ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್ ಮಹಾಯೋಗಿ ವೇಮನ ಹಾಗೂ ಅಂಬಿಗರ ಚೌಡಯ್ಯರ ಜಯಂತಿ ಆಚರಣೆ ಉದ್ಘಾಟಿಸಿದರು.
ಉಡುಪಿ: ಹನ್ನೆರಡನೆಯ ಶತಮಾನವನ್ನು ವಚನ ಕ್ರಾಂತಿಯುಗ ಎನ್ನಲಾಗುತ್ತಿದ್ದು, ಅಂದಿನ ಕಾಲಘಟ್ಟದಲ್ಲಿ ಶಿವಶರಣೆಯರು ಸಮಾಜದಲ್ಲಿ ಆಳವಾಗಿ ಬೇರೂರಿದ್ದ ಜಾತೀಯತೆ, ಅಸಮಾನತೆಯನ್ನು ತೊಲಗಿಸಲು ತಮ್ಮದೇ ಶೈಲಿಯಲ್ಲಿ ಸರಳ ರೂಪದಲ್ಲಿ ವಚನಗಳನ್ನು ರಚಿಸುವ ಮೂಲಕ ಜನಸಾಮಾನ್ಯರು ಸನ್ಮಾರ್ಗದಲ್ಲಿ ನಡೆಯಲು ದಾರಿ ತೋರಿದ್ದಾರೆ. ಶಿವಶರಣರು ಪ್ರತಿಪಾದಿಸಿದ ವಚನ ಸಾರಗಳು ಸಮಾಜದಲ್ಲಿ ಇಂದಿಗೂ ಪ್ರಸ್ತುತವಾಗಿದೆ ಎಂದು ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್ ಹೇಳಿದರು.
ವಳಕಾಡು ಸರಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಡೆದ ಮಹಾಯೋಗಿ ವೇಮನ ಹಾಗೂ ಅಂಬಿಗರ ಚೌಡಯ್ಯರ ಜಯಂತಿ ಆಚರಣೆ ಉದ್ಘಾಟಿಸಿ ಮಾತನಾಡಿದರು.
ಸಮ ಸಮಾಜ ನಿಮಾರ್ಣವನ್ನು ಪ್ರತಿಪಾದಿಸಿದ ಅಂಬಿಗರ ಚೌಡಯ್ಯ ಹಾಗೂ ಮಹಾಯೋಗಿ ವೇಮನ ಆದರ್ಶಗಳು ಇಂದಿಗೂ ಸಮಾಜಕ್ಕೆ ಮಾದರಿಯಾಗಿ ಉಳಿದಿದೆ. ಶಿವಶರಣರ ವಚನಗಳ ಸಾರವನ್ನು ಬದುಕಿನಲ್ಲಿ ಅಳವಡಿಸಿಕೊಂಡಲ್ಲಿ ನಮ್ಮಲ್ಲಿ ಅಡಗಿರುವ ಅಜ್ಞಾನದ ಕತ್ತಲನ್ನು ಹೋಗಲಾಡಿಸಿಕೊಂಡು ಸನ್ಮಾರ್ಗದ ಹಾದಿಯಲ್ಲಿ ಸಾಗಬಹುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಮಾತನಾಡಿ, ಅಂಬಿಗರ ಚೌಡಯ್ಯ ಜಾತೀಯತೆ, ಮೌಢ್ಯತೆ, ವಿರೋಧಿಸಿದ್ದರು. ವಿಭಿನ್ನ ವ್ಯಕ್ತಿತ್ವದ ಶ್ರೇಷ್ಠ ವಚನಕಾರರಾದ ಇವರ ತತ್ವ ಆದರ್ಶಗಳು ಇಂದಿಗೂ ಪ್ರಸ್ತುತವಾಗಿದೆ. ಹಾಗೆಯೇ ಸಮಾಜದಲ್ಲಿ ಕವಿದಿದ್ದ ಅಂಧಕಾರ ತೊಡೆದುಹಾಕಲು ಜ್ಞಾನದ ದೀವಿಗೆ ಹಿಡಿದು ಸಮಾಜ ಸುಧಾರಣೆಗೆ ಅವಿರತ ಶ್ರಮ ವಹಿಸಿ ಸಮಾಜ ಸುಧಾರಕರಾದ ಮಹಾಯೋಗಿ ವೇಮನ ರಂತಹ ಮಹನೀಯರುಗಳ ಆದರ್ಶಗಳು ಪ್ರತಿಯೊಬ್ಬರಿಗೂ ದಾರಿದೀಪವಾಗಿದೆ ಎಂದರು.
ನಿವೃತ್ತ ಉಪನ್ಯಾಸಕಿ ನಳಿನಾದೇವಿ ಎಂ.ಆರ್ ಉಪನ್ಯಾಸ ನೀಡಿ, ಶರಣರು ನಿಷ್ಠುರವಾಗಿ, ನೇರ ನುಡಿಯ ಮೂಲಕ ಮೊನಚು ಮಾತುಗಳಲ್ಲಿ ಸಾಮಾಜಿಕ ಸ್ಥಿತಿಗತಿ, ಶೋಷಿತ ತಾರತಮ್ಯವನ್ನು ಹೋಗಲಾಡಿಸಲು ಶ್ರಮಿಸುವ ಮೂಲಕ ಜನರಲ್ಲಿ ಧೈರ್ಯ ತುಂಬುವ ಕೆಲಸ ಮಾಡಿದ್ದರು. ನದಿ ದಾಟಿಸುವ ಕೆಲಸ ನಿರ್ವಹಿಸುತ್ತ ಶಿವನ ಆರಾಧಕರಾಗಿ ಲಿಂಗಪೂಜೆ ಮಾಡುತ್ತಿದ್ದ ಅಂಬಿಗರ ಚೌಡಯ್ಯರ ವಚನಗಳ ಸಂದೇಶಗಳು ತಪ್ಪಿತಸ್ಥರಿಗೆ ಬುದ್ಧಿ ಕಲಿಸುವ ಹಾಗಿವೆ. ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದಲ್ಲಿ ಸ್ಥಾನ ಪಡೆದಿದ್ದ ಇವರ ಹೆಸರಿನಲ್ಲಿ ಇಂದಿಗೂ ಉತ್ತರ ಕರ್ನಾಟಕದ ಕೆಲವು ಭಾಗಗಳ ಗವಿ, ಮಠಗಳಲ್ಲಿ ಪೂಜೆ ಪುನಸ್ಕಾರಗಳು ನಡೆಯುತ್ತಿವೆ ಎಂದರು.
ಆಂದ್ರಪ್ರದೇಶದ ಕವಿ, ಮಹಾಯೋಗಿ ವೇಮನರು ಜನತಾ ಕವಿಯಾಗಿ ಸಮಾಜದ ಜನರ ಮನೋಭಾವನೆಯಲ್ಲಿ ಬದಲಾವಣೆ ತರಲು ಪ್ರಯತ್ನಿಸಿದರು. ಅವರ ತತ್ವಪದಗಳು ಕೇವಲ ಸಾಹಿತ್ಯವಾಗಿ ಉಳಿಯದೇ ಸಾಮಾಜಿಕ ಪರಿವರ್ತನೆಯ ಘೋಷಣೆಗಳಾಗಿದ್ದವು ಎಂದರು.
ಸಂಸತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ವರ್ಷಾ ಬಿ. ಕೋಟ್ಯಾನ್ ನಿರೂಪಿಸಿ, ವಳಕಾಡು ಸರ್ಕಾರಿ ಸಂಯುಕ್ತ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಕೆ. ಪೂರ್ಣಿಮಾ ವಂದಿಸಿದರು.