ವ್ಯಾಟಿಕನ್​ ಸಿಟಿಯಲ್ಲಿ ಪೋಪ್​ ಲಿಯೋ ಅವರನ್ನು ಉಡುಪಿ ಧರ್ಮಪ್ರಾಂತ್ಯದ ಬಿಷಪ್​ ಡಾ. ಲೆಸ್ಲಿ ಸಿ. ಡಿಸೋಜಾ ಭೇಟಿಯಾಗಿ ಆಶೀರ್ವಾದ ಪಡೆದರು. 
ಉಡುಪಿ

ಪೋಪ್​ ಲಿಯೋ ಭೇಟಿಯಾದ ಉಡುಪಿ ಬಿಷಪ್​ ಡಾ. ಲೆಸ್ಲಿ

* ಧರ್ಮಪ್ರಾಂತ್ಯದ ಪಾಲಕಿ ಮಿಲಾಗ್ರಿಸ್​ ಮಾತೆಯ ಪ್ರತಿಮೆ ನೀಡಿ ಗೌರವ

ಉಡುಪಿ: ಉಡುಪಿ ಕಥೊಲಿಕ್​ ಧರ್ಮಪ್ರಾಂತ್ಯದ ನೂತನ ಅಧ್ಯಕ್ಷ ಅತಿ ವಂ.ಡಾ. ಲೆಸ್ಲಿ ಕ್ಲಿಫರ್ಡ್​ ಡಿಸೋಜಾ ಅವರು ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಕ್ರೈಸ್ತ ಜಗದ್ಗುರು ಪೋಪ್​ ಲಿಯೋ- XIV ಅವರನ್ನು ವ್ಯಾಟಿಕನ್​ ನಗರದಲ್ಲಿ ಗುರುವಾರ (ಸೆ.10) ಭೇಟಿಯಾಗಿ ಆಶೀರ್ವಾದ ಪಡೆದರು.
ವಿಶ್ವದ ಎಲ್ಲ ನೂತನ ಬಿಷಪ್​ಗಳನ್ನು ಭೇಟಿಯಾದ ಪೋಪ್​ ಲಿಯೋ, ಬಳಿಕ ಪ್ರತ್ಯೇಕವಾಗಿ ಪ್ರತಿ ಧರ್ಮಪ್ರಾಂತ್ಯದ ಅಧ್ಯಕ್ಷರೊಂದಿಗೆ ಮಾತುಕತೆ ನಡೆಸಿದರು.
ಉಡುಪಿ ಅಧ್ಯಕ್ಷ ಬಿಷಪ್​ ಡಾ.ಲೆಸ್ಲಿ ಅವರು ಧರ್ಮಪ್ರಾಂತ್ಯದ ಪರವಾಗಿ ಪೋಪ್​ ಅವರಿಗೆ ಶಾಲು ಹಾಗೂ ಧರ್ಮಪ್ರಾಂತ್ಯದ ಪಾಲಕಿಯಾದ ಮಿಲಾಗ್ರಿಸ್​ ಮಾತೆಯ ಪ್ರತಿಮೆ ನೀಡಿ ಗೌರವಿಸಿ ಉಡುಪಿ ಜಿಲ್ಲೆಯ ಪರವಾಗಿ ಶುಭಾಶಯ ಕೋರಿದರು.
ಉಡುಪಿ ಧರ್ಮಪ್ರಾಂತ್ಯದ ಮಾಹಿತಿ ಪಡೆದ ಪೋಪ್​, ಉಡುಪಿ ಹಾಗೂ ಭಾರತದ ಧರ್ಮಸಭೆಗೆ ತಮ್ಮ ಆಶೀರ್ವಾದ ತಿಳಿಸಿದರು. ಲೆಸ್ಲಿ ಅವರು ಈ ವೇಳೆ ಪವಿತ್ರ ಧರ್ಮಸಭೆ ಹಾಗೂ ಪೋಪ್​ ಲಿಯೋ ಅವರಿಗೆ ಉಡುಪಿ ಧರ್ಮಪ್ರಾಂತ್ಯದ ಕ್ರೈಸ್ತ ವಿಶ್ವಾಸಿಗಳ ಪರವಾಗಿ ಪ್ರಾರ್ಥನೆಯ ಭರವಸೆ ನೀಡಿದರು.