ಉಡುಪಿ ಡಿಸಿ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಸ್ವರೂಪಾ ಟಿ.ಕೆ. ಮಾತನಾಡಿದರು. ಡಾ. ಗಣನಾಥ ಶೆಟ್ಟಿ ಎಕ್ಕಾರು, ಎಸ್​.ಎಸ್​. ಕಾದ್ರೊಳ್ಳಿ, ಮಹಾಂತೇಶ ಹಂಗರಗಿ, ಅನಂತ ಶಂಕರ ಬಿ., ರಾಕೇಶ ಫ್ರಾನ್ಸಿಸ್​ ವಿಕ್ಟರ್​, ಅಶೋಕ ಭಟ್​, ಡಾ. ರೋಷನ್​ ಶೆಟ್ಟಿ ಇದ್ದರು.  
ಉಡುಪಿ

ಯುವಜನರ ಸಬಲೀಕರಣಗೊಳಿಸಲಿ 'ಭಾರತ್​ ಜೋಡೋ' ಸಂಘ

* ಉಡುಪಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಸೂಚನೆ

* ಸಂಘದ ಮಾರ್ಗದರ್ಶಕರಿಗೆ ಕಾರ್ಯಾಗಾರ

ಉಡುಪಿ: ಯುವ ಜನರಲ್ಲಿ ಕ್ರೀಡೆ, ಸಂಸ್ಕೃತಿ, ವೈಜ್ಞಾನಿಕ ಮನೋಭಾವ, ಸಾಮಾಜಿಕ ಸಾಮರಸ್ಯ ಉತ್ತೇಜಿಸಲು ರಾಜ್ಯ ಸರ್ಕಾರದ ಮಾರ್ಗದರ್ಶನದಂತೆ ಭಾರತ್​ ಜೋಡೋ ಯುವ ಸಂಘ ಸ್ಥಾಪಿಸಲಾಗುತ್ತಿದೆ. ಜಿಲ್ಲೆಯಲ್ಲಿ ಸದಸ್ಯತ್ವದ ನೋಂದಣಿ ಪ್ರಕ್ರಿಯೆ ಹಾಗೂ ಸಮಿತಿ ರಚಿಸಿ ಯುವಜನರನ್ನು ಸಬಲೀಕರಣಗೊಳಿಸಿ ತಳಮಟ್ಟದ ಆಡಳಿತದಲ್ಲಿ ಸಕ್ರಿಯ ಪಾಲುದಾರರನ್ನಾಗಿ ಮಾಡಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಸೂಚಿಸಿದರು.

ಉಡುಪಿ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿರುವ ಅಟಲ್​ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ ವತಿಯಿಂದ ಭಾರತ್​ ಜೋಡೋ ಯುವ ಸಂಘದ ಮಾರ್ಗದರ್ಶಕರಿಗೆ ಗುರುವಾರ(ನ.19) ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿದರು.

ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಮಾತನಾಡಿದರು.

ತಹಸೀಲ್ದಾರರಿಗೆ ಜವಾಬ್ದಾರಿ

ಯುವಜನರಲ್ಲಿ ನಾಯಕತ್ವದ ಗುಣ ಬೆಳಡಸುವುದು ಈ ಸಂಟನೆಯ ಉದ್ದೇಶ. ಗ್ರಾಪಂ ಹಾಗೂ ನಗರ ವ್ಯಾಪ್ತಿಯಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಸಂಘ ಸ್ಥಾಪಿಸುವ ಗುರಿ ಹೊಂದಲಾಗಿದೆ. ಹೀಗಾಗಿ ಸಂಘಗಳ ನೋಂದಣಿ ಕಾರ್ಯದಲ್ಲಿ ಮಾರ್ಗದರ್ಶಕರ ಜವಾಬ್ದಾರಿ ಹೆಚ್ಚಿದೆ. ಪ್ರತಿ ಯುವ ಸಂಘವೂ ಸರ್ಕಾರದ ಮಾರ್ಗಸೂಚಿಯಂತೆಯೇ ನೋಂದಣಿಯಾಗಬೇಕಿದ್ದು, ವ್ಯಾಪ್ತಿಯ ತಹಸೀಲ್ದಾರರು ಮೇಲ್ವಿಚಾರಣೆ ನಡೆಸಬೇಕು. ಈಗಾಗಲೇ ನೋಂದಣಿಯಾದ ಸಂಘಗಳನ್ನು ಕ್ಯೂಆರ್​ ಕೋಡ್​ ಮೂಲಕ ಅಪ್ಲೋಡ್​ ಮಾಡಬೇಕು ಮಾರ್ಗದರ್ಶಕರು, ಮಾಸ್ಟರ್​ ತರಬೇತುದಾರರು ತ್ವರಿತವಾಗಿ ಕಾರ್ಯ ಕೈಗೊಳ್ಳಬೇಕು ಎಂದರು.

ಸಮಾಜಮುಖಿ ಚಟುವಟಿಕೆ

ಜಿಲ್ಲಾ ಕೋ-ಆರ್ಡಿನೇಟರ್​ ಡಾ. ಗಣನಾಥ ಶೆಟ್ಟಿ ಎಕ್ಕಾರು ಮಾತನಾಡಿ, ಗ್ರಾಮೀಣ ಮತ್ತು ನಗರದ 16-35 ವರ್ಷದೊಳಗಿನ ಯುವಜನರನ್ನು ಸದಸ್ಯರಾಗಿ ನೋಂದಣಿ ಮಾಡಿಕೊಳ್ಳಲಾಗುವುದು. ಕ್ರೀಡೆ, ಆರೋಗ್ಯಕರ ಜೀವನ ಶೈಲಿ, ನಾಯಕತ್ವದ ಗುಣ ಬೆಳೆಸುವುದು ಸೇರಿದಂತೆ ಸಮಾಜಮುಖಿ ವಿವಿಧ ಚಟುವಟಿಕೆ ಕೈಗೊಳ್ಳಲು ಸಂಘ ಸ್ಥಾಪಿಸಲಾಗುತ್ತಿದೆ ಎಂದರು.

ಜಿಪಂ ಉಪ ಕಾರ್ಯದರ್ಶಿ ಎಸ್​.ಎಸ್​. ಕಾದ್ರೊಳ್ಳಿ, ನಗರಸಭಾ ಆಯುಕ್ತ ಮಹಾಂತೇಶ ಹಂಗರಗಿ, ತಹಸೀಲ್ದಾರರಾದ ಅನಂತ ಶಂಕರ ಬಿ., ರಾಕೇಶ ಫ್ರಾನ್ಸಿಸ್​ ವಿಕ್ಟರ್​, ಅಶೋಕ ಭಟ್​, ಮಾಸ್ಟರ್​ ತರಬೇತುದಾರರು ಹಾಗೂ ಮೆಂಟರ್ಸ್​ ಉಪಸ್ಥಿತರಿದ್ದರು.

ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಷನ್​ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ಪ್ರತಿ ಸಂಘದಲ್ಲಿ 15 ಸದಸ್ಯರನ್ನು ಒಳಗೊಂಡ ಆಂತರಿಕ ಕಾರ್ಯಕಾರಿ ಸಮಿತಿ ಇರಲಿದೆ. ಅದರಲ್ಲಿ ಅಧ್ಯಕ್ಷ, ಉಪಾಧ್ಯಕ್ಷ, ಖಜಾಂಜಿ ಹಾಗೂ 12 ಸದಸ್ಯರು ಇರಲಿದ್ದಾರೆ. ಮೀಸಲಾತಿಗೆ ಅನುಗುಣವಾಗಿ ಸಮಿತಿ ರಚಿಸಬೇಕು. ಸಂಘಗಳಿಗೆ ಸರ್ಕಾರದಿಂದ ವಾರ್ಷಿಕ ತಲಾ 10 ಲಕ್ಷ ರೂ. ಅನುದಾನ ಲಭಿಸಲಿದೆ. ಸಾಮಾಜಿಕಸೇವೆ, ಪರಿಸರ, ಜಲ ಸಂರಕ್ಷಣೆ, ಆರೋಗ್ಯ, ಸ್ವಚ್ಛತೆ ಹಾಗೂ ವಿವಿಧ ಸಮಾಜಮುಖಿ ಕಾರ್ಯಗಳಲ್ಲಿ ಸಂಗಳು ತೊಡಗಿಕೊಳ್ಳಲಿವೆ.
ಸ್ವರೂಪಾ ಟಿ.ಕೆ. ಉಡುಪಿ ಜಿಲ್ಲಾಧಿಕಾರಿ.