟ್ಟು ಮತ್ತು ಸಂಘಟಿತ ಪ್ರಯತ್ನದಿಂದ ಮುಂದಿನ ಎಲ್ಲ ಚುನಾವಣೆಗಳಲ್ಲಿ ಬಿಜೆಪಿಯ ವಿಜಯ ಪತಾಕೆ ಬಾನೆತ್ತರಕ್ಕೆ ಹಾರಿಸೋಣ ಎಂದರು.
ಹಿರಿಯ ಕೃಷಿಕರಿಗೆ ಸನ್ಮಾನ
ಗೋಪೂಜೆಯೊಂದಿಗೆ ಔಷಧೀಯ ಗಿಡಗಳನ್ನು ನೆಡುವ ಮೂಲಕ ವಿಶ್ವ ಪರಿಸರ ದಿನ ಹಾಗೂ 'ಏಕ್​ ಪೇಡ್​ ಮಾ ಕೆ ನಾಮ್​' ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಗ್ರಾಮಾಂತರ ಮಂಡಲ ವ್ಯಾಪ್ತಿಯ 12 ಕೃಷಿಕರನ್ನು ಸನ್ಮಾನಿಸಲಾಯಿತು.
ಶಾಸಕರಾದ ಕಿರಣಕುಮಾರ್​ ಕೊಡ್ಗಿ, ಗುರ್ಮೆ ಸುರೇಶ್​ ಶೆಟ್ಟಿ, ಗುರುರಾಜ್​ ಗಂಟಿಹೊಳೆ, ಮಹಿಳಾ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್​ ನಾಯಕ್​, ಉಡುಪಿ ಗ್ರಾಮಾಂತರ ಮಂಡಲಾಧ್ಯಕ್ಷ ರಾಜೀವ್​ ಕುಲಾಲ್​, ಅಭಿಯಾನದ ಜಿಲ್ಲಾ ಸಂಚಾಲಕ ಮಹಾವೀರ ಹೆಗ್ಡೆ, ಸಹ ಸಂಚಾಲಕರಾದ ಶಿವಕುಮಾರ್​ ಅಂಬಲಪಾಡಿ, ಅನಿತಾ ಶ್ರೀಧರ್​, ಪಕ್ಷದ ಪ್ರಮುಖರು, ಬಿಜೆಪಿ ಜಿಲ್ಲಾ, ಮೋರ್ಚಾ, ಪ್ರಕೋಷ್ಠ, ಮಂಡಲಗಳ ಸಹಿತ ವಿವಿಧ ಸ್ಥರದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
ಜಿಲ್ಲಾ ರೈತ ಮೋರ್ಚಾ ಉಪಾಧ್ಯಕ್ಷ ಮೋಹನ್​ ಚಂದ್ರ ಸ್ವಾಗತಿಸಿದರು. ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ, ಅಭಿಯಾನದ ಜಿಲ್ಲಾ ಸಹ ಸಂಚಾಲಕ ಕಮಲಾಕ್ಷ ಹೆಬ್ಬಾರ್​ ಪ್ರಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಶ್ಯಾಮ್​ ಪ್ರಸಾದ್​ ಭಟ್​ ಕಾರ್ಯಕ್ರಮ ನಿರೂಪಿಸಿದರು. ಪುಷ್ಪರಾಜ್​ ಶೆಟ್ಟಿ ವಂದಿಸಿದರು.
"

ಜಿಲ್ಲಾ ಬಿಜೆಪಿಯಲ್ಲಿ ಹೊಸ ತಂಡ ರಚನೆಯಾಗಿದೆ. ಟೀಕೆಗಳಿಗೆ ಉತ್ತಮ ಕೆಲಸದ ಮೂಲಕ ಉತ್ತರ ನೀಡೋಣ. ಸಂಪರ್ಕ, ಪ್ರವಾಸ ಮತ್ತು ಸಭೆಗಳಿಗೆ ಒತ್ತು ನೀಡಿ ಪಕ್ಷದ ಸಂಘಟನಾತ್ಮಕ ಚಟುವಟಿಕೆಗಳು ನಡೆಯಬೇಕು. ಎಲ್ಲರೂ ಒಂದಾಗಿ ಪಕ್ಷದ ಸಂಕಲ್ಪ, ಉದ್ದೇಶವನ್ನು ಈಡೇರಿಸಿ ಬಿಜೆಪಿಯನ್ನು ಇನ್ನಷ್ಟು ಸದೃಢಗೊಳಿಸೋಣ. ಸಂಘಟಿತ ಪರಿಶ್ರಮದಿಂದ ಈ ಅಭಿಯಾನ ಯಶಸ್ವಿಗೊಳಿಸೋಣ.

— ಕುತ್ಯಾರು ನವೀನ್​ ಶೆಟ್ಟಿ. ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ.